ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯಲ್ಲಿ ಬುಧವಾರ (ಜೂನ್ 27) ಏಕಕಾಲಕ್ಕೆ 6 ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ದಾಳಿ (NIA Raid) ನಡೆಸಿದ್ದರು. ಇದೀಗ ಇದರ ಬೆನ್ನಲ್ಲೇ ಕೊಲೆ ಆರೋಪಿಗಳಿಗೆ ಡೆಡ್‌ಲೈನ್ ನೀಡಲಾಗಿದ್ದು, ಜೂನ್ 30ರೊಳಗೆ ಶರಣಾಗದಿದ್ದಲ್ಲಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುಳ್ಯ ನಗರದಲ್ಲಿ ಇಂಥದ್ದೊಂದು ಎಚ್ಚರಿಕೆ ಸಂದೇಶವನ್ನು ಮೈಕ್ ಮೂಲಕ ರವಾನಿಸಲಾಗುತ್ತಿದೆ. ಇದಕ್ಕಾಗಿ ಸ್ಥಳೀಯ ಪೊಲೀಸರ ಸಹಾಯವನ್ನು ಪಡೆದುಕೊಳ್ಳಲಾಗಿದ್ದು, ಆಟೋದಲ್ಲಿ ಮೈಕ್ ಹಾಕಿಕೊಂಡಿರುವ ಪೊಲೀಸರು ಸುಳ್ಯ ನಗರದುದ್ದಕ್ಕೂ ಮೈಕ್ ಹಿಡಿದು ಎಚ್ಚರಿಕೆ ಸಂದೇಶವನ್ನು ಅನೌನ್ಸ್ ಮಾಡುತ್ತಿದ್ದಾರೆ. ನ್ಯಾಯಾಲಯದ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿ ಸವಾರರಿಗೆ ಮತ್ತೊಂದು ಶಾಕ್! ಜುಲೈ 1ರಿಂದ ಮಂಡ್ಯದಲ್ಲೂ ಟೋಲ್ ಬರೆ
ಆರೋಪಿಗಳು ಯಾವುದೇ ಕಾರಣಕ್ಕೂ ಇನ್ನು ತಲೆ ಮರೆಸಿಕೊಂಡು ಇರುವಂತಿಲ್ಲ. ಈಗ ಬಂದು ಶರಣಾಗತರಾಗದೇ ಇದ್ದಲ್ಲಿ ಆರೋಪಿಗಳ ಆಸ್ತಿಯನ್ನು ಜಪ್ತಿ ಮಾಡಲಾಗುವುದು. ತಲೆ ಮರೆಸಿಕೊಂಡಿರುವ ನಾಲ್ವರು ಆರೋಪಿಗಳು ಸಹ ಶರಣಾಗಬೇಕು. ಇಲ್ಲದಿದ್ದರೆ ಮುಂದೆ ಗಂಭೀರ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಧ್ವನಿವರ್ಧಕದ ಮೂಲಕ ಘೋಷಣೆ ಮಾಡಲಾಗಿದೆ.
ಎನ್‌ಐಎ ನ್ಯಾಯಾಲಯದ ಅಧಿಕಾರಿಗಳು ಹಾಗೂ ಸುಳ್ಯದ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಆರೋಪಿಗಳಿಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರೋಪಿಗಳ ಸುಳಿವು ಕೊಟ್ಟಲ್ಲಿ ನಗದು ಬಹುಮಾನವನ್ನು ನೀಡಲಾಗುವುದು ಎಂದು ಸಾರ್ವಜನಿಕರಲ್ಲಿ ವಿನಂತಿಸಲಾಗುತ್ತಿದೆ.
ಸುಳ್ಯದ ಕಲ್ಲುಮುಟ್ಲುನಲ್ಲಿ ವಾಸವಿದ್ದ ಆರೋಪಿ ಉಮ್ಮರ್ ಫಾರೂಕ್ ಅವರ ಮನೆಗೂ ಹೋಗಿ ನ್ಯಾಯಾಲಯದ ಆದೇಶ ಪ್ರತಿಯನ್ನು ಅಂಟಿಸಿ ಬಂದಿದ್ದಾರೆ. ಬುಧವಾರವೂ ಬೆಳ್ಳಾರೆಯಲ್ಲಿ ಧ್ವನಿವರ್ಧಕದ ಮೂಲಕ ಎನ್‌ಐಎ ನ್ಯಾಯಾಲಯದ ಆದೇಶವನ್ನು ಉದ್ಘೋಷಣೆ ಮಾಡಿ ಆರೋಪಿ ಮುಸ್ತಫ ಮನೆಗೂ ಹೋಗಿ ಆದೇಶ ಪ್ರತಿಯನ್ನು ಅಂಟಿಸಿ ಬಂದಿದ್ದಾರೆಂದು ತಿಳಿದುಬಂದಿದೆ.
