Site icon Vistara News

NICE Road : ʼನೈಸ್ʼ ಕರ್ಮಕಥೆ ಪಾರಾಯಣ ಮಾಡಿ; ಸಿಎಂ ಸಿದ್ದರಾಮಯ್ಯ ಏಟಿಗೆ ಎಚ್‌ಡಿಕೆ ಎದುರೇಟು!

NICE Road CM Siddaramaiah and HD Kumaraswamy

ಬೆಂಗಳೂರು: ನೈಸ್ ಯೋಜನೆಯ (NICE Road) ಬಗ್ಗೆ ತನಿಖೆ ನಡೆಸಲು ನಾವೇನು ಕೈಕಟ್ಟಿ ಹಾಕಿದ್ದವೇ ಎಂದು ತಮ್ಮನ್ನು ಟೀಕಿಸಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) , ಇಡೀ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯುವಂತೆ ಆಗ್ರಹ ಮಾಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ‘ಸಿದ್ದನೆಪ’ ಹೇಳದೆ ನೈಸ್ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆದು ಬದ್ಧತೆ ತೋರಿ ಎಂದು ಹೇಳಿದ್ದಾರೆ ಹಾಗೂ ‘ನೈಸ್‌ಗೆ ನ್ಯಾಯ ಕೊಡಿ’ ಎಂದು ಹ್ಯಾಷ್‌ಟ್ಯಾಗ್ ಮಾಡಿ ಸರ್ಕಾರದ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: Lok Sabha Election 2024 : ಕರ್ನಾಟಕದಲ್ಲಿ ಮೇಜರ್‌ ಸರ್ಜರಿ; ವಿಧಾನಸಭೆಯಲ್ಲಿ ಸೋತವರಿಗೆ‌ ಸಂಸತ್ ಟಿಕೆಟ್?

ಟ್ವೀಟ್‌ನಲ್ಲೇನಿದೆ?

ಮಾನ್ಯ ಸಿದ್ದರಾಮಯ್ಯರವರೇ; ನೀವು ಈಗ ಕರ್ನಾಟಕದ ಮುಖ್ಯಮಂತ್ರಿ. ನನಗೂ ಮುಖ್ಯಮಂತ್ರಿ, ಮಹದೇವಪ್ಪ ಅವರಿಗೂ ಮುಖ್ಯಮಂತ್ರಿ! ಕಾಕಾ ಪಾಟೀಲರಿಗೂ ಮುಖ್ಯಮಂತ್ರಿ!! ಇಂಥ ನಿಮ್ಮನ್ನು ‘ಸುಳ್ಳುರಾಮಯ್ಶ’ ಎಂದು ಕರೆಯುವುದು ನನಗೆ ಸುತಾರಾಂ ಇಷ್ಟವಿಲ್ಲ. ಏಕೆಂದರೆ, ನಿಮ್ಮ ಹೆಸರಿನಲ್ಲೇ ‘ರಾಮ’ರಿದ್ದಾರೆ. ತಾವು ‘ಸತ್ಯರಾಮಯ್ಯ’ನವರೇ ಆಗಿದ್ದರೆ, ಸ್ವತಃ ತಾವುಗಳೇ ನೇಮಿಸಿದ್ದ, ತಮ್ಮದೇ ಸರ್ಕಾರದ ಕಾನೂನು ಸಚಿವರೇ ಮುಖ್ಯಸ್ಥರಾಗಿದ್ದ ಸದನ ಸಮಿತಿ ನೀಡಿದ್ದ ನೈಸ್ ಕರ್ಮಕಥೆಯನ್ನು ನೀವು ದಯಮಾಡಿ ಪುರುಸೊತ್ತು ಮಾಡಿಕೊಂಡು ಪಾರಾಯಣ ಮಾಡಿ ಎಂದು ಕುಮಾರಸ್ವಾಮಿ ಅವರು ಸಲಹೆ ಮಾಡಿದ್ದಾರೆ.

