Site icon Vistara News

Tiger Nail: ನಿಖಿಲ್‌ ಹುಲಿ ಉಗುರಿನ ಪೆಂಡೆಂಟ್‌ ಹಾಕಿಲ್ಲ, ಅದು ಸಿಂಥೆಟಿಕ್‌: ಎಚ್‌ಡಿಕೆ ಸ್ಪಷ್ಟನೆ

Nikhil Kumarawamy and HD Kumaraswamy

ಬೆಂಗಳೂರು: ನಿಖಿಲ್‌ ಕುಮಾರಸ್ವಾಮಿ ಧರಿಸಿದ್ದ ಹುಲಿ ಉಗುರು ರೀತಿಯ ಪೆಂಡೆಂಟ್‌ ನೈಜವಲ್ಲ. ಸಿಂಥೆಟಿಕ್‌ನಿಂದ ಮಾಡಿರುವುದು. ಸಾಕಷ್ಟು ಜನರ ಬಳಿ ಇಂತಹ ಪೆಂಡೆಂಟ್ (Tiger Nail) ಇರುತ್ತದೆ. ಅದನ್ನು ಪರಿಶೀಲನೆ ಮಾಡಲು ಅರಣ್ಯಾಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಜೆಪಿ ನಗರದ ನಿವಾಸದಲ್ಲಿ ಅರಣ್ಯಾಧಿಕಾರಿಗಳು ಪೆಂಡೆಂಟ್‌ (Tiger Claw Pendant) ಅನ್ನು ಪರಿಶೀಲನೆ ನಡೆಸಿದ ವೇಳೆ ಮಾಜಿ ಸಿಎಂ ಮಾತನಾಡಿದ್ದು, ಇವತ್ತು ಬೆಳಗ್ಗಿನಿಂದ ಚಿತ್ರನಟರು, ಜ್ಯೋತಿಷಿಗಳು ಇಟ್ಟಿರುವ ಹುಲಿ ಉಗುರುಗಳ ಪೆಂಡೆಂಟ್‌ಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರು ಈ ವಿಷಯದಲ್ಲಿ ಕೇಳಿ ಬಂದಿದೆ. ನಿಖಿಲ್ ಮದುವೆ ಸಂದರ್ಭದಲ್ಲಿ ಕೊರಳಿಗೆ ಹಾಕಿದ್ದ ಪೆಂಡೆಂಟ್ ಅದು ಎಂದು ಹೇಳಿದ್ದಾರೆ.

ನಿಖಿಲ್ ಹೆಸರು ಬಂದ ಬಳಿಕ ಸ್ವತಃ ನಾನೇ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ, ಪರಿಶೀಲನೆ ಮಾಡಿಕೊಳ್ಳಿ, ನಿಮಗೆ ಮುಜುಗರ ಆಗಬಾರದು. ಈ ರಾಜ್ಯದಲ್ಲಿ ನ್ಯಾಯ ಎನ್ನುವುದು ಎಲ್ಲರಿಗೂ ಒಂದೇ ಎಂದು ತಿಳಿಸಿದ್ದೆ. ಅದರಂತೆ ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Tiger Nail : ಹುಲಿ ಉಗುರು ಪತ್ತೆಯಾದರೆ ಏನು ಮಾಡೋಣ? ಶಿಫಾರಸು ಮಾಡಲು ಸಮಿತಿ ರಚನೆ

ಪ್ರಕರಣದಲ್ಲಿ ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲು ಯಾವುದೇ ತೊಂದರೆ ಇಲ್ಲ. ನೀವು ಬಂದು ಪರಿಶೀಲನೆ ಮಾಡಿ ಎಂದು ಹೇಳಿದ್ದೇನೆ. ಅದರಂತೆ ಅಧಿಕಾರಿಗಳು ಬಂದು ಮಹಜರು ಮಾಡಿದ್ದಾರೆ. ನಾನೇ ಅಧಿಕಾರಿಗಳ ಜತೆಯಲ್ಲಿ ಚಿನ್ನದ ಅಂಗಡಿಗೆ ಅದನ್ನು ಕಳುಹಿಸಿದ್ದೇನೆ. ನಮ್ಮ ಬಳಿ ಇರುವ ಹುಲಿ ಉಗುರು ರೀತಿಯ ಪೆಂಡೆಂಟ್ ಸಿಂಥೆಟಿಕ್‌ನಿಂದ ಮಾಡಿರುವುದು, ಸಾಕಷ್ಟು ಜನರ ಬಳಿ ಇಂತಹ ಪೆಂಡೆಂಟ್ ಇರುತ್ತದೆ ಎಂದು ಹೇಳಿದ್ದಾರೆ.

