Site icon Vistara News

Blast in Bengaluru: 10 ದಿನ ಕಳೆದ್ರೂ ಸಿಗದ ಬಾಂಬರ್‌ ಸುಳಿವು; ಬಳ್ಳಾರಿ, ಕಲಬುರಗಿಯಲ್ಲಿ ಎನ್‌ಐಎ ತೀವ್ರ ಶೋಧ

Blast in bengaluru

ಬಳ್ಳಾರಿ/ಕಲಬುರಗಿ: ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ನಡೆದು ಇಂದಿಗೆ ಬರೋಬ್ಬರಿ ಹತ್ತು ದಿನ ಕಳೆದಿವೆ. ಆದರೂ ಆರೋಪಿಯ ಸುಳಿವು ಮಾತ್ರ ಪತ್ತೆಯಾಗಿಲ್ಲ. ಬ್ಲಾಸ್ಟ್ (Blast in Bengaluru) ಆಗುತ್ತಿದ್ದಂತೆ ಪೊಲೀಸರಿಂದ ತನಿಖೆ ಆರಂಭವಾಗಿತ್ತು, ಇದಕ್ಕಾಗಿ 200 ಸಿಬ್ಬಂದಿಯನ್ನೊಳಗೊಂಡ ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಇದೀಗ ಆರೋಪಿ ಸಂಚರಿಸಿರುವ ಮಾರ್ಗಗಳಲ್ಲಿ ಶೋಧ ನಡೆಸುತ್ತಿರುವ ಎನ್‌ಐಎ ತಂಡ, ಬಳ್ಳಾರಿ, ಕಲಬುರಗಿಯಲ್ಲಿ ಸಿಟಿಟಿವಿಗಳನ್ನು ಜಾಲಾಡಿ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿವೆ.

ಸಿಸಿಟಿವಿಗಳನ್ನು ಪರಿಶೀಲಿಸಲು ಎನ್‌ಐಎದಿಂದ ಪ್ರತ್ಯೇಕ ತಂಡ ರಚಿಸಲಾಗಿದೆ. ಸ್ಫೋಟದ ನಂತರ ಆರೋಪಿ, ಬೆಂಗಳೂರು ಬಿಟ್ಟು ಬಳ್ಳಾರಿಯತ್ತ ಪ್ರಯಾಣ ಬೆಳೆಸಿದ್ದ. ಮಾ.1ರಂದು ಮಧ್ಯಾಹ್ನ 11.55ಕ್ಕೆ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಫಿಕ್ಸ್ ಮಾಡಿದ್ದ, ಬಳಿಕ 12.55ಕ್ಕೆ ಬಾಂಬ್ ಸ್ಫೋಟ ಆಗುವಷ್ಟರಲ್ಲಿ ಮಾರತ್ ಹಳ್ಳಿ-ಸಿಲ್ಕ್ ಬೋರ್ಡ್- ಗೋರಗುಂಟೆಪಾಳ್ಯ ಮಾರ್ಗದಲ್ಲಿ ಪ್ರಯಾಣಿಸಿದ್ದ. ಮಧ್ಯಾಹ್ನ 1.30 ಸುಮಾರಿಗೆ ಗೊರಗುಂಟೇಪಾಳ್ಯದಲ್ಲಿ ಹುಮ್ನಾಬಾದ್ ಬಸ್ ಹತ್ತಿದ್ದ. ಸಂಜೆ ನಾಲ್ಕು ಗಂಟೆಯಷ್ಟರಲ್ಲಿ ಕಳ್ಳಂಬೆಳ್ಳ ಟೋಲ್‌ ಮೂಲಕ ಸಾಗಿ, ರಾತ್ರಿ 9 ಗಂಟೆ ಸುಮಾರಿಗೆ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಆರೋಪಿ ಕಾಣಿಸಿಕೊಂಡಿದ್ದ. ಹೀಗಾಗಿ ಆರೋಪಿಯ ಬೆನ್ನತ್ತಿ ಸಿಸಿಬಿ, ಎನ್ಐಎ ತಂಡಗಳು ಬಳ್ಳಾರಿಗೆ ತೆರಳಿದ್ದವು. ನಿರಂತರ ಹುಡಕಾಟ ನಡೆಸುತ್ತಿದ್ದರೂ ಹತ್ತು ದಿನಗಳಿಂದ ಸಿಗದೆ ಆರೋಪಿ ಕಣ್ಣಾಮುಚ್ಚಾಲೆ ಆಡುತ್ತಿರುವುದು ಕಂಡುಬಂದಿದೆ.

