Site icon Vistara News

Nirmala Sitharaman: ಕಾಂಗ್ರೆಸ್‌, ಜೆಡಿಎಸ್‌ ಸರ್ಕಾರಗಳೂ ನಂದಿನಿ ಏಳಿಗೆಗೆ ಕೊಡುಗೆ ನೀಡಿವೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

Nirmala Sitharaman speaks at Thinkers Forum event.

#image_title

ಬೆಂಗಳೂರು: ಕೆಎಂಎಫ್‌ ಹಾಲು ಖರೀದಿಗೆ ಧನಸಹಾಯ ನೀಡಿದ ಬಿ.ಎಸ್‌. ಯಡಿಯೂರಪ್ಪ ಮಹತ್ವದ ಪಾತ್ರ ವಹಿಸಿದ್ದಾರೆ. ನಂದಿನಿ ಏಳಿಗೆಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸರ್ಕಾರಗಳೂ ಕಾರಣವಾಗಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಭಿಪ್ರಾಯಪಟ್ಟಿದ್ದಾರೆ.

ದೇಶದ ಪ್ರತಿ ರಾಜ್ಯ ಸಹ ತನ್ನದೇ ಆದ ಹಾಲು ಒಕ್ಕೂಟವನ್ನು ಹೊಂದಿದೆ. ನಾನು ಸಹ ಕರ್ನಾಟಕಕ್ಕೆ ಬಂದಾಗ ನಂದಿನಿ ಉತ್ಪನ್ನಗಳನ್ನು ಬಳಕೆ ಮಾಡುತ್ತೇನೆ. ಹೆಚ್ಚುವರಿ ಪ್ರೋತ್ಸಾಹ ಧನ ನೀಡಿದ ಸಿಎಂ ಬಿ. ಎಸ್ ಯಡಿಯೂರಪ್ಪ ನಂದಿನಿ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ನೀಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳು ಸಹ ನಂದಿನಿ ಮೇಲೆತ್ತುವಲ್ಲಿ ಪ್ರಭಾವ ಬೀರಿವೆ.

ಕರ್ನಾಟಕ ಮಾತ್ರ ಅಲ್ಲದೆ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ನಂದಿನಿ ಇದೆ. ಅದೇ ರೀತಿ ಕರ್ನಾಟಕದಲ್ಲಿ ನಂದಿನಿ ಬಿಟ್ಟು ಬೇರೆ ಹಾಲಿನ ಉತ್ಪನ್ನಗಳು ಸಹ ಮಾರಾಟ ಆಗುತ್ತಿವೆ. ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಅಮುಲ್ ಕರ್ನಾಟಕಕ್ಕೆ ಪ್ರವೇಶ ಆಗಿತ್ತು. ಆದರೆ ಈಗ ಚುನಾವಣೆ ಇರುವ ಕಾರಣ ನಂದಿನಿ ವಿಚಾರವನ್ನು ಭಾವನಾತ್ಮಕ ಮಾಡಿದ್ದಾರೆ ಎಂದು ತಿಳಿಸಿದರು.

ಮೋಸದ ಆಪ್‌ ಕುರಿತು ಎಚ್ಚರಿಕೆಯಿರಲಿ
ಹೆಚ್ಚಿನ ಬಡ್ಡಿ ದರದ ಆಮಿಷವೊಡ್ಡಿ ಹಣವನ್ನು ಲಪಟಾಯಿಸುವ ಸಾಮಾಜಿಕ ಜಾಲತಾಣದಲ್ಲಿ ಪ್ರಭಾವಿಸುವವರನ್ನು ನಿಷೇಧಿಸುವ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದ ನಿರ್ಮಲಾ ಸೀತಾರಾಮನ್‌, ಈ ಕುರಿತು ಜನರು ಎಚ್ಚರಿಕೆ ವಹಿಸಬೇಕು ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹೂಡಿಕೆ ಕುರಿತು ಉತ್ತಮ ಸಲಹೆ ನೀಡುತ್ತಾರೆ. ಆದರೆ ಹತ್ತರಲ್ಲಿ ಏಳು ಜನರು ಸ್ವಹಿತಾಸಕ್ತಿ ಹೊಂದಿರುತ್ತಾರೆ. ಅನೇಕರು ಮೋಸದ ಜಾಲದ ಕಡೆಗೆ ಜನರನ್ನು ಸೆಳೆಯುತ್ತಾರೆ.

