ಬೆಂಗಳೂರು/ಮಂಗಳೂರು/ಉಡುಪಿ/ಶಿವಮೊಗ್ಗ: ಶಿವಮೊಗ್ಗದಲ್ಲಿ ಕಳೆದ ಸೆಪ್ಟೆಂಬರ್ ೧೯ರಂದು ಬೆಳಕಿಗೆ ಬಂದ ಉಗ್ರಗಾಮಿ ಚಟುವಟಿಕೆಗಳಿಗೆ (Shivamogga terror) ಸಂಬಂಧಿಸಿ ತೀವ್ರ ತನಿಖೆಯನ್ನು ನಡೆಸುತ್ತಿರುವ ಎನ್‌ಐಎ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಗುರುವಾರ ಮಂಗಳೂರಿನ ಪಿಎ ಎಂಜಿನಿಯರಿಂಗ್ ಕಾಲೇಜಿಗೆ ದಾಳಿ ನಡೆಸಿ ಉಡುಪಿ ಮೂಲದ ವಿದ್ಯಾರ್ಥಿ ರೇಶಾನ್ ತಾಜುದ್ದೀನ್ ಶೇಖ್‌ನನ್ನು ಬಂಧಿಸಿದ್ದ ಎನ್‌ಐಎ, ಶಿವಮೊಗ್ಗದಲ್ಲಿ ಹುಜೇರ್ ಫರಾನ್ ಬೇಗ್ ಎಂಬಾತನನ್ನು ವಶಕ್ಕೆ ಪಡೆದಿದೆ.
ಸೆಪ್ಟೆಂಬರ್ ೧೯ರಂದು ಬೆಳಕಿಗೆ ಬಂದ ಶಿವಮೊಗ್ಗ ಟೆರರ್ ಚಟುವಟಿಕೆಗೆ ಸಂಬಂಧಿಸಿ ಮಂಗಳೂರಿನ ಎಂಜಿನಿಯರಿಂಗ್ ಪದವೀಧರ ಮಾಜ್ ಮುನೀರ್ ಮತ್ತು ಶಿವಮೊಗ್ಗದ ಸೈಯದ್ ಯಾಸಿನ್‌ನ್ನು ಬಂಧಿಸಲಾಗಿತ್ತು. ಅಂದು ಇವರೆಲ್ಲರ ಹಿಂದಿನ ಷಡ್ಯಂತ್ರಗಾರ ತೀರ್ಥಹಳ್ಳಿ ನಿವಾಸಿ ಮೊಹಮ್ಮದ್ ಶಾರಿಕ್ ತಪ್ಪಿಸಿಕೊಂಡಿದ್ದ. ಮುಂದೆ ನವೆಂಬರ್ ೧೯ರಂದು ಸಂಜೆ ಮಂಗಳೂರಿನ ನಾಗುರಿ ಬಳಿ ಕುಕ್ಕರ್ ಬ್ಲಾಸ್ಟ್ ಮಾಡಲು ಹೋಗುತ್ತಿದ್ದಾಗ ಅದು ರಿಕ್ಷಾದಲ್ಲೇ ಸ್ಫೋಟಿಸಿ ಮೊಹಮ್ಮದ್ ಶಾರಿಕ್ ಸಿಕ್ಕಿಬಿದ್ದಿದ್ದ. ಈಗ ಆತ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎನ್‌ಐಎ ಅಧಿಕಾರಿಗಳು ಆತನನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಅಂದು ಶಿವಮೊಗ್ಗ ಟೆರರ್ ಪ್ರಕರಣ ಬೆಳಕಿಗೆ ಬಂದಾಗ ಶಾರಿಕ್, ಮಾಜ್ ಮುನೀರ್ ಮತ್ತು ಸೈಯದ್ ಯಾಸಿನ್ ತಂಡ ಶಿವಮೊಗ್ಗ ಗುರುಪುರದಲ್ಲಿರುವ ತುಂಗಾ ತೀರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನಾವೂರು ಬಳಿ ನೇತ್ರಾವತಿ ತೀರದಲ್ಲಿ ಟ್ರಯಲ್ ಬಾಂಬ್ ಬ್ಲಾಸ್ಟ್ ನಡೆಸಿದ್ದ ಬಗ್ಗೆ ಕುರುಹುಗಳು ಸಿಕ್ಕಿದ್ದವು.