ಬಳ್ಳಾರಿ ಮಾಡಲ್ ಮಾದರಿಯಲ್ಲಿ ರಾಮೇಶ್ವರಂ ಕೆಫೆ ಸ್ಫೋಟ ನಡೆದಿದೆ ಎಂದು ಸದ್ಯ ಬಳ್ಳಾರಿಯಲ್ಲಿ ಶಂಕಿತರ ಮನೆಗಳಲ್ಲಿ ಎನ್‌ಐಎ ತೀವ್ರ ಶೋಧ ನಡೆಸುತ್ತಿದೆ. ಆದರೆ, ಬಳ್ಳಾರಿಯಲ್ಲಿದ್ದಾನೆ ಅಂದುಕೊಂಡಿದ್ದ ಶಂಕಿತ ನಿಗೂಢವಾಗಿ ನಾಪತ್ತೆಯಾಗಿರುವುದು ಕಂಡುಬಂದಿದೆ. ಹೈದರಾಬಾದ್‌ನತ್ತ ಆರೋಪಿ ಹೆಜ್ಜೆ ಹಾಕಿರಬಹುದು ಎಂಬ ಶಂಕೆ ಉಂಟಾಗಿದೆ.

ಇದನ್ನೂ ಓದಿ | Blast in Bengaluru: ರಾಷ್ಟ್ರಗೀತೆಯೊಂದಿಗೆ ಮರಳಿ ತೆರೆದ ರಾಮೇಶ್ವರಂ ಕೆಫೆ, ಬಿಗಿ ಭದ್ರತೆ; ʻಧೈರ್ಯವಾಗಿರಿʼ ಎಂದ ಗ್ರಾಹಕರು

ಸೇಡಂ ಬಸ್ ನಿಲ್ದಾಣದಲ್ಲಿ ಸಿಸಿ‌ ಕ್ಯಾಮೆರಾ ಪರಿಶೀಲನೆ

ಕಲಬುರಗಿ: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ಕಲಬುರಗಿಯಲ್ಲಿ ಎನ್‌ಐಎ ಅಧಿಕಾರಿಗಳಿಂದ ತೀವ್ರ ಶೋಧ ನಡೆಯುತ್ತಿದೆ. ಸೇಡಂ ಬಸ್ ನಿಲ್ದಾಣದಲ್ಲಿ ಸಿಸಿ‌ ಕ್ಯಾಮೆರಾ ಪರಿಶೀಲನೆ ನಡೆಸಿರುವ NIA ಅಧಿಕಾರಿಗಳು ಕೆಕೆಆರ್‌ಟಿಸಿಯ ಐವರು ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಾರೆ. ಬಳ್ಳಾರಿಯಿಂದ ಬಂದ ಬಸ್ ಕಂಡಕ್ಟರ್‌ನನ್ನ ನೆನ್ನೆ ಮಧ್ಯಾಹ್ನ ಕರೆದೊಯ್ದಿದ್ದ ಎನ್‌ಐಎ, ನೆನ್ನೆ ರಾತ್ರಿ ಹೈದರಾಬಾದ್‌ಗೆ ತೆರಳಿದ್ದ ಎರಡು ಬಸ್‌ ಡ್ರೈವರ್, ಕಂಡೆಕ್ಟರ್ ಅನ್ನು ವಿಚಾರಣೆ ನಡೆಸಿದ್ದಾರೆ.

ಮಾರ್ಚ್ 2 ರಂದು ಬೆಳಗ್ಗೆ ಕಲಬುರಗಿಯಿಂದ ಹೈದರಾಬಾದ್‌ಗೆ ತೆರಳಿದ್ದ ಬಸ್ ಡ್ರೈವರ್, ಕಂಡಕ್ಟರ್ ಹಾಗೂ
ಬೆಳಗ್ಗೆ 5.30 ಮತ್ತು 6 ಗಂಟೆಗೆ ಹೈದರಾಬಾದ್‌ಗೆ ತೆರಳಿದ್ದ ಬಸ್ ಡ್ರೈವರ್, ಕಂಡಕ್ಟರ್ ಅನ್ನು ಕಲಬುರಗಿಯ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ.

