ನವ ದೆಹಲಿ: ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಸೋಮವಾರ ಜೆಡಿಎಸ್ ನಾಯಕ ಹಾಗೂ ಕರ್ನಾಟಕದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ದಿಲ್ಲಿಯಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಿವಾಸದಲ್ಲಿ ಈ ಭೇಟಿ ನಡೆಯಿತು.
ಈ ಹಿಂದೆ ಜನತಾ ಪರಿವಾರದ ಮೈತ್ರಿಕೂಟದಲ್ಲಿದ್ದ ನಿತೀಶ್ ಕುಮಾರ್ ಅವರು ಬಳಿಕ ಬಿಜೆಪಿ ಜತೆ ಸೇರಿಕೊಂಡಿದ್ದರು. ಇದೀಗ ಬಿಜೆಪಿ ಜತೆಗಿನ ಮೈತ್ರಿಯನ್ನು ಮುರಿದುಕೊಂಡು ಮತ್ತೆ ಆರ್‌ಜೆಡಿ ಜತೆ ಸೇರಿ ಸರಕಾರ ನಡೆಸುತ್ತಿದ್ದಾರೆ. ಬಿಜೆಪಿ ವಿರುದ್ಧ ಕಿಡಿಕಾರುತ್ತಿರುವ ಅವರು ೨೦೨೪ರ ಚುನಾವಣೆಯ ಹೊತ್ತಿಗೆ ಹಳೆ ಜನತಾ ಪರಿವಾರವನ್ನು ಮತ್ತೆ ಒಗ್ಗೂಡಿಸುವ ಕನಸು ಕಾಣುತ್ತಿದ್ದಾರೆ. ಆ ಮೂಲಕ ಒಂದು ಕಾಲದಲ್ಲಿ ಪ್ರಬಲ ಶಕ್ತಿಯಾಗಿದ್ದ ತೃತೀಯ ರಂಗವನ್ನು ಬಲಗೊಳಿಸಬೇಕು ಎನ್ನುವ ಉತ್ಸಾಹದಲ್ಲಿದ್ದಾರೆ.
ಅದರ ಭಾಗವಾಗಿ ಅವರು ಸೋಮವಾರ ದಿಲ್ಲಿಯಲ್ಲಿ ಜೆಡಿಎಸ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು ಎನ್ನಲಾಗಿದೆ. ಕುಮಾರಸ್ವಾಮಿ ಅವರ ಜತೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹಾಗೂ ಹಿರಿಯ ನಾಯಕ ಮಹಿಮಾ ಪಟೇಲ್ ಇದ್ದರು.
ʻʻಪ್ರತಿಪಕ್ಷಗಳು ಪ್ರಬಲವಾಗಿ ಒಂದಾದರೆ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸುವುದು ಸೋಲಿಸುವುದು ಸುಲಭʼʼ ಎಂದು ಇತ್ತೀಚೆಗಷ್ಟೇ ಹೇಳಿಕೆ ನೀಡಿದ ನಿತೀಶ್ ಕುಮಾರ್, ತೃತೀಯ ರಂಗ ರಚಿಸಿ ಪ್ರಧಾನಿ ಅಭ್ಯರ್ಥಿಯಾಗಬೇಕೆಂಬ ನೀರಿಕ್ಷೆಯಲ್ಲಿದ್ದಾರೆ. ಅದಕ್ಕಾಗಿ ವೇದಿಕೆಯನ್ನು ಸಜ್ಜುಗೊಳಿಸುತ್ತಿದ್ದಾರೆ.
ಸೋಮವಾರ ಬಿಹಾರದ ಪಟನಾದಲ್ಲಿ ಜೆಡಿಯು ಪಕ್ಷದ ಕೌನ್ಸಿಲ್ ಮೀಟಿಂಗ್ ನಡೆಸಿದ್ದ ನಿತೀಶ್ ಅಲ್ಲಿಂದ ದಿಲ್ಲಿಗೆ ಆಗಮಿಸಿ ಎಚ್.ಡಿ. ಕುಮಾರಸ್ವಾಮಿ ಮತ್ತು ಇತರ ನಾಯಕರನ್ನು ಭೇಟಿ ಮಾಡಿದರು.
ದೇವೇಗೌಡರೇ ಬರಬೇಕಾಗಿತ್ತು
ಈ ಪೂರ್ವ ನಿಯೋಜಿತ ಭೇಟಿಗೆ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರೇ ಬರಬೇಕಾಗಿತ್ತು. ಆದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ದಿಲ್ಲಿ ಪ್ರವಾಸ ಸಾಧ್ಯವಾಗಿಲ್ಲ. ಕುಮಾರಸ್ವಾಮಿ ಅವರ ಜತೆ ಮಾತನಾಡಿದ ನಿತೀಶ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲ ಕೋರಿದರು ಎನ್ನಲಾಗಿದೆ.
ಜನತಾ ಪರಿವಾರ ಒಗ್ಗೂಡಿಸುವ ಚರ್ಚೆ
ʻʻನಿತೀಶ್ ಕುಮಾರ್ ಅವರ ಜತೆ ಜನತಾ ಪರಿವಾರ ಒಗ್ಗೂಡುವ ಬಗ್ಗೆ ಮಾತುಕತೆ ನಡೆಯಿತು. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲರೂ ಒಗ್ಗೂಡುವ ಅವಶ್ಯಕತೆ ಇದೆ. ಇತ್ತೀಚಿನ ಬಿಹಾರ ರಾಜಕೀಯ ಬೆಳವಣಿಗೆಗಳ ನಂತರ ಮತ್ತೆ ಈ ಚರ್ಚೆಗೆ ಚಾಲನೆ ಸಿಕ್ಕಿದೆ. ಜೆ.ಪಿ. ಅವರಿಂದ ಪ್ರಾರಂಭವಾದ ಜನತಾ ಪರಿವಾರ ಮತ್ತೆ ಒಂದು ಗೂಡ ಬೇಕಿದೆ. ಈಗ ದೇಶದಲ್ಲಿ ಬಲವಾದ ವಿಪಕ್ಷದ ಅವಶ್ಯಕತೆ ಇದೆʼʼ ಎಂದು ನಿತೀಶ್ ಕುಮಾರ್ ಜತೆಗಿನ ಮಾತುಕತೆ ಬಳಿಕ ಬಳಿಕ ಎಚ್.ಡಿ ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ| 2024ರೊಳಗೆ ಬಿಜೆಪಿ 50 ಲೋಕಸಭಾ ಕ್ಷೇತ್ರ ಕಳೆದು ಕೊಳ್ಳುತ್ತದೆ; ಹೇಗೆಂದು ವಿವರಿಸಿದ ನಿತೀಶ್ ಕುಮಾರ್