ಬೆಂಗಳೂರು/ನವದೆಹಲಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜೈಲಿನಲ್ಲಿರುವ ಕೈದಿಗಳಲ್ಲಿ ಮೂಲಭೂತವಾದ (Radicalisation Of Prisoners) ಪಸರಿಸುವುದು, ಅವರನ್ನು ಉಗ್ರ ಕೃತ್ಯಕ್ಕೆ ಬಳಸಿಕೊಂಡಿರುವ ಆರೋಪದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ದೇಶದ 7 ರಾಜ್ಯಗಳ 7 ಕಡೆ ದಾಳಿ (NIA Raid) ನಡೆಸಿದೆ. ಲಷ್ಕರೆ ತಯ್ಬಾ (Lashkar-e-Taiba) ಉಗ್ರನೊಬ್ಬನಿಂದ ಕೈದಿಗಳ ಮನಸ್ಸಿನಲ್ಲಿ ಮೂಲಭೂತವಾದ ಬಿತ್ತಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ದಾಳಿ ನಡೆಸಿದ್ದು, 17 ಕಡೆಗಳಲ್ಲಿ ತೀವ್ರ ಶೋಧ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಕರ್ನಾಟಕ, ತಮಿಳುನಾಡು ಸೇರಿ 7 ರಾಜ್ಯಗಳಲ್ಲಿ ಎನ್‌ಐಎ ದಾಳಿ ನಡೆಸುತ್ತಿದೆ. ಬೆಂಗಳೂರು ಜೈಲಿನಲ್ಲಿರುವ ಕೈದಿಗಳಲ್ಲಿ ಉಗ್ರವಾದ ಬೆಳೆಸುವುದು, ಆತ್ಮಾಹುತಿ ದಾಳಿಗೆ ಪ್ರಚೋದನೆ ನೀಡುವುದು, ದೇಶದ ಹಲವೆಡೆ ಉಗ್ರ ದಾಳಿಗೆ ಸಂಚು ರೂಪಿಸುವುದು ಸೇರಿ ಹಲವು ಉಗ್ರ ಚಟುವಟಿಕೆಗಳಿಗೆ ಪಿತೂರಿ ನಡೆಸಿರುವ ಕುರಿತು ಮೂಲಗಳಿಂದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಎನ್‌ಐಎ ದಾಳಿ ನಡೆಸಿದೆ ಎನ್ನಲಾಗಿದೆ. ಹಲವು ಶಂಕಿತ ಉಗ್ರರು ಪಾಲ್ಗೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದೆ ಎಂದು ಕೂಡ ತಿಳಿದುಬಂದಿದೆ.
ಬೆಂಗಳೂರಿನಲ್ಲಿ ದಾಳಿಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಬಂಧಿತರಿಂದ ಏಳು ಪಿಸ್ತೂಲ್, ಆರು ಹ್ಯಾಂಡ್ ಗ್ರೆನೇಡ್, 45 ಸುತ್ತಿನ ಜೀವಂತ ಗುಂಡುಗಳು ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕಳೆದ ವರ್ಷದ ಜುಲೈನಲ್ಲಿಯೇ ವಶಪಡಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ, ಕೈದಿಗಳು ಸೇರಿ ಹಲವರು ದೇಶದ ಹಲವೆಡೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಎನ್‌ಐಎ ಕೂಲಂಕಷ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ: NIA Raid: ಎನ್‌ಐಎ ದಾಳಿ, ಬೆಂಗಳೂರಿನಲ್ಲಿ ಶಂಕಿತ ಐಸಿಸ್ ಉಗ್ರ ವಶಕ್ಕೆ
ಏನಿದು ಪ್ರಕರಣ?
ಲಷ್ಕರೆ ತಯ್ಬಾ ಉಗ್ರ, ಸಂಘಟನೆಯ ಕಿಂಗ್‌ಪಿನ್ ಆಗಿರುವ ಟಿ ನಾಸೀರ್ ಎಂಬಾತನು ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿದ್ದುಕೊಂಡು ಹಲವು ಕೈದಿಗಳು ಉಗ್ರವಾದದಲ್ಲಿ ತೊಡಗುವಂತೆ ಪ್ರಚೋದನೆ ನೀಡಿದ್ದಾನೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ನಡೆಸುತ್ತಿದೆ. ಹೀಗೆ ಟಿ ನಾಸೀರ್‌ನಿಂದ ಪ್ರಚೋದನೆಗೊಂಡು ಉಗ್ರವಾದದಲ್ಲಿ ತೊಡಗಿದ ಐವರು ಕೈದಿಗಳ ವಿರುದ್ಧ ಎನ್‌ಐಎ ಈಗಾಗಲೇ ತನಿಖೆ ನಡೆಸುತ್ತಿದೆ. ಇನ್ನೂ ಹಲವು ಕೈದಿಗಳು ಕೂಡ ಟಿ ನಾಸೀರ್‌ನಿಂದ ಪ್ರಚೋದನೆಗೊಂಡು ಉಗ್ರ ದಾಳಿಗೆ ಸಂಚು ರೂಪಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