ಮೋಸದ ಆಪ್‌ಗಳನ್ನು ನಿಯಂತ್ರಿಸುವ ಕುರಿತು ಎಲೆಕ್ಟ್ರಾನಿಕ್ಸ್‌ ಸಚಿವಾಲಯ ಹಾಗೂ ಆರ್‌ಬಿಐ ಜತೆಗೂಡಿ ಹಣಕಾಸು ಸಚಿವಾಲಯ ಕೆಲಸ ಮಾಡುತ್ತಿದೆ. ಜನರು ಕಷ್ಟಪಟ್ಟು ಸಂಪಾದನೆ ಮಾಡಿದ ಹಣವನ್ನು ರಕ್ಷಿಸುವ ಚಿಂತನೆ ನಡೆಯುತ್ತಿದೆ ಎಂದರು.

ಕ್ರಿಪ್ಟೊ ಕರೆನ್ಸಿ ನಿಯಂತ್ರಣಕ್ಕೆ ಜಾಗತಿಕ ವ್ಯವಸ್ಥೆ
ಕ್ರಿಪ್ಟೊ ಕರೆನ್ಸಿಯನ್ನು ನಿಯಂತ್ರಣ ಮಾಡಬೇಕೆಂದರೆ ಅದಕ್ಕೆ ಜಾಗತಿಕ ಮಟ್ಟದಲ್ಲಿ ಚೌಕಟ್ಟನ್ನು ರೂಪಿಸಬೇಕು. ಅದರ ಹೊರತಾಗಿ ಭಾರತ ಮಾಥ್ರವೇ ನಿಯಂತ್ರಣ ಮಾಡಲು ಹೊರಟರೆ ಪರಿಣಾಮಕಾರಿ ಆಗುವುದಿಲ್ಲ ಎಂದರು. ಈ ಬಾರಿ ಭಾರತದಲ್ಲೇ ನಡೆಯುವ ಜಿ20 ಶೃಂಗದಲ್ಲಿ ಭಾರತವು ಈ ಕುರಿತು ಪ್ರಸ್ತಾವನೆ ಮುಂದಿಟ್ಟಿದೆ. ಜಿ20 ಈ ವಿಚಾರವನ್ನು ತನ್ನ ಅಜೆಂಡಾದಲ್ಲಿ ಇರಿಸಿಕೊಂಡಿದೆ ಹಾಗೂ ಕ್ರಿಪ್ಟೊ ಕರೆನ್ಸಿ ಕುರಿತು ಅಂತಾರಾಷ್ಟ್ರೀಯ ಹಣಕಾಸು ನಿಧಿಯೂ ಒಂದು ಒಂದು ಸಂಶೋಧನಾ ವರದಿ ಸಲ್ಲಿಸಿದೆ. ಜಿ20ರ ಮೂಲಕ ಸ್ಥಾಪಿಸಲಾದ ಹಣಕಾಸು ಸ್ಥಿರತೆ ಮಂಡಳಿಯೂ (ಎಫ್‌ಎಸ್‌ಬಿ) ಹಣಕಾಸು ಸ್ಥಿರತೆ ಕುರಿತು ವರದಿ ನೀಡಲು ಸಮ್ಮತಿಸಿದೆ. ಇದೆಲ್ಲವನ್ನೂ ಜಿ20ಯಲ್ಲಿ ಚರ್ಚೆ ಮಾಡಲಾಗುತ್ತದೆ ಎಂದರು.

ಇದನ್ನೂ ಓದಿ: ಅಮುಲ್‌ನಿಂದ ಮೈಸೂರು ಪಾಕ್‌ ತಯಾರಾದರೆ, ನಂದಿನಿಯಿಂದ ಗುಜರಾತ್‌ನ ಶ್ರೀಖಂಡ ತಯಾರು: ಬೊಮ್ಮಾಯಿ ಸವಾಲು

Exit mobile version