ಬೆಳಗಾವಿ: ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರಿಗೆ ಮತ್ತೊಮ್ಮೆ ಜೀವ ಬೆದರಿಕೆ ಕರೆ ಮಾಡಲಾಗಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿರುವ ನಿತಿನ್ ಗಡ್ಕರಿ ಅವರ ಜನಸಂಪರ್ಕ ಕಚೇರಿಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಿದ ವ್ಯಕ್ತಿ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾನೆ ಎಂದು ಹೇಳಲಾಗಿದೆ.
ಕಳೆದ ಜನವರಿ ತಿಂಗಳಲ್ಲಿ ಬೆಳಗಾವಿ ಹಿಂಡಲಗಾ ಜೈಲಿನಿಂದ ಜಯೇಶ್ ಕಾಂತಾ ಎಂಬಾತನ ಹೆಸರಿನಲ್ಲಿ ನಾಗಪುರದ ಕಚೇರಿಗೆ ಬೆದರಿಕೆ ಕರೆ ಮಾಡಲಾಗಿತ್ತು. ಇದೀಗ ಅದೇ ಜಯೇಶ್ ಹೆಸರಿನಲ್ಲಿ ಹಿಂಡಲಗಾ ಜೈಲಿನಿಂದಲೇ ಕರೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಜಯೇಶ್ ಕಾಂತಾ ಅಲಿಯಾಸ್ ಜಯೇಶ್ ಪೂಜಾರಿ ಹೆಸರು ಬಳಸಿ ಕರೆ ಮಾಡಲಾಗಿದೆ. 10 ಕೋಟಿ ರೂಪಾಯಿ ನೀಡುವಂತೆ ಆಗಂತುಕ ಬೇಡಿಕೆ ಇಟ್ಟಿದ್ದಾನೆ. ಆದರೆ, ನಿಜಕ್ಕೂ ಕರೆ ಮಾಡಿದ್ದು ಜಯೇಶ್ ಪೂಜಾರಿಯಾ ಎನ್ನುವ ಬಗ್ಗೆ ತನಿಖೆ ಆರಂಭಗೊಂಡಿದೆ.
ಈ ನಡುವೆ, ನಾಗ್ಪುರದ ನಿತಿನ್ ಗಡ್ಕರಿ ಕಚೇರಿ ಬಳಿ ಭದ್ರತೆ ಹೆಚ್ಚಳ ಮಾಡಲಾಗಿದ್ದು, ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳಿಂದ ತನಿಖೆ ನಡೆದಿದೆ.
ಜನವರಿ 14ರಂದು ಏನಾಗಿತ್ತು? ಯಾರು ಈ ಜಯೇಶ್ ಕಾಂತಾ?
ಕಳೆದ ಜನವರಿ 14ರಂದು ನಾಗಪುರದ ನಿತಿನ್ ಗಡ್ಕರಿ ಅವರ ಕಚೇರಿಗೆ ರಾತ್ರಿ 11.25, 11.32 ಮತ್ತು 12.32ಕ್ಕೆ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಇದು ಹಿಂಡಲಗಾ ಜೈಲಿನಿಂದ ಬಂದ ಕರೆ ಇದೆಂದು ಪ್ರಾಥಮಿಕ ತನಿಖೆಯಲ್ಲೇ ಬಯಲಾಗಿತ್ತು.
ಆವತ್ತು ಕರೆ ಮಾಡಿದವನು ಜೈಲಿನಲ್ಲಿರುವ ಹಿಂಡಲಗಾ ಜೈಲಿನಲ್ಲಿರುವ ಕೈದಿಯಾಗಿರುವ ಗ್ಯಾಂಗ್ ಸ್ಟರ್ ಜಯೇಶ್ ಕಾಂತಾ ಅಲಿಯಾಸ್ ಜಯೇಶ್ ಪೂಜಾರಿ ಎಂದು ಪತ್ತೆ ಹಚ್ಚಲಾಗಿತ್ತು. ಆವತ್ತು ಜಯೇಶ್ ಪೂಜಾರಿಯ ಕೋಣೆಯನ್ನು ಶೋಧಿಸಿದಾಗ ಒಂದು ಡೈರಿ ಪತ್ತೆಯಾಗಿತ್ತು.
ಜಯೇಶ್ ಕಾಂತಾನನ್ನು ಆವತ್ತು ನಾಗಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮರಳಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದರು. ಈಗ ಆತ ಮತ್ತೆ ಕರೆ ಮಾಡಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಪದೇಪದೇ ಗಡ್ಕರಿ ಅವರಿಗೆ ಕರೆ ಮಾಡುವ ಉದ್ದೇಶದ ಬಗ್ಗೆಯೂ ತನಿಖೆ ಆಗಬೇಕಾಗಿದೆ. ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಇದನ್ನೂ ಓದಿ Nitin Gadkari: ಏಪ್ರಿಲ್ 1ರಿಂದ ಸರ್ಕಾರದ 9 ಲಕ್ಷ ವಾಹನಗಳು ರಸ್ತೆಗಿಳಿಯಲ್ಲ ಎಂದ ನಿತಿನ್ ಗಡ್ಕರಿ, ಕಾರಣವೇನು?