ನಾಲ್ವರು ಶಂಕಿತರ ವಿಚಾರಣೆ

ಬಳ್ಳಾರಿಯಲ್ಲಿ ಹಳೆ ಕೇಸ್‌ಗಳಲ್ಲಿ ಬಂಧನವಾಗಿರುವ ಶಂಕಿತರನ್ನು ಈಗಾಗಲೇ ವಶಕ್ಕೆ ಪಡೆದು ಎನ್‌ಐಎ ವಿಚಾರಣೆ ನಡೆಸುತ್ತಿದೆ. ಜತೆಗೆ ನಾಪತ್ತೆಯಾಗಿರುವ ಆರೋಪಿಗಳ ಕುಟುಂಬಸ್ಥರನ್ನೂ ವಿಚಾರಣೆ ಮಾಡಲಾಗುತ್ತಿದೆ. ಬಳ್ಳಾರಿಯ ಶಂಕಿತ ಉಗ್ರ ಮಿನಾಜ್‌ ಅಲಿಯಸ್‌ ಸುಲೈಮಾನ್‌, ಸೈಯದ್‌ ಸಮೀರ್‌, ಮುಂಬೈನ ಅನಾಸ್‌ ಇಕ್ಬಾಲ್‌ ಶೇಖ್‌, ದೆಹಲಿಯ ಶಯಾನ್‌ ರೆಹಮಾನ್‌ ಅಲಿಯಾಸ್‌ ಹುಸೈನ್‌ನನ್ನು ನ್ಯಾಯಾಲಯದ ಆದೇಶದ ಮೇರೆಗೆ ವಶಕ್ಕೆ ಪಡೆದು, ಎನ್‌ಐಎ ವಿಚಾರಣೆ ಮಾಡುತ್ತಿದೆ.

ಇದನ್ನೂ ಓದಿ | Blast in Bengaluru : ರಾಮೇಶ್ವರಂ ಕೆಫೆ ಬಾಂಬರ್‌ನ ಸ್ಪಷ್ಟ‌ ಚಿತ್ರ ಬಿಡುಗಡೆ, ಈಗ್ಲಾದರೂ ಹುಡುಕಿ ಕೊಡಿ!

ನಾಗರಿಕರ ಸಹಕಾರ ಕೋರಿದ ಎನ್‌ಐಎ

ಸ್ಫೋಟದ ಆರೋಪಿ ಪತ್ತೆಗಾಗಿ ಎಲ್ಲೆಡೆ ಹುಡುಕಾಟ ನಡೆಸುತ್ತಿರುವ ಎನ್‌ಐಎ, ಬಾಂಬರ್‌ ಪತ್ತೆಗಾಗಿ ನಾಗರಿಕರ ಸಹಕಾರ ಕೋರಿದೆ. ಬೆಂಗಳೂರಿನ ಬಿಎಂಟಿಸಿ ಬಸ್‌ನಲ್ಲಿ ಆರೋಪಿ ಕಾಣಿಸಿಕೊಂಡಿದ್ದ ವಿಡಿಯೊ ಹಂಚಿಕೊಂಡಿರುವ ಎನ್‌ಐಎ, ಆರೋಪಿ ಸುಳಿವು ಸಿಕ್ಕಿದರೆ ಕೂಡಲೇ 08029510900, 8904241100 ಸಂಖ್ಯೆಗಳಿಗೆ ಸಂಪರ್ಕಿಸಬೇಕು. ಇಲ್ಲವಾದರೆ, info.blr.nia@gov.in ಮೇಲ್ ಐಡಿಗೆ ಇ-ಮೇಲ್ ಕಳಿಸುವ ಮೂಲಕ ಈತನ ಬಗ್ಗೆ ಮಾಹಿತಿ ಕೊಡಬಹುದು ಎಂದು ಹೇಳಿದೆ. ಈಗಾಗಲೇ ಎನ್ಐಎ, ಶಂಕಿತನ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದೆ.

Exit mobile version