ಶಶಿಧರ ಮೇಟಿ, ವಿಸ್ತಾರ ನ್ಯೂಸ್ ಬಳ್ಳಾರಿ
ರಾಷ್ಟ್ರೀಯ ತನಿಖಾ ದಳ (National Investigation Agency-NIA) ಸೋಮವಾರ ನಡೆಸಿದ ದಾಳಿ ದೇಶದಲ್ಲಿಯೇ ಸದ್ದು ಮಾಡಿದೆ. ರಾಷ್ಟ್ರಾದ್ಯಂತ ನಡೆದ ದಾಳಿಯಲ್ಲಿ (NIA Raid) ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದ್ದು, ಅವರಲ್ಲಿ ನಾಲ್ವರು ಬಳ್ಳಾರಿಯವರು (four from Ballary) ಎಂಬ ಸ್ಫೋಟಕ ಮಾಹಿತಿ ವಿಸ್ತಾರ ನ್ಯೂಸ್ ಗೆ ಲಭ್ಯವಾಗಿದೆ. ಇಬ್ಬರನ್ನು ಬಳ್ಳಾರಿಯಲ್ಲಿ ಬಂಧಿಸಿದ್ದು, ಬೇರೆ ಕಡೆ ಬಂಧಿಸಿದವರ ಪೈಕಿ ಇಬ್ಬರು ಬಳ್ಳಾರಿಯವರಾಗಿದ್ದಾರೆ. ಬಳ್ಳಾರಿಯಲ್ಲಿ ಇನ್ನೂ ನಾಲ್ಕು ಜನರಿಗೆ ಅಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ. ಬಂಧಿತರಲ್ಲಿ ಬಳ್ಳಾರಿಯ ಇಬ್ಬರು ವಿದ್ಯಾರ್ಥಿಗಳಿದ್ದಾರೆಂದು ಮೂಲಗಳು ವಿಸ್ತಾರ ನ್ಯೂಸ್‌ಗೆ ತಿಳಿಸಿವೆ.
6 ಜನರ ವಿಚಾರಣೆ, ಇಬ್ಬರು ಬಂಧನ, ನಾಲ್ವರಿಗೆ ನೋಟೀಸ್
ಹೈದ್ರಾಬಾದ್ ಮತ್ತು ಬೆಂಗಳೂರಿನಿಂದ ಬಂದ ಎಸ್ಪಿ ನೇತೃತ್ವದ ತಂಡ ಬಳ್ಳಾರಿಯ ಎಂಟು ಕಡೆಗಳಲ್ಲಿ ದಾಳಿ ಮಾಡಿತ್ತು. ಕೌಲ್ ಬಜಾರ್ ಪ್ರದೇಶ 6 ಕಡೆ, ಬ್ರೂಸ್ ಪೇಟೆ ವ್ಯಾಪ್ತಿಯ ಪಿಂಜಾರ್ ಓಣಿ, ಗಾಂಧಿ ನಗರ ಠಾಣೆ ವ್ಯಾಪ್ತಿಯ ಸತ್ಯನಾರಾಯಣ ಪೇಟೆಯಲ್ಲಿ ಓರ್ವ ಆರೋಪಿ ಬಾಡಿಗೆ ಇದ್ದ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಸುಮಾರು 6 ಜನರನ್ನು ವಶಕ್ಕೆ ಪಡೆದಿದ್ದ ಅಧಿಕಾರಿಗಳ ತಂಡ ಬಳ್ಳಾರಿ ನಗರದಲ್ಲಿ ಮಧ್ಯಾಹ್ನದವರೆಗೆ ವಿಚಾರಣೆ ನಡೆಸಿ ಸೈಯದ್ ಸಮೀರ್ ಮತ್ತು ಮೊಹಮ್ಮದ್ ಸುಲೇಮಾನ್ ಬಂಧಿಸಿ, ಇನ್ನುಳಿದ ಇಜಾಜ್, ತಬರೇಶ್, ಅಲ್ತಾಫ್ ಸೇರಿದಂತೆ ನಾಲ್ಕು ಜನರಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ಎನ್ಐಎ ಬಲೆಗೆ ಬಿದ್ದ ಬಳ್ಳಾರಿಯ ಬಿಸಿಎ ವಿದ್ಯಾರ್ಥಿ
ಬಂಧಿತರಲ್ಲಿ ಒಬ್ಬನಾದ ಸೈಯದ್ ಸಮೀರ್ ಬಳ್ಳಾರಿಯ ಕಾಲೇಜೊಂದರಲ್ಲಿ ಬಿಸಿಎ ಮೂರನೇ ಸೆಮಿಸ್ಟರ್ ವಿದ್ಯಾರ್ಥಿ, ಕೆಲ ದಿನಗಳ ಹಿಂದೆಯೇ ತಾನು ಓದುತ್ತಿ ರುವ ಕಾಲೇಜಿ ಉಪನ್ಯಾಸಕ ವಿರುದ್ದವೇ ಮುಸ್ಲಿಂ ಸಮುದಾಯಕ್ಕೆ ಅವಹೇಳನ ಮಾಡಿದ್ದಾರೆಂದು ತಿರುಗಿ ಬಿದ್ದಿದ್ದನು. ಇದೀಗ ಆತನನ್ನು ಎನ್ ಐ ಎ ಅಧಿಕಾರಿಗಳು ಬಂಧಿಸಿರುವುದು ಕಾಲೇಜು ಮತ್ತು ವಿದ್ಯಾರ್ಥಿ ವಲಯದಲ್ಲಿ ಆತಂಕ ಮೂಡಿಸಿದೆ. ಈತನು ಬಳ್ಳಾರಿ ಕೌಲ್ ಬಜಾರದ ಜಾಗೃತಿ ನಗರ ನಿವಾಸಿಯಾಗಿದ್ದು, ಈತನ ತಂದೆ ತಾಯಿಯವರು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಬಂಧಿತರಲ್ಲಿ ಬಳ್ಳಾರಿಯ ಕಾನೂನು ವಿದ್ಯಾರ್ಥಿ!
