Site icon Vistara News

NIA Raid: ತಲೆಮರೆಸಿಕೊಂಡಿದ್ದ ಎಲ್‌ಟಿಟಿಇ ಶಂಕಿತ ಉಗ್ರನನ್ನು ಬಂಧಿಸಿದ ಎನ್‌ಐಎ

NIA Raids 14 places in punjab and Haryana

ಬೆಂಗಳೂರು: ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್‌ಟಿಟಿಇ ಶಂಕಿತ ಉಗ್ರನನ್ನು ತಮಿಳುನಾಡಿನ ಥೇಣಿ ಜಿಲ್ಲೆಯಲ್ಲಿ ಬೆಂಗಳೂರಿನ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ. 2021ರಲ್ಲಿ ಮಂಗಳೂರಿಗೆ ಶ್ರೀಲಂಕಾದ 38 ಪ್ರಜೆಗಳನ್ನು ಅಕ್ರಮವಾಗಿ ಕರೆಸಿಕೊಂಡ ಹಿನ್ನೆಲೆಯಲ್ಲಿ ಎನ್‌ಐಎ ಪ್ರಕರಣ ದಾಖಲಿಸಿಕೊಂಡಿತ್ತು. ಇದೀಗ ಶಂಕಿತ ಉಗ್ರ ಎನ್‌ಐಎ (NIA Raid) ಬಲೆಗೆ ಬಿದ್ದಿದ್ದಾನೆ.

ಮೊಹಮ್ಮದ್ ಇಮ್ರಾನ್ ಖಾನ್ ಬಂಧಿತ ಆರೋಪಿ. ಎಲ್‌ಟಿಟಿಇ ನಾಯಕ ವೇಲು ಪಿಳ್ಳೈ ಪ್ರಭಾಕರನ್ ಹತ್ಯೆ ಬಳಿಕ ಸಂಘಟನೆಯ ಉಗ್ರರಿಗೆ ಆರೋಪಿ ಆಶ್ರಯ ಕೊಡಿಸುತ್ತಿದ್ದ. ಶ್ರೀಲಂಕಾದಿಂದ 38 ಮಂದಿಯನ್ನು ತಮಿಳುನಾಡಿಗೆ ಕರೆತಂದು, ಅಲ್ಲಿಂದ ಬೆಂಗಳೂರಿಗೆ, ನಂತರ ಮಂಗಳೂರಿನ ವಿವಿಧೆಡೆ ಅವರನ್ನು ಕಳುಹಿಸಿದ್ದ. ಬಳಿಕ ಅವರನ್ನು ಕೆನಡಾಗೆ ಹಡಗಿನಲ್ಲಿ ಕಳುಹಿಸಲು ಪ್ಲಾನ್‌ ಮಾಡಿದ್ದ. ಆದರೆ ಗುಪ್ತಚರ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ, ಶ್ರೀಲಂಕಾ ಪ್ರಜೆಗಳನ್ನು ಬಂಧಿಸಿದ್ದರು.

ಬಳಿಕ ಎನ್‌ಐಎ ಕಾರ್ಯಾಚರಣೆ ನಡೆಸಿ ಎಲ್‌ಟಿಟಿಇಯ ಐದು ಮಂದಿಯನ್ನು ಬಂಧಿಸಿತ್ತು. ಆದರೆ, ಮೊಹಮ್ಮದ್ ಇಮ್ರಾನ್ ಖಾನ್ ತಪ್ಪಿಸಿಕೊಂಡಿದ್ದ. ಇದೀಗ ತಮಿಳುನಾಡಿನಲ್ಲಿ ಆತ ಕೂಡ ಸಿಕ್ಕಿಬಿದ್ದಾನೆ. ಆರೋಪಿ ಶ್ರೀಲಂಕಾ ಪ್ರಜೆಯಾಗಿದ್ದು, 10 ವರ್ಷಗಳ ಹಿಂದೆಯೇ ದೇಶಕ್ಕೆ ಬಂದು ನೆಲೆಸಿದ್ದ.

ಇದನ್ನೂ ಓದಿ | Assault Case : ಇಬ್ಬರನ್ನು ಅಪಹರಿಸಿ ಮನಬಂದಂತೆ ಥಳಿಸಿದ ಅಕ್ರಮ ಮರಳು ದಂಧೆಕೋರರು!

ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ; ಅಪರಾಧಿಗೆ ಮರಣ ದಂಡನೆ ಶಿಕ್ಷೆ

ಹಾವೇರಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ್ದ ಅಪರಾಧಿಗೆ ಮರಣ ದಂಡನೆ ಶಿಕ್ಷೆ ಹಾಗೂ 1.5 ಲಕ್ಷ ರೂ.ದಂಡ ವಿಧಿಸಿ ಹಾವೇರಿ ಜಿಲ್ಲಾ ಅಧಿಕ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. 2019ರಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ನ್ಯಾಯಾಧೀಶ ನಿಂಗೌಡ ಪಾಟೀಲ್ ಅವರು ಮರಣ ದಂಡನೆ ಶಿಕ್ಷೆ ವಿಧಿಸಿದ್ದಾರೆ.

ಆರೋಪಿ ಶೆಟ್ಟಪ್ಪ ಬಸಪ್ಪ ವಡ್ಡರ್‌ ಮರಣ ದಂಡನೆ ಶಿಕ್ಷೆಗೊಳಗಾದ ಅಪರಾಧಿ. ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯ ಖುರ್ಸಾಪುರ ಗ್ರಾಮದಲ್ಲಿ 2019ರ ಮೇ 6ರಂದು ವಿವಾಹ ಸಮಾರಂಭಕ್ಕೆ ಕುಟುಂಬದ ಜತೆ 7 ವರ್ಷದ ಬಾಲಕಿ ಆಗಮಿಸಿದ್ದಳು. ಆಗ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದಾಗ ಆರೋಪಿ ಶೆಟ್ಟಪ್ಪ ಬಸಪ್ಪ ವಡ್ಡರ್‌ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಹಾಗೆಯೇ ಬಿಟ್ಟರೆ ಆ ವಿಷಯವನ್ನು ಬಹಿರಂಗ ಮಾಡಬಹುದು ಎಂದು ಬಾಲಕಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ.

ಪ್ರಕರಣ ಸಂಬಂಧ ಬಾಲಕಿ ತಂದೆ ನೀಡಿದ ದೂರಿನ ಮೇರೆಗೆ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಿಗ್ಗಾಂವಿ ವೃತ್ತದ ತನಿಖಾಧಿಕಾರಿ ಸಿಪಿಐ ಆರ್.ಎಫ್ ದೇಸಾಯಿ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದಲ್ಲಿ ಕುರಡಿಕೇರಿ ಗ್ರಾಮದ ಶೆಟ್ಟಪ್ಪ ಬಸಪ್ಪ ವಡ್ಡರ್‌ ವಿರುದ್ಧ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ನಿಂಗೌಡ ಪಾಟೀಲ್‌ ಅವರು, ಅಪರಾಧಿಗೆ ಮರಣ ದಂಡನೆ ಶಿಕ್ಷೆ ಮತ್ತು 1.5 ಲಕ್ಷ ರೂ.ಗಳ ದಂಡ ವಿಧಿಸಿದ್ದಾರೆ.

ಇದನ್ನೂ ಓದಿ | ಲವ್‌ ಮಾಡಿ ಮನೆ ಬಿಟ್ಟು ಹೋದ ಮಗಳು; ಮನನೊಂದು ಮರಕ್ಕೆ ನೇಣು ಬಿಗಿದುಕೊಂಡ ಅಪ್ಪ!

ದಂಡದ ಹಣದಲ್ಲಿ ಮೃತ ಬಾಲಕಿಯ ಪಾಲಕರಿಗೆ 75 ಸಾವಿರ ರೂ. ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ರಾಜ್ಯ ಸರ್ಕಾರದಿಂದ ಮೃತ ಬಾಲಕಿಯ ಪಾಲಕರಿಗೆ ರೂ. 10 ಲಕ್ಷ ಪರಿಹಾರ ನೀಡಬೇಕೆಂದು ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿಜಯಕುಮಾರ ಶಂಕರಗೌಡ ಪಾಟೀಲ್ ಅವರು ವಾದ ಮಂಡಿಸಿದ್ದರು.

Exit mobile version