ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯಲ್ಲಿ ಏಕಕಾಲಕ್ಕೆ 6 ಕಡೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಿಷೇಧಿತ ಪಿಎಫ್‌ಐ ಸಂಘಟನೆ ಕಾರ್ಯಕರ್ತರ ಮನೆಗಳ ಮೇಲೆ ದಾಳಿ (NIA Raid) ನಡೆಸಲಾಗಿದ್ದು, ಎಲೆಕ್ಟ್ರಾನಿಕ್ ಡಿವೈಸ್ ಗಳು ಸೇರಿ ಮಹತ್ವದ ದಾಖಲೆಗಳನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ಎಂಬಲ್ಲಿ ಕಾರು ಚಾಲಕ ನೌಶಾದ್ ಮನೆ ದಾಳಿ ನಡೆಸಲಾಗಿದ್ದು, ದಾಳಿ ವೇಳೆ ನೌಶದ್ ಮನೆಯಲ್ಲಿರಲಿಲ್ಲ. ಹೀಗಾಗಿ ಅಧಿಕಾರಿಗಳು ದಾಖಲೆ ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ದಾಳಿ ನಡೆಸಿರುವ ಎನ್ಐಎ ತಂಡ, ಪ್ರಕರಣಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಕಲೆಹಾಕಿದೆ.
2022ರ ಜುಲೈ 26ರಂದು ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಬಳಿಕ ಪ್ರಕರಣದ ತನಿಖೆ ಎನ್ಐಎಗೆ ವರ್ಗಾವಣೆಗೊಂಡಿತ್ತು. ಪ್ರಕರಣ ಸಂಬಂಧ ಈಗಾಗಲೇ ಎನ್ಐಎ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ಇದನ್ನೂ ಓದಿ | Kidnapping Case: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ತಾಯಿ-ಮಗ ಕಿಡ್ನ್ಯಾಪ್!
ಸೋಮವಾರಪೇಟೆಯಲ್ಲಿ ಇಬ್ಬರ ಮನೆ ಮೇಲೆ ದಾಳಿ
ಕೊಡಗು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆಯಲ್ಲಿ ಇಬ್ಬರ ಮನೆ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದುಬೈನಲ್ಲಿರುವ ಅಬ್ದುಲ್ ನಜೀರ್ ಹಾಗೂ ಅಬ್ದುಲ್ ರೆಹಮಾನ್ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಇಬ್ಬರ ಮನೆಯಲ್ಲಿ ಪರಿಶೀಲನೆ ನಡೆಸಿ ಎನ್‌ಐಎ ತಂಡ ವಾಪಸ್ ತೆರಳಿದೆ.