ಮತ್ತೊಬ್ಬ ಆರೋಪಿ ಮೊಹಮ್ಮದ್ ಸುಲೇಮಾನ್ ನಿಷೇಧಿತ ಸಂಘಟನೆ ಪಿಎಫ್ಐನ ಕಾರ್ಯದರ್ಶಿಯಾಗಿ ಕೆಲಸ ಮಾಡಿದವನು. ಈತನು ಕೌಲ್ ಬಜಾರ್ ಮುಖ್ಯ ರಸ್ತೆಯಲ್ಲಿ ಬಟ್ಟೆ ಅಂಗಡಿ ವ್ಯಾಪಾರ ಮಾಡುತ್ತಿದ್ದಾನೆ. ಈತನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಬಂಧಿತ ಆರೋಪಿ ಸೈಯದ್ ಸಮೀವುಲ್ಲಾ ಬಳ್ಳಾರಿಯ ಮೂಲದವನಾಗಿದ್ದು ಬೆಂಗಳೂರಿನಲ್ಲಿ ಕಾನೂನು ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಬೇರೆ ಕಡೆ ಬಂಧಿತ ಮತ್ತೋರ್ವ ಆರೋಪಿ ಬಳ್ಳಾರಿ ಮೂಲದವೆಂದು ಹೇಳಲಾಗುತ್ತಿದೆ. ಬಂಧಿತ 8ರಲ್ಲಿ ಬಳ್ಳಾರಿಯವರು ನಾಲ್ವರೆಂಬುದು ಆತಂಕದ ಸಂಗತಿಯಾಗಿದೆ.
9 ಗಂಟೆಗಳ ಕಾಲ ದಾಳಿ ಮತ್ತು ವಿಚಾರಣೆ
ಬಂಧಿತ ಆರೋಪಿಗಳು ವಾಟ್ಸ್ ಆಪ್ ಗ್ರೂಪ್ ಮಾಡಿಕೊಂಡು ISIS ಚಟುವಟಿಕೆಗಳಲ್ಲಿ ಚರ್ಚಿಸುತ್ತಿದ್ದರೆಂಬ ಮಾಹಿತಿ ಎನ್ ಐಎ ಅಧಿಕಾರಿಗಳಿಗೆ ಲಭ್ಯವಾಗಿದೆ. ಈ ವಿಚಾರವಾಗಿ ಬಳ್ಳಾರಿಯಲ್ಲಿ ಪ್ರಾಥಮಿಕ ತನಿಖೆಯನ್ನು ಮಾಡಿದ್ದಾರೆ. ಇನ್ನು ಭಯೋತ್ಪಾದಕ ಚಟುವಟಿಕೆಯ ಭಯೋತ್ಪಾದಕರೊಂದಿಗೆ ನಂಟಿರುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನೋಟೀಸ್ ನೀಡಿರುವ ನಾಲ್ಕು ಜನರು ವಿಚಾರಣೆಗೆ ಕರೆದಾಗ ಹಾಜರಾಗುವಂತೆ ಸೂಚಿಸಿದ್ದಾರೆ. ಬೆಳಿಗ್ಗೆ 5.30ರಿಂದ ಮಧ್ಯಾಹ್ನ 2.30ರವರೆಗೆ ಅಧಿಕಾರಿಗಳು ದಾಳಿ ಮತ್ತು ವಿಚಾರಣೆ ನಡೆಸಿದ್ದಾರೆಂದು ವಿಸ್ತಾರ ನ್ಯೂಸ್‌ಗೆ ಮೂಲಗಳು ತಿಳಿಸಿವೆ.
ಸಂಶಯಾಸ್ಪದರ ಬಗ್ಗೆ ನಿಗಾ ವಹಿಸಲು ಎನ್‌ಐಎ ಸೂಚನೆ
ಎನ್ ಐಎ ಸೋಮವಾರ ದೇಶಾದ್ಯಾಂತ ನಡೆಸಿರುವ 19 ಕಡೆಗಳಲ್ಲಿ ದಾಳಿಯಲ್ಲಿ ಬಂಧಿತ 8 ಜನ ಆರೋಪಿಗಳ ಪೈಕಿ ಬಳ್ಳಾರಿ ನಾಲ್ವರು ಇರುವ ಹಿನ್ನಲೆಯಲ್ಲಿ ಇಲ್ಲಿನ ಪೊಲೀಸರಿಗೆ ಸಂಶಯಾಸ್ಪದರ ಬಗ್ಗೆ ನಿಗಾವಹಿಸುವಂತೆ ತಿಳಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.