ಬೆಳಗಾವಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಮೊಬೈಲ್ ನಂಬರ್‌ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ, ಪ್ರಾಣ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಚುರುಕುಗೊಂಡಿದ್ದು, ಹಿಂಡಲಗಾ ಜೈಲಿನಲ್ಲಿ ಕೈದಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ತನಿಖೆಗೆ ಸ್ವತಃ ಮಹಾರಾಷ್ಟ್ರ ಪೊಲೀಸರೂ ಮುಂದಾಗಿದ್ದು, ಜಂಟಿಯಾಗಿ ವಿಚಾರಣೆ ಪ್ರಾರಂಭವಾಗಿದೆ. ಮಹಾರಾಷ್ಟ್ರದ ಧನತೋಲಿ ಪೊಲೀಸ್ ಠಾಣೆಗೆ ನಿತಿನ್ ಗಡ್ಕರಿ ಕಚೇರಿ ಸಿಬ್ಬಂದಿ ಜಿತೇಂದ್ರ ಶರ್ಮಾ ಎಂಬುವವರು ಶನಿವಾರ ದೂರು ನೀಡಿದ್ದು, ಎಫ್‌ಐಆರ್ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಗೆ ಇಳಿದಿದ್ದಾರೆ.
ಜಯೇಶ್ ಪೂಜಾರಿ ವಶಕ್ಕೆ
ಜೈಲಿನೊಳಗೆ ಮೊಬೈಲ್ ಫೋನ್ ತಲುಪಿದ್ದು ಹೇಗೆ ಎಂಬ ಬಗ್ಗೆಯೂ ತೀವ್ರ ತನಿಖೆ ನಡೆಯುತ್ತಿದ್ದು, ಜೈಲು ಅಧಿಕಾರಿಗಳಿಗೂ ಸಂಕಷ್ಟ ತಂದೊಡ್ಡಿದೆ ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಕೈದಿ ಜಯೇಶ್ ಪೂಜಾರಿ ಎಂಬಾತನ ಮೇಲೆ ಶಂಕೆ ವ್ಯಕ್ತವಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ | Vishveshwar Hegde Kageri | ಕಾಗೇರಿ ಅವರ ಅನುಭವದ ಪ್ರಭಾವ ಇಡೀ ರಾಜ್ಯಕ್ಕೆ ದೊರಕಲಿದೆ: ಸಿಎಂ ಬೊಮ್ಮಾಯಿ ವಿಶ್ವಾಸ
ನಿತಿನ್ ಗಡ್ಕರಿಗೆ ಕರೆ ಮಾಡಿದ ಮೊಬೈಲ್‌ಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಹಿಂಡಲಗಾ ಜೈಲಿಗೆ ಬೆಳಗಾವಿ ಗ್ರಾಮೀಣ ವಿಭಾಗದ ಎಸಿಪಿ ಎಸ್.ವಿ. ಗಿರೀಶ್ ಸಹ ಭೇಟಿ ನೀಡಿದ್ದು, ತನಿಖೆಗೆ ವೇಗ ನೀಡಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಎಟಿಎಸ್ ಅಧಿಕಾರಿಗಳು ಒಂದು ಹಂತದ ಪರಿಶೀಲನೆ ನಡೆಸಿ ತೆರಳಿದ್ದಾರೆ. ಈಗ ಹಿಂಡಲಗಾ ಜೈಲಿನತ್ತ ಮಹಾರಾಷ್ಟ್ರದ ನಾಗ್ಪುರದ ಧನತೋಲಿ ಠಾಣೆ ಪೊಲೀಸರು ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಎಫ್‌ಐಆರ್ ದಾಖಲು
ಹಿಂಡಲಗಾ ಜೈಲಿನಿಂದ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿರುವ ಪ್ರಕರಣ ಸಂಬಂಧ ಮಹಾರಾಷ್ಟ್ರದ ನಾಗ್ಪುರ್‌ನ ಧನತೋಲಿ ಪೊಲೀಸ್ ಠಾಣೆಯಲ್ಲಿ ಅಪರಿಚಿತನ ವಿರುದ್ಧ ಗಡ್ಕರಿ ಕಚೇರಿ ಸಿಬ್ಬಂದಿ ಜಿತೇಂದ್ರ ಶರ್ಮಾ ಎಂಬುವವರು ದೂರು ನೀಡಿದ್ದಾರೆ. ಶನಿವಾರ (ಜ.೧೪) ಬೆಳಗ್ಗೆ 11.29ಕ್ಕೆ ನಿತಿನ್ ಗಡ್ಕರಿ ನಾಗ್ಪುರದ ಕಚೇರಿ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಬೆದರಿಕೆ ಒಡ್ಡಲಾಗಿತ್ತು.