ನಿಖಿಲ್‌ಗೆ ಒಡವೆ ಶೋಕಿ ಇಲ್ಲ

ನಾನು ಬಹಳಷ್ಟು ಸಿನಿಮಾಗಳಲ್ಲಿ ನೋಡಿದ್ದೀನಿ, ನಟರು ಇಂತಹ ಪೆಂಡೆಂಟ್‌ ಧರಿಸಿರುತ್ತಾರೆ. ನಾನು ಕೂಡ ಸಿನಿಮಾ ನಿರ್ಮಾಪಕನೇ. ಅನೇಕರು ಸ್ಟೈಲ್ ಆಗಿದೆ ಎಂದು ಧರಿಸುತ್ತಾರೆ. ನಿಖಿಲ್ ಮದುವೆಯಲ್ಲಿ ಯಾರೋ ಉಡುಗೊರೆ ಕೊಟ್ಟರು ಅಂತ ಹಾಕಿದ್ದು ಬಿಟ್ಟರೆ, ಅದು ಬೀರುವಿನಲ್ಲಿ ಬಿದ್ದಿತ್ತು. ನಿಖಿಲ್‌ಗೆ ಯಾರೋ ಸಂಬಂಧಿಕರು ಕೊಟ್ಟಿದ್ದಾರೆ. ನಿಖಿಲ್ ಒಡವೆ ಹಾಕಲ್ಲ, ಅವರಿಗೆ ಒಡವೆ ಶೋಕಿ ಇಲ್ಲ. ಇವತ್ತು ಬೆಳಗ್ಗೆ ನನ್ನ ಸೊಸೆಯ ಬಳಿ ಕೇಳಿ ಅದನ್ನು ತೆಗೆದುಕೊಂಡು, ಅಧಿಕಾರಿಗಳಿಗೆ ನೀಡಿದ್ದೇನೆ ಎಂದು ಸ್ಪಷನೆ ನೀಡಿದರು.

ಇದನ್ನೂ ಓದಿ | Tiger Nail : ದರ್ಶನ್‌, ಜಗ್ಗೇಶ್‌, ನಿಖಿಲ್ ಪೆಂಡೆಂಟ್‌ ವಶಕ್ಕೆ; ರಾಕ್‌ಲೈನ್‌ ಮನೆಯಿಂದ ಬರಿಗೈಲಿ ವಾಪಸ್

ವನ್ಯಜೀವಿ ಸಂಕ್ಷರಣಾ ಕಾಯ್ದೆ ಬಗ್ಗೆ ನಮಗೂ ಗೊತ್ತಿದೆ. ಅಂತಹ ವಸ್ತುಗಳನ್ನು ಇಟ್ಟುಕೊಳ್ಳುವುದು ಕಾನೂನು ಬಾಹಿರ ಎನ್ನುವ ಅರಿವು ನಮಗಿದೆ. ನಾವು ಅಂತಹ ಕೆಲಸ ಮಾಡುವುದಿಲ್ಲ. ಹೀಗಾಗಿ ನಮಗೆ ಯಾವುದೇ ಗಾಬರಿ ಇಲ್ಲ, ಆತಂಕ ಇಲ್ಲ. ಅಧಿಕಾರಿಗಳು ಎಫ್.ಎಸ್.ಎಲ್ʼಗೆ ಕಳುಹಿಸಿ ವಾಸ್ತವಾಂಶ ಪತ್ತೆ ಹಚ್ಚಲಿ. ಇದರಲ್ಲಿ ಅನುಮಾನ ಎನ್ನುವ ಮಾತು ಬರಬಾರದು ಎಂದು ತಿಳಿಸಿದ್ದಾರೆ.

Exit mobile version