ಎನ್ಐಎ ಅಧಿಕಾರಿಗಳು ಈ ಹಿಂದೆ ಆರೋಪಿಗಳ ಪೋಟೊಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಿ ಆರೋಪಿಗಳ ಪತ್ತೆಗೆ ಸಾಕಷ್ಟು ಪ್ರಯತ್ನ ಪಟ್ಟಿತ್ತು. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ನಡೆದು 11 ತಿಂಗಳು ಕಳೆದುಹೋಗಿದ್ದು, ಎನ್‌ಐಎ ಅಧಿಕಾರಿಗಳ ಮುಂದಿನ ನಡೆ ಕುತೂಹಲ ಮೂಡಿಸಿದೆ.
ಏಕಕಾಲಕ್ಕೆ ನಡೆದಿತ್ತು ದಾಳಿ
ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯಲ್ಲಿ ಬುಧವಾರ ಏಕಕಾಲಕ್ಕೆ 6 ಕಡೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ದಾಳಿ ನಡೆಸಿದ್ದರು. ನಿಷೇಧಿತ ಪಿಎಫ್‌ಐ ಸಂಘಟನೆ ಕಾರ್ಯಕರ್ತರ ಮನೆಗಳ ಮೇಲೆ ದಾಳಿ (NIA Raid) ನಡೆಸಲಾಗಿದ್ದು, ಎಲೆಕ್ಟ್ರಾನಿಕ್ ಡಿವೈಸ್‌ಗಳು ಸೇರಿದಂತೆ ಮಹತ್ವದ ದಾಖಲೆಗಳನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು.
ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ಎಂಬಲ್ಲಿ ಕಾರು ಚಾಲಕ ನೌಶಾದ್ ಮನೆ ದಾಳಿ ನಡೆಸಲಾಗಿದ್ದು, ದಾಳಿ ವೇಳೆ ನೌಶದ್ ಮನೆಯಲ್ಲಿರಲಿಲ್ಲ. ಹೀಗಾಗಿ ಅಧಿಕಾರಿಗಳು ದಾಖಲೆ ವಶಕ್ಕೆ ಪಡೆದಿದ್ದರು. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ದಾಳಿ ನಡೆಸಿರುವ ಎನ್ಐಎ ತಂಡ, ಪ್ರಕರಣಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಈ ವೇಳೆ ಕಲೆಹಾಕಿದೆ.
2022ರ ಜುಲೈ 26ರಂದು ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಬಳಿಕ ಪ್ರಕರಣದ ತನಿಖೆ ಎನ್ಐಎಗೆ ವರ್ಗಾವಣೆಗೊಂಡಿತ್ತು. ಪ್ರಕರಣ ಸಂಬಂಧ ಈಗಾಗಲೇ ಎನ್ಐಎ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ.
ಇದನ್ನೂ ಓದಿ: Ambulance Service : ಜುಲೈ 8ಕ್ಕೆ ಆಂಬ್ಯುಲೆನ್ಸ್ ಡೆಡ್‌ಲೈನ್; ವೇತನ ಕೊಡ್ದೇ ಇದ್ರೆ ಸೇವೆ ಸಿಗಲ್ಲ!
ಸೋಮವಾರಪೇಟೆಯಲ್ಲಿ ಇಬ್ಬರ ಮನೆ ಮೇಲೆ ದಾಳಿ
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯ ಸೋಮವಾರಪೇಟೆಯಲ್ಲಿ ಇಬ್ಬರ ಮನೆ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ದುಬೈನಲ್ಲಿರುವ ಅಬ್ದುಲ್ ನಜೀರ್ ಹಾಗೂ ಅಬ್ದುಲ್ ರೆಹಮಾನ್ ಮನೆಯ ಮೇಲೆ ದಾಳಿ ನಡೆಸಲಾಗಿತ್ತು. ಇಬ್ಬರ ಮನೆಯಲ್ಲಿ ಪರಿಶೀಲನೆ ನಡೆಸಿ ಎನ್‌ಐಎ ತಂಡ ವಾಪಸ್ ತೆರಳಿತ್ತು.