Site icon Vistara News

ರಾಮನಗರದಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ; ಶೀಘ್ರ ಪ್ರಣಾಳಿಕೆ ಪ್ರಕಟಣೆ ಭರವಸೆ

Nikhil Kumaraswamy

ರಾಮನಗರ: ನಟ, ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿ ಅವರು ಅಭಿಮಾನಿಗಳು ಹಾಗೂ ಜೆಡಿಎಸ್‌ ಕಾರ್ಯಕರ್ತರೊಡನೆ ಶನಿವಾರ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದ ನಿವಾಸ ಹಾಗೂ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸಾವಿರಾರು ಜನರು ಜನ್ಮದಿನದ ಶುಭಾಶಯ ಕೋರಿದರು. ಅಲ್ಲದೆ, ರಾಮನಗರ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಅಲ್ಲಿ ಅವರ ಮೊದಲ ಹುಟ್ಟುಹಬ್ಬ ನಡೆದಿದೆ. ಅಲ್ಲದೆ, ರಾಮನಗರದ ಅಭಿವೃದ್ಧಿ ದೃಷ್ಟಿಯಿಂದ ಶೀಘ್ರ ಪ್ರಣಾಳಿಕೆ ಬಿಡುಗಡೆಗೊಳಿಸುವುದಾಗಿ ನಿಖಿಲ್‌ ಘೋಷಿಸಿದ್ದಾರೆ.

ನಗರಕ್ಕೆ ಆಗಮಿಸಿದಾಗ ನಿಖಿಲ್ ಕುಮಾರಸ್ವಾಮಿಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿ, ಕುದುರೆ ಸಾರೋಟಿನಲ್ಲಿ ಮೆರವಣಿಗೆ ನಡೆಸಿದರು. ಬಳಿಕ ಹಿಂದು ದೇವಾಲಯ, ಚರ್ಚ್, ಮಸೀದಿಗೆ ನಿಖಲ್‌ ಕುಮಾರಸ್ವಾಮಿ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದರು.

ನಂತರ ಮಾತನಾಡಿದ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಇವತ್ತು ನನ್ನ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದೇನೆ. ಪ್ರತಿ ವರ್ಷ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಭಿಮಾನಿಗಳು, ಕಾರ್ಯಕರ್ತರು ಶುಭಕೋರುತ್ತಾರೆ. ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಕಳೆದ 30 ವರ್ಷಗಳಿಂದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಹಾಲಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. ಈಗ ಕ್ಷೇತ್ರದ ಅಭ್ಯರ್ಥಿಯಾಗಿರುವುದರಿಂದ, ನನ್ನದೇ ಆದಂತಹ ಪ್ರಣಾಳಿಕೆ ಮಾಡಿದ್ದೇನೆ. ಕೆಲವೇ ದಿನಗಳಲ್ಲಿ ನನ್ನ ಪ್ರಣಾಳಿಕೆ ಬಿಡುಗಡೆ ಮಾಡುತ್ತೇನೆ ಎಂದರು.

ಇದನ್ನೂ ಓದಿ | ಮಗಳನ್ನು ಬಾವಿಗೆ ಎಸೆದು ಅಳಿಯ ಕೊಂದಿದ್ದಾನೆ; ಶಿಕ್ಷೆ ಕೊಡಿಸಿ ಎಂದು ಎಚ್.ಡಿ. ಕುಮಾರಸ್ವಾಮಿ ಪಾದ ಹಿಡಿದು ಕಣ್ಣೀರಿಟ್ಟ ಮಹಿಳೆ

ಜ.17ರಂದು ಇದೇ ಸ್ಥಳದಲ್ಲಿ ಎಲ್ಲ ಕಾರ್ಯಕರ್ತರು, ಮುಖಂಡರ ಅಪೇಕ್ಷೆ ಮೇರೆಗೆ ನಮ್ಮ ತಾಯಿ ನನ್ನನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದರು. ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಇರದ ಚಿನ್ನದಂತಹ ಕಾರ್ಯಕರ್ತರು ನಮ್ಮ ಪಕ್ಷದಲ್ಲಿದ್ದಾರೆ. ಹುಟ್ಟುಹಬ್ಬದಂದು ನನ್ನ ಜೀವನದಲ್ಲಿ ಮರೆಯಲಾಗದಂತಹ ಅದ್ಧೂರಿ ಸ್ವಾಗತವನ್ನು ಇಲ್ಲಿನ ಜನ ಕೋರಿದ್ದಾರೆ ಎಂದು ಹೇಳಿದರು.

ರಾಮನಗರ ಭೂಮಿಯಲ್ಲಿ ಒಂದು ಶಕ್ತಿ ಇದೆ. 224 ಕ್ಷೇತ್ರದಲ್ಲಿ ರಾಮನಗರದಂತಹ ಚಿನ್ನದಂತಹ ಮತ್ತೊಂದು ಕ್ಷೇತ್ರ ಸಿಗುವುದಿಲ್ಲ. ಕುಮಾರಸ್ವಾಮಿ ಅವರು ರಾಮನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡಿದರು. ನಂತರ ಆದಂತಹ ಅಭಿವೃದ್ಧಿಯನ್ನು ಜನರು ಕಂಡಿದ್ದಾರೆ. ಮುಂದಿನ ಐದು ವರ್ಷಗಳ ಕಾಲದಲ್ಲಿ ನನ್ನದೇ ಆದಂತಹ ಸಂಕಲ್ಪ ಇದೆ. ರಾಮನಗರ ಜನರ ಸೇವೆ ಮಾಡಲು ನನಗೂ ಒಂದು ಅವಕಾಶ ಕೊಡುತ್ತೀರಿ ಎಂದು ನಂಬಿಕೆ ಇಟ್ಟಿದ್ದೇನೆ ಎಂದು ತಿಳಿಸಿದರು.

Exit mobile version