Site icon Vistara News

NIA Team Accident: ಎನ್‌ಐಎ ತಂಡ ಸಂಚರಿಸುತ್ತಿದ್ದ ವಾಹನಕ್ಕೆ ಬೈಕ್‌ ಡಿಕ್ಕಿ, ಸೊಸೈಟಿ ಸಿಇಒ ಸಾವು

laxmana naika

ಪುತ್ತೂರು: ಎನ್ಐಎ ತಂಡ ಸಂಚರಿಸುತ್ತಿದ್ದ ಪೊಲೀಸ್ ವಾಹನ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್‌ ಸವಾರ, ಸಹಕಾರಿ ಸಂಘದ ಸಿಇಒ ಮೃತಪಟ್ಟ ಘಟನೆ ಪುತ್ತೂರು ಸಮೀಪ ನಡೆದಿದೆ.

ಮೃತಪಟ್ಟವರು ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ ನಾಯ್ಕ ಬಿ. (50). ಪುತ್ತೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡ ಸಂಚರಿಸುತ್ತಿದ್ದ ಪೊಲೀಸ್ ವಾಹನ ಹಾಗೂ ಬೈಕ್ ಮಾ.5ರಂದು ಮುಖಾಮುಖಿ ಡಿಕ್ಕಿಯಾಗಿದ್ದವು. ಮಾಣಿ ಮೈಸೂರು ರಸ್ತೆಯ ಸಂಪ್ಯ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಭಾನುವಾರ ರಾತ್ರಿ ವಿಶೇಷ ತನಿಖೆಯ ದೃಷ್ಟಿಯಿಂದ ಸಂಚರಿಸುತ್ತಿದ್ದ ಎನ್‌ಐಎ ತಂಡದ ಪೊಲೀಸ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿದೆ.

ಪೊಲೀಸ್ ವಾಹನ ಜಿಲ್ಲೆಯ ಡಿ.ಆರ್.ಗೆ ಸೇರಿದ್ದಾಗಿದ್ದು, ಸುಳ್ಯ ಕಡೆಯಿಂದ ಪುತ್ತೂರಿಗೆ ಆಗಮಿಸುತ್ತಿದ್ದ ಸಂದರ್ಭ ಪುತ್ತೂರಿನಿಂದ ಆರ್ಲಪದವು ಕಡೆಗೆ ಹೋಗುತ್ತಿದ್ದ ಬೈಕ್ ಪೊಲೀಸ್ ವಾಹನಕ್ಕೆ ಡಿಕ್ಕಿಯಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳ ತಂಡ ಪುತ್ತೂರಿಗೆ ಆಗಾಗ ಆಗಮಿಸುತ್ತದೆ. ಆಗ ರಾಜ್ಯ ಪೊಲೀಸ್ ವಾಹನವನ್ನು ಅವರ ಸಂಚಾರಕ್ಕೆ ಬಳಸಿಕೊಳ್ಳಲಾಗುತ್ತದೆ. ಸ್ಥಳಕ್ಕೆ ಪುತ್ತೂರು ಶಾಸಕ ಸಂಜೀವ ಮಟಂದೂರು ಸೇರಿದಂತೆ ಹಲವು ಪ್ರಮುಖರು ಭೇಟಿ ನೀಡಿದ್ದಾರೆ.

ಇದನ್ನೂ ಓದಿ: Road Accident: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು; ಬೈಕ್‌ ಅಪಘಾತದಿಂದ ನರಳಾಡುತ್ತಿದ್ದವನ ಸಹಾಯಕ್ಕೆ ಬಂದ ಹೋಂ ಮಿನಿಸ್ಟರ್‌

Exit mobile version