Site icon Vistara News

Carpooling Ban: ಬೆಂಗಳೂರಿನಲ್ಲಿ ಕಾರ್