ನಾಲ್ಕು ಕಡೆಗಳಲ್ಲಿ ದಾಳಿ
ಈ ಪ್ರಕರಣದ ಬೆನ್ನು ಹತ್ತಿದ್ದ ಎನ್‌ಐಎ ಅಧಿಕಾರಿಗಳಿಗೆ ಇದರಲ್ಲಿ ಇನ್ನೂ ಹಲವರು ಭಾಗಿಯಾಗಿರುವುದು ತಿಳಿದುಬಂದಿದ್ದು, ಅದರಂತೆ ಶುಕ್ರವಾರ ಮಂಗಳೂರು, ಉಡುಪಿ, ಶಿವಮೊಗ್ಗ, ಬೆಂಗಳೂರುಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಇಬ್ಬರನ್ನು ಬಂಧಿಸಿದರು.
ಬಂಧನದಲ್ಲಿರುವ ಮಂಗಳೂರು ಮೂಲದ ಮಾಜ್ ಮುನೀರ್‌ನ ವಿಚಾರಣೆ ವೇಳೆ ಉಡುಪಿಯ ರೇಶಾನ್ ತಾಜೂದ್ದೀನ್ ಶೇಕ್ ಮತ್ತು ಶಿವಮೊಗ್ಗ ಜಿಲ್ಲೆಯ ಹುಝೇರ್ಬೇ ಫರ್ಹಾನ್ ಗ್ ಮಾಹಿತಿ ದೊರಕಿತ್ತು. ಇವರಿಬ್ಬರೂ ಐಸಿಎಸ್‌ನ ಸಕ್ರಿಯ ಕಾರ್ಯಕರ್ತರು ಎನ್ನುವ ಪ್ರಾಥಮಿಕ ಮಾಹಿತಿಯೂ ಎನ್‌ಐಎ ಅಧಿಕಾರಿಗಳಿಗೆ ಸಿಕ್ಕಿದ್ದು, ಹೆಚ್ಚಿನ ವಿಚಾರಣೆ ನಡೆಯಬೇಕಾಗಿದೆ.
ಇವರಿಬ್ಬರ ಪಾಲುದಾರಿಕೆ ಏನು?
ಮಂಗಳೂರಿನ ಪಿಎ ಕಾಲೇಜಿನಲ್ಲಿ ಅಂತಿಮ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಉಡುಪಿ ವಾರಂಬಳ್ಳಿಯ ರೇಷಾನ್ ತಾಜುದ್ದೀನ್ ಮತ್ತು ಶಿವಮೊಗ್ಗದ ಫರ್ಹಾನ್ ಬೇಗ್ ಇಬ್ಬರೂ ಐಸಿಸ್ ಹ್ಯಾಂಡ್ಲರ್ಸ್ ಜತೆ ಸಂಪರ್ಕ ಹೊಂದಿದ್ದು, ಅವರಿಂದ ಕ್ರಿಫ್ಟೋ ವ್ಯಾಲೆಟ್ ಗೆ ಹಣ ಪಡೆಯುತ್ತಿದ್ದರು ಎಂದು ಆರೋಪಿಸಲಾಗಿದೆ.
ದೊಡ್ಡ ಮಟ್ಟದ ದುಷ್ಕೃತ್ಯ ಮತ್ತು ಚಟುವಟಿಕೆ ನಡೆಸುವವರಿಗೆ ಹಣ ಒದಗಿಸಿದ ಆರೋಪ ಇವರ ಮೇಲಿದೆ. ಇವರಿಬ್ಬರ ಮನೆಗೆ ದಾಳಿ ಮಾಡಿದ ಸಂದರ್ಭದಲ್ಲಿ ಡಿಜಿಟಲ್ ಡಿವೈಸಸ್ ಮತ್ತು ಹಲವು ದಾಖಲೆಗಳು ವಶಕ್ಕೆ ಪಡೆಯಲಾಗಿದೆ.
ಇವರ ಟಾರ್ಗೆಟ್ ಯಾವುದು?
ದೊಡ್ಡ ದೊಡ್ಡ ಲಿಕ್ಕರ್ ಶಾಪ್, ಗೋಡಾನ್ ಗಳು ಹಾಗೂ ಟ್ರಾನ್ಸ್‌ಫಾರ್ಮರ್‌ಗಳಿಗೆ ಬೆಂಕಿ ಹಚ್ಚಲು ಇವರು ಟಾರ್ಗೆಟ್ ಮಾಡಿದ್ದರು. ದೇಶದ ಏಕತೆ, ಸಾರ್ವಭೌಮತೆ ಮತ್ತು ಭದ್ರತೆಗೆ ಧಕ್ಕೆ ಉಂಟು ಮಾಡಲು ಸಂಚು ಮಾಡಿದ್ದರು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಬ್ರಹ್ಮಾವರದ ವಾರಂಬಳ್ಳಿಯಲ್ಲಿ ಶಂಕಿತ ವಿದ್ಯಾರ್ಥಿ ರೇಶಾನ್ ಶೇಖ್ ಮನೆಯ ಮಹಜರು