ಮಂಗಳೂರು: ಮಂಗಳೂರಿನಲ್ಲಿ ನವೆಂಬರ್ ೧೯ರ ಸಂಜೆ ೪.೩೦ರ ಸುಮಾರಿಗೆ ಸಂಭವಿಸಿದ ಸ್ಫೋಟದ (ಮಂಗಳೂರು ಸ್ಫೋಟ) ರೂವಾರಿ ತೀರ್ಥಹಳ್ಳಿ ಸೊಪ್ಪಿನಗುಡ್ಡೆಯ ಮೊಹಮ್ಮದ್ ಶಾರಿಕ್ ಈ ಹಿಂದೆ ಬೆಂಗಳೂರಿನ ದಾಸರಹಳ್ಳಿಯಲ್ಲಿ ವಾಸವಾಗಿದ್ದ ಎಂಬ ಮಾಹಿತಿ ಇದ್ದು, ಅಲ್ಲೀಗ ಪೊಲೀಸರು ಮಾಹಿತಿ ಸಂಗ್ರಹಕ್ಕೆ ಶುರು ಮಾಡಿದ್ದಾರೆ. ಜತೆಗೆ ಅಮೃತಹಳ್ಳಿಯ ಸಂಬಂಧಿಕರ ಮನೆಗೂ ಹೋಗಿಬರುತ್ತಿದ್ದ ಎಂದು ಹೇಳಲಾಗಿದೆ.
ಶಾರಿಕ್ ವಿರುದ್ಧ ಇರುವ ಟ್ರಯಲ್ ಬ್ಲಾಸ್ಟ್, ರಾಷ್ಟ್ರ ಧ್ವಜ ಸುಟ್ಟ ಪ್ರಕರಣದ ತನಿಖೆಯನ್ನು ಎನ್‌ಐಎ ಕೈಗೆತ್ತಿಕೊಂಡಿದೆ. ೨೦೨೧ರ ಸೆಪ್ಟೆಂಬರ್‌ನಲ್ಲಿ ಗೋಡೆಬರಹ ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಗೊಂಡಿದ್ದ ಶಾರಿಕ್ ಬಳಿಕವೂ ತನ್ನ ದುಷ್ಕೃತ್ಯಗಳನ್ನು ಮುಂದುವರಿಸಿದ್ದ. ಮಂಗಳೂರಿನ ಮಾಜ್ ಮುನೀರ್, ಶಿವಮೊಗ್ಗದ ಮೊಹ್ಸಿನ್ ಜತೆ ಸೇರಿ ಬಾಂಬ್ ತಯಾರಿ ಕೃತ್ಯದಲ್ಲಿ ತೊಡಗಿದ್ದ. ಅವುಗಳನ್ನು ಶಿವಮೊಗ್ಗ ತುಂಗಾ ತೀರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನೇತ್ರಾವತಿ ನದಿಯಲ್ಲಿ ಟ್ರಯಲ್ ಸ್ಫೋಟಕ್ಕೆ ಗುರಿ ಮಾಡಿದ್ದ. ಈ ವೇಳೆ ರಾಷ್ಟ್ರ ಧ್ವಜವನ್ನೂ ಸುಟ್ಟು ಹಾಕಿದ್ದ ಆರೋಪವಿದೆ.
