Site icon Vistara News

ಸಿದ್ದರಾಮಯ್ಯ ಹಿಟ್‌ ಲಿಸ್ಟ್‌ನಲ್ಲಿದ್ರು, ನನಗೂ ಜೀವ ಬೆದರಿಕೆ ಬಂದಿತ್ತು: ನಿಡುಮಾಮಿಡಿ ಶ್ರೀ

ನಿಡುಮಾಮಿಡಿ ಶ್ರೀ

ಚಿಕ್ಕಬಳ್ಳಾಪುರ: ವಿಚಾರವಾದಿ ಎಂ.ಎಂ.ಕಲಬುರ್ಗಿ ಹತ್ಯೆ ಆದಾಗ ಮೇಣದ ಬತ್ತಿ ಹಚ್ಚಿ ಸುಮ್ಮನಾದೆವು, ಪತ್ರಕರ್ತೆ ಗೌರಿ ಲಂಕೇಶ್ ಹೋದಾಗ “ನಾನು ಗೌರಿ” ಎಂದು ಸುಮ್ಮನಾದೆವು. ಆ ಸಮಯದಲ್ಲಿ ನನಗೂ ಸೇರಿ ಭಗವಾನ್, ಚಂಪಾ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯಗೂ ಜೀವ ಬೆದರಿಕೆ ಬಂದಿತ್ತು ಎಂದು ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಹೇಳಿದರು.

ಜಿಲ್ಲೆಯ ಗೌರಿಬಿದನೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಮಾನತಾ ಸೌಧದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರೊ.ಬಿ.ಗಂಗಾಧರ್ ಮೂರ್ತಿ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ದರಾಮಯ್ಯ ಸಹ ಹಿಟ್‌ ಲಿಸ್ಟ್‌ನಲ್ಲಿದ್ದರು. ನನ್ನನ್ನೂ ಮುಗಿಸಲು ಪುಣ್ಯಾತ್ಮರು ಎರಡು ತಂಡಗಳನ್ನು ನೇಮಿಸಿ ಕೊಲೆಗೆ ಸಂಚು ರೂಪಿಸಿದ್ದರು ಎಂದು ಆರೋಪಿಸಿ, ದೇವರ ಕೃಪೆಯಿಂದ ಪಾರಾಗಲಾಗಿದೆ. ಕೊಲ್ಲುವವನು ಒಬ್ಬ ಇದ್ದರೆ ಕಾಯುವವನು ಒಬ್ಬ ಇರುತ್ತಾನೆ ಎಂದರು.

ಇದನ್ನೂ ಓದಿ | PayCM | ಪೇಸಿಎಂ ಪೋಸ್ಟರ್ ಅಂಟಿಸಿದ ಸಿದ್ದು, ಡಿಕೆಶಿ ವಿರುದ್ದ ಕಾನೂನು ಕ್ರಮ ಖಚಿತ ಎಂದ ಸಿಎಂ ಬೊಮ್ಮಾಯಿ

ನಾನು ಅಥವಾ ಸಿದ್ದರಾಮಯ್ಯ ಅವರು ಹೋದರೂ ಜನರು ಒಂದು ದಿನ ಮೇಣದ ಬತ್ತಿ ಹಚ್ಚಿ ಸುಮ್ಮನಾಗುತ್ತಾರೆ. ಸಿದ್ದರಾಮಯ್ಯ ಅವರು ರಾಜ್ಯದ ಆಶಾಕಿರಣ, ಸತ್ತ ಮೇಲೆ ಮೇಣದ ಬತ್ತಿ ಹಚ್ಚಿ ಸಮಾಧಾನಪಡುವ ಬದಲು ಬದುಕಿದ್ದಾಗ ಅವರಿಗೆ ಶಕ್ತಿ ತುಂಬಬೇಕು. ಸಮಾಜದ ಜನ ಬದಲಾವಣೆ ಬಯಸುತ್ತಿದ್ದಾರೆ, ಆ ಬಯಕೆಯನ್ನು ಮತವನ್ನಾಗಿ ಪರಿವರ್ತಿಸಬೇಕು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಆಶಿಸಿದರು.

ನೀವು 10 ಪರ್ಸೆಂಟ್‌ನಲ್ಲೇ ಇರಿ, 40 ಪರ್ಸೆಂಟ್‌ ಬೇಡ
ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಸರ್ಕಾರವನ್ನು 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಟೀಕಿಸಿದ್ದರು. ಪರವಾಗಿಲ್ಲ, ನೀವು 10 ಪರ್ಸೆಂಟ್‌ನಲ್ಲೇ ಇರಿ, ಅವರಂತೆ 40 ಪರ್ಸೆಂಟ್ ಆಗಬೇಡಿ. ಶೇ.40 ತಪ್ಪಿಸಿ ಶೇ.10ಕ್ಕೆ ಬನ್ನಿ, ನಾವು ಒಪ್ಪಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯಗೆ ನಿಡುಮಾಮಿಡಿ ಸ್ವಾಮೀಜಿ ವಿವಾದಾತ್ಮಕ ಸಲಹೆ ನೀಡಿದರು.

ಬೆಲೆ ಏರಿಕೆ ರೀತಿಯಲ್ಲಿ ಭ್ರಷ್ಟಾಚಾರ ಏರಿಕೆ ಆಗುತ್ತಿದೆ. ಭ್ರಷ್ಟಾಚಾರವನ್ನು ಯಾವ ಪಕ್ಷದಿಂದ ನಿವಾರಣೆ ಮಾಡಲು ಸಾಧ್ಯವಿಲ್ಲ, ವ್ಯವಸ್ಥೆಯಲ್ಲಿ ಇಂತಹ ಅಸಹಾಯಕತೆ ನಿರ್ಮಾಣವಾಗಿದೆ. ಗಣನೀಯವಾಗಿ ತಗ್ಗಿಸುವ ಪ್ರಯತ್ನವನ್ನು ಮಾಡಬೇಕು, ಈ ಅಂಶವನ್ನು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುವುದು ಹಾಗೂ ಭ್ರಷ್ಟಾಚಾರವನ್ನು ಗಣನೀಯವಾಗಿ ತಗ್ಗಿಸುವ ಭರವಸೆ ನೀಡಿದರೆ ನಿಮ್ಮನ್ನು ಜನರು ಸ್ವಾಗತಿಸುತ್ತಾರೆ ಎಂದು ಸಿದ್ದರಾಮಯ್ಯಗೆ ಸಲಹೆ ನೀಡಿದರು.

ಇದನ್ನೂ ಓದಿ | ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ ಇಬ್ಬರೂ ನರಿಗಳು; ಕುರಿಗಳ ಥರ ವೇಷ ಹಾಕ್ಕೊಂಡು ಬರ್ತಾರೆ ಅಷ್ಟೆ ಎಂದ ಶ್ರೀರಾಮುಲು

Exit mobile version