“ನಾನು ದಾವೂದ್ ಗ್ಯಾಂಗ್‌ನಿಂದ ಮಾತನಾಡುತ್ತಿದ್ದೇನೆ. ‘ಗಡ್ಕರಿಗೆ ಹೇಳಿ ನೂರು ಕೋಟಿ ರೂಪಾಯಿ ನಗದು ಕಳುಹಿಸಿ. ಇಲ್ಲವಾದರೆ ಗಡ್ಕರಿ ಎಲ್ಲಿ ಸಿಗುತ್ತಾರೋ ಅಲ್ಲಿ ಬಾಂಬ್ ಸ್ಫೋಟಿಸಿ ಸಾಯಿಸುತ್ತೇವೆ. ನನಗೆ ಅವರ ಕಚೇರಿ ಗೊತ್ತು” ಎಂದು ಹಿಂದಿ ಭಾಷೆಯಲ್ಲಿ ಮಾತನಾಡಿ ಬೆದರಿಕೆ ಹಾಕಲಾಗಿತ್ತು.
ಇದನ್ನೂ ಓದಿ | Makar Sankranti 2023 | ಗವಿಗಂಗಾಧರನಿಗೆ ಸೂರ್ಯರಶ್ಮಿಯ ಅಭಿಷೇಕದ ನಮನ; ವಿಸ್ಮಯ ದರ್ಶನಕ್ಕೆ ಕಾದುನಿಂತ ಭಕ್ತಗಣ
ಆಗ ಕಚೇರಿ ಸಿಬ್ಬಂದಿ ಹಣ ಎಲ್ಲಿಗೆ ಕಳುಹಿಸಬೇಕೆಂದು ವಿಚಾರಿಸಿದಾಗ ಕರ್ನಾಟಕದ ಬೆಂಗಳೂರಿಗೆ ಕಳುಹಿಸಿ ಎಂದು ಪೋನ್ ಕಟ್ ಮಾಡಲಾಗಿತ್ತು. ಈ ವಿಚಾರವನ್ನು ಗಡ್ಕರಿ ಗನ್‌ಮ್ಯಾನ್ ದೀಪಕ್‌ಗೆ ಸಿಬ್ಬಂದಿ ತಿಳಿಸಿದ್ದರು.
ಬಳಿಕ 11.37ಕ್ಕೆ ಮತ್ತೊಮ್ಮೆ ಕರೆ ಮಾಡಿ ಗಡ್ಕರಿಗೆ ನಾನು ಮೊಬೈಲ್ ನಂಬರ್ ಕೊಡುತ್ತೇನೆ, ಅವರಿಗೆ ಕಾಂಟ್ಯಾಕ್ಟ್ ಮಾಡಲು ಹೇಳಿ ಎಂದು ಹೇಳಿ 8139923258 ನಂಬರ್ ಅನ್ನು ಸಹ ಆರೋಪಿ ನೀಡಿದ್ದ. ಈ ವಿಚಾರ ಪೊಲೀಸರಿಗೆ ತಿಳಿಸಿದರೆ ನಿಮ್ಮ ಕಚೇರಿಯನ್ನು ಸ್ಫೋಟಿಸುತ್ತೇವೆ ಎಂದು ಹೇಳಿ ಫೋನ್ ಕಟ್ ಮಾಡಲಾಗಿತ್ತು. ಮತ್ತೆ 12.29ಕ್ಕೆ ಕರೆ ಮಾಡಿದ್ದ ಆರೋಪಿ, ನನ್ನ ಮೆಸೇಜ್ ಅನ್ನು ಗಡ್ಕರಿ ಅವರಿಗೆ ಹೇಳಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾನೆ. ಆಗ ಸಾಹೇಬರು ಬ್ಯುಸಿ ಇದ್ದಾರೆ. ನೀನು ನಿನ್ನ ಹೆಸರು, ವಿಳಾಸ ತಿಳಿಸು ಎಂದು ಹೇಳಿದ್ದಾರೆ. ಆಗ ನೀವು ಕ್ಯಾಶ್ ಅನ್ನು ಮೊದಲು ಕರ್ನಾಟಕಕ್ಕೆ ಕಳುಹಿಸಿ, ಅಲ್ಲಿಂದ ಉಳಿದ ಮಾಹಿತಿಯನ್ನು ಹೇಳುತ್ತೇವೆ ಎಂದು ಹೇಳಿದ್ದ.
ಈ ಎಲ್ಲ ವಿವರವನ್ನು ನಾಗ್ಪುರದ ಧನತೋಲಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಐಪಿಸಿ ಸೆಕ್ಷನ್ 1860ರ ಕಲಂ 385, 387, 506/2, 507ರಡಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ | Yoga Day : 2023 ಜೂನ್ 21ರ ಯೋಗ ದಿನಕ್ಕೆ ಮೈಸೂರಿಗೆ ಬಾಬಾ ರಾಮದೇವ್: ಎಸ್.ಎ. ರಾಮದಾಸ್