ಇದೆಲ್ಲದಕ್ಕಿಂತ ಮೊದಲೇ ಶಾರಿಕ್‌ಗೆ ಅವನದೇ ಊರಿನವನಾದ ಅಬ್ದುಲ್ ಮತೀನ್ ಖಾನ್ ತಾಹಾ ಎಂಬ ಉಗ್ರ ಸಂಘಟನೆಯ ಕಾಲಾಳುವಿನ ಜತೆ ಸಂಪರ್ಕವಿತ್ತು. ಮೆಕ್ಯಾನಿಕಲ್ ಎಂಜಿನಿಯರ್ ಆಗಲೆಂದು ಬೆಂಗಳೂರಿನ ಕಾಲೇಜು ಸೇರಿದ್ದ ಮತೀನ್ ಖಾನ್ ಎರಡೇ ವರ್ಷದಲ್ಲಿ ಎಂಜಿನಿಯರಿಂಗ್ ಬಿಟ್ಟು ಉಗ್ರ ಕೃತ್ಯಗಳತ್ತ ಮುಖ ಮಾಡಿದ್ದ. ಮುಂದಿನ ದಿನಗಳಲ್ಲಿ ಆತ ತನ್ನದೇ ಊರಿನವನಾದ ಶಾರಿಕ್‌ನನ್ನು ಕೂಡಾ ಇಂಥಹುದೇ ಜಾಲಕ್ಕೆ ಸಿಕ್ಕಿಸಲು ಪ್ಲಾನ್ ಮಾಡಿದ್ದ. ಆ ಸಂದರ್ಭದಲ್ಲಿ ಮತೀನ್‌ನನ್ನು ಭೇಟಿಯಾಗಲೆಂದು ಶಾರಿಕ್ ಬೆಂಗಳೂರಿಗೆ ಬರುತ್ತಿದ್ದ ಎನ್ನಲಾಗಿದೆ. ಹಾಗೆ ಬಂದವನು ಉಳಿದುಕೊಳ್ಳುತ್ತಿದ್ದುದು ದಾಸರಹಳ್ಳಿಯ ಮತೀನ್ ಮನೆಯಲ್ಲಿ!
ಮತೀನ್‌ನ ಮನೆಯಲ್ಲಿ ಬೇರೆಯ ಕೆಲವು ವ್ಯಕ್ತಿಗಳೂ ಇದ್ದು, ಅವರೆಲ್ಲರೂ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು ಎಂದು ಬಳಿಕ ತಿಳಿದುಬಂದಿತ್ತು. ಇದೀಗ ಎನ್‌ಐಎ ಅಧಿಕಾರಿಗಳು ಮತೀನ್, ಶಾರಿಕ್ ಸೇರಿದಂತೆ ಇತರರಿಗೆ ಆಶ್ರಯ ನೀಡಿದ ಮನೆಯವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಜತೆಗೆ ಆ ಮನೆಯಲ್ಲಿ ಶೋಧ ಕಾರ್ಯಾಚರಣೆಯನ್ನೂ ನಡೆಸಿದ್ದಾರೆ. ಜತೆಗೆ ಅಕ್ಕಪಕ್ಕದವರ ಬಳಿ ಅವರ ಚಲನವಲನಗಳ ಮಾಹಿತಿ ಪಡೆದಿದ್ದಾರೆ. ಉಗ್ರ ಮತೀನ್ ಈಗ ರಾಕ್ಷಸ ಉಗ್ರನಾಗಿ ಬೆಳೆದಿದ್ದಾನೆ ಎಂದು ಹೇಳಲಾಗುತ್ತಿದ್ದು, ಆತನ ಪತ್ತೆಗಾಗಿ ಎನ್‌ಐಎ ಹೈದರಾಬಾದ್ ಮೂರು ಲಕ್ಷ ರೂ. ಬಹುಮಾನ ಘೋಷಿಸಿದೆ. ಆತ ಈಗ ಎಲ್ಲಿದ್ದಾನೆ ಎನ್ನುವ ಮಾಹಿತಿಗಾಗಿ ಪೊಲೀಸರು ತಡಕಾಡುತ್ತಿದ್ದಾರೆ.
ಈ ನಡುವೆ ಅಮೃತಹಳ್ಳಿಯ ಮಾರುತಿ ಲೇಔಟ್‌ನಲ್ಲಿ ಶಾರಿಕ್‌ನ ಅತ್ತೆ ಮನೆ ಇದ್ದು ಆತ ಅಲ್ಲಿಗೂ ಭೇಟಿ ಕೊಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಾರೀಕ್ ಅತ್ತೆ, ಸೋದರ ಮಾವನನ್ನು ಎನ್ ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಉಗ್ರ ಶಾರಿಕ್ ಹಿಂದಿರುವ ಮೇನ್ ಹ್ಯಾಂಡ್ಲರ್ ಮತೀನ್ ತಾಹಾ: ಇವನ ಅಪ್ಪ ಒಬ್ಬರು ಸಜ್ಜನ ಮಾಜಿ ಸೈನಿಕ!