Site icon Vistara News

Dinesh Gundu Rao: ಬೊಕೆ ಬೇಡ, ಬುಕ್‌ ಕೊಡಿ;‌ ಸಿಎಂ ಹಾದಿಯಲ್ಲಿ ಸಚಿವ ದಿನೇಶ್‌ ಗುಂಡೂ ರಾವ್‌!

Dinesh gundu Rao

#image_title

ಬೆಂಗಳೂರು: ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಇನ್ನು ಮುಂದೆ ಸನ್ಮಾನದ ಸಂದರ್ಭದಲ್ಲಿ ಹಾರ, ತುರಾಯಿ, ಶಾಲುಗಳನ್ನು ಹಾಕದಂತೆ ಮನವಿ ಮಾಡಿದ್ದಾರೆ. ಬದಲಾಗಿ ಪುಸ್ತಕಗಳನ್ನು ಉಡುಗೊರೆಯಾಗಿ (Book gift) ನೀಡಬಹುದು ಎಂದು ವಿನಂತಿಸಿದ್ದಾರೆ. ಈ ಮೂಲಕ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಮಾದರಿಯನ್ನೇ ಅನುಸರಿಸಿದಂತಾಗಿದೆ.

ಸಚಿವ ದಿನೇಶ್ ಗುಂಡೂರಾವ್ ಅವರ ಸೂಚನೆಯ ಮೇರೆಗೆ, ಅವರ ಆಪ್ತಕಾರ್ಯದರ್ಶಿ ಕೆ.ಎ. ಹಿದಾಯತ್ತುಲ್ಲ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಸುತ್ತೋಲೆ ಹೊರಡಿಸುವಂತೆ ನಿರ್ದೇಶನ ನೀಡಿದ್ದರು. ಅದರಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು, ಜಿಲ್ಲೆಯ ಉಸ್ತುವಾರಿಯಾಗಿರುವ ದಿನೇಶ್ ಗುಂಡೂರಾವ್ ಅವರಿಗೆ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದಾಗ ಹಾರ, ತುರಾಯಿ ಬದಲು ಪುಸ್ತಕ ಕೊಡುವಂತೆ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಆಪ್ತ ಕಾರ್ಯದರ್ಶಿ ಬರೆದಿರುವ ಪತ್ರದಲ್ಲಿ, “ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸುವ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಯಾವುದೇ ಸಭೆ ಸಮಾರಂಭಗಳಲ್ಲಿ ಹಾರ, ಹೂಗುಚ್ಛಗಳನ್ನು ನೀಡುವುದನ್ನು ನಿಷೇಧಿಸುವಂತೆ ಮತ್ತು ಇಷ್ಟ ಇದ್ದವರು ಉಡುಗೊರೆ ರೂಪದಲ್ಲಿ ಪುಸ್ತಕಗಳನ್ನು ನೀಡುವಂತೆ ತಿಳಿಸಿ ಸೂಕ್ತ ಸುತ್ತೋಲೆ ಹೊರಡಿಸುವಂತೆ ಕೋರಲು ಸಚಿವರಿಂದ ನಿರ್ದೇಶಿತನಾಗಿದ್ದೇನೆ” ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದರು.‌

ಸಿದ್ದರಾಮಯ್ಯ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದ ಬೆನ್ನಲ್ಲೇ ತಮಗೆ ಸನ್ಮಾನ ಮಾಡುವ ಸಂದರ್ಭದಲ್ಲಿ ಹಾರ, ಶಾಲು ನೀಡದಂತೆ ಮತ್ತು ಕೊಡಲೇಬೇಕೆಂದರೆ ಪುಸ್ತಕಗಳನ್ನು ಕೊಡುವಂತೆ ಮನವಿ ಮಾಡಿದ್ದರು. ಸಿದ್ದರಾಮಯ್ಯ ಅವರ ಈ ನಡೆ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು, ನಂತರ ಬೆಂಗಳೂರು ಟ್ರಾಫಿಕ್ ಗಮನದಲ್ಲಿಟ್ಟುಕೊಂಡು ತಮಗೆ ಝೀರೋ ಟ್ರಾಫಿಕ್ ಸೌಲಭ್ಯ ಕೂಡ ಬೇಡ ಎಂದು ಪೊಲೀಸ್ ಇಲಾಖೆಗೆ ಜಿ ಪರಮೇಶ್ವರ್ ತಿಳಿಸಿದ್ದರು.

ಇದೀಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಇದೇ ದಾರಿಯಲ್ಲಿ ಸಾಗಲಿದ್ದು, ಹಾರ, ಹೂಗುಚ್ಛದ ಬದಲಾಗಿ ಪುಸ್ತಕ ನೀಡುವಂತೆ ಕೇಳಿದ್ದಾರೆ. ಪುಸ್ತಕಗಳ ಖರೀದಿ, ಓದಿಗೆ ಇದು ಸಹಕಾರ ಸಿಕ್ಕಂತಾಗಲಿದ್ದು, ಬರಹಗಾರರಿಗೆ ಬೆಂಬಲ ಕೂಡ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಡಲಾಗಿದೆ.

ಅದೇ ವೇಳೆ, ಹೂಹಾರ ಮತ್ತು ಹೂಗುಚ್ಛಗಳ ಮೂಲಕ ಗೌರವ ಸಲ್ಲಿಸುವುದರಿಂದಲೂ ಆ ವರ್ಗಕ್ಕೆ ಬೆಂಬಲ ನೀಡಿದಂತೆಯೇ ಆಗುತ್ತದೆ ಎಂಬ ವಾದವೂ ಇದೆ.

ಇದನ್ನೂ ಓದಿ : Veer Savarkar Row: ಪಠ್ಯಪುಸ್ತಕ ಪರಿಷ್ಕರಣೆ; ನ್ಯೂಟನ್‌ ಹೇಳಿಕೆ ಉಲ್ಲೇಖಿಸಿ ಸಿದ್ದು ಸರ್ಕಾರಕ್ಕೆ ಸಾವರ್ಕರ್‌ ಮೊಮ್ಮಗ ಟಾಂಗ್

Exit mobile version