ನೈಸ್ ಅಕ್ರಮ ತನಿಖೆಗೆ ನಾನೇನು ಮಾಡಿದ್ದೆ ಎಂದು ಸಿಎಂ ಸಾಹೇಬರು ಕೇಳಿದ್ದಾರೆ. ಈ ಬಾಲಿಶ ಪ್ರಶ್ನೆಗೆ ಗೌರವದಿಂದಲೇ ಉತ್ತರಿಸುವೆ. ನಾನು ಸಿಎಂ ಆಗಿದ್ದಾಗ ನನ್ನ ಜತೆಗಿದ್ದ ಅಡ್ವೋಕೇಟ್ ಜನರಲ್, ಅವರ ಕಾನೂನು ತಂಡ ನೈಸ್ ದೌಲತ್ತಿನ ಹುಟ್ಟಡಗಿಸಿತ್ತು. ಅದುವರೆಗೆ ಅಧಿಕಾರಿಗಳನ್ನು ಬೆದರಿಸಿಟ್ಟುಕೊಂಡಿದ್ದ ಆ ಕಂಪನಿಗೆ ಬೊಂಬೆ ತೋರಿಸಿದ್ದೆವು ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ನಾನು ತೆಗೆದುಕೊಂಡ ರಿಸ್ಕ್ ಸಣ್ಣದೇನಲ್ಲ ಸಿದ್ದರಾಮಯ್ಯನವರೇ

ವಿವಿಧ ನ್ಯಾಯಾಲಯಗಳಲ್ಲಿ ಹೂಡಲಾಗಿದ್ದ ಎಲ್ಲ ನಿಂದನಾ ಅರ್ಜಿಗಳನ್ನು 2019 ಜುಲೈನಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್ ವಜಾ ಮಾಡಿತ್ತು. ಅದಕ್ಕಾಗಿ ಅಂದಿನ ಅಡ್ವೋಕೇಟ್ ಜನರಲ್, ಮತ್ತವರ ಕಾನೂನು ತಂಡವನ್ನು ನಾನು ಅಭಿನಂದಿಸಲೇಬೇಕು. ಹಿಂದಿನ ಬಿಜೆಪಿ ಸರ್ಕಾರವೂ ಈ ಲೂಟಿ ಕಂಪನಿಯ ರೆಕ್ಕೆಪುಕ್ಕ ಕತ್ತರಿಸಿ ಹಾಕಿತ್ತು. ಅಂದಿಗೇ (2018) ನೈಸ್‌ನ ಕೊಚ್ಚೆಯಲ್ಲಿ ಹೊರಳಾಡಿ ಪೊಗದಸ್ತಾಗಿ ಮೇಯ್ದು ಬಲಿತಿದ್ದ ಪ್ರಾಣಿಗಳನ್ನು ಎದುರು ಹಾಕಿಕೊಂಡು ನಾನು ತೆಗೆದುಕೊಂಡ ರಿಸ್ಕ್ ಸಣ್ಣದೇನಲ್ಲ ಸಿದ್ದರಾಮಯ್ಯನವರೇ. ನನ್ನ ಮೇಲೆ ಬಂದ ಒತ್ತಡಗಳ ಬಗ್ಗೆ ನಿಮಗೂ ಮಾಹಿತಿ ಇರಬಹುದು. ಆಗ ನೀವು ಮತ್ತು ನಿಮ್ಮ ಟೀಮು ನನಗೆ ಕೊಟ್ಟ ‘ನಿತ್ಯ ಕಿರುಕುಳ’ವನ್ನು ಮರೆಯಲಾದೀತೆ? ಎಂದು ಅವರು ಚಾಟಿ ಬೀಸಿದ್ದಾರೆ.‌

ನಿಮ್ಮದು ‘ಅಪರ ಹರಿಶ್ಚಂದ್ರ’ನ ಸರ್ಕಾರ!

ನಿಮ್ಮ ಹಂಗಿನಲ್ಲಿದ್ದ ನನಗೆ, ನಿಮ್ಮದೇ ಪಕ್ಷದವರ ವಿರುದ್ಧ ತನಿಖೆ ನಡೆಸಿ, ನೈಸ್ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯುವ ದಮ್ಮು ತಾಕತ್ತು ಇರಲಿಲ್ಲ, ನಿಜ ಒಪ್ಪಿಕೊಳ್ಳುತ್ತೇನೆ. ಆದರೆ, ನಿಮ್ಮದು ಪೂರ್ಣ ಬಹುಮತದ ಬಲಿಷ್ಠ ಸರ್ಕಾರ, ನುಡಿದಂತೆ ನಡೆಯುವ ‘ಅಪರ ಹರಿಶ್ಚಂದ್ರ’ನ ಸರ್ಕಾರ! ಹೌದಲ್ಲವೇ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದ್ದಾರೆ.

ಹಾಗಿದ್ದರೆ ಏಕೆ ತಡ? ಸ್ವತಃ ನೀವೇ ನೇಮಿಸಿದ್ದ ಸದನ ಸಮಿತಿ (2014-2016) ವರದಿಯ ಮೇಲೆ ಖಡಕ್ ಕ್ರಮ ಜರುಗಿಸಿ. ವರದಿಯಲ್ಲಿ ನೈಸ್ ಅಕ್ರಮಗಳ ಭಾಗವತವೇ ತೆರೆದುಕೊಂಡಿದೆ. ಇಡೀ ಯೋಜನೆಯನ್ನು ಸರ್ಕಾರದ ವಶಕ್ಕೆ ಪಡೆಯಲು ದಿಟ್ಟಹೆಜ್ಜೆ ಇಡಿ. ‘ಸಿದ್ದನೆಪ’ ಹೇಳಿ ಸಮಯವನ್ನು ಕೊಲ್ಲಬೇಡಿ? ಬಹುಮತ ಇದ್ದರೆ ಸಾಲದು, ಬದ್ಧತೆಯೂ ಇರಬೇಕು. ಅಲ್ಲವೇ? ಎಂದು ಕುಮಾರಸ್ವಾಮಿ ಅವರು ಕುಟುಕಿದ್ದಾರೆ.‌

ಇದನ್ನೂ ಓದಿ: Rain News : ಮಳೆ ನೀರಿನಿಂದ ಭರ್ತಿಯಾಗಿದ್ದ ತಗ್ಗು ಗುಂಡಿಗೆ ಬಿದ್ದು ಬಾಲಕರಿಬ್ಬರ ದುರ್ಮರಣ

ಸತ್ಯರಾಮಯ್ಯರಾಗಿ ಇತಿಹಾಸದಲ್ಲಿ ದಾಖಲಾಗಿ

ನಾನು ರೈತರ ಸಾಲಮನ್ನಾ ಮಾಡಿದೆ ಎನ್ನುವುದು ಎಷ್ಟು ಸತ್ಯವೋ, ಅದಕ್ಕೆ ನೀವು ಹೆಜ್ಜೆಹೆಜ್ಜೆಗೂ ಅಡ್ಡಿ ಮಾಡಿದ್ದೂ ಅಷ್ಟೇ ಸತ್ಯ. ಭಾಗ್ಯಗಳಿಗೆ ನಯಾಪೈಸೆ ಕಡಿಮೆ ಆಗಬಾರದು ಎಂದು ನನಗೆ ಕೊಟ್ಟ ಚಿತ್ರಹಿಂಸೆ ಅಸತ್ಯವೇ? ಗಟ್ಟಿ ದನಿಯಲ್ಲಿ ಅಬ್ಬರಿಸಿ ಹೇಳಿದರೆ ಸುಳ್ಳು ಸತ್ಯವಾಗುವುದಿಲ್ಲ. ಸತ್ಯರಾಮಯ್ಯರಾಗಿ ಇತಿಹಾಸದಲ್ಲಿ ದಾಖಲಾಗಿ ಎಂದು ಹಾಲಿ ಮುಖ್ಯಮಂತ್ರಿಗಳನ್ನು ಮಾಜಿ ಮುಖ್ಯಮಂತ್ರಿಗಳು ಕಾಲೆಳೆದಿದ್ದಾರೆ.

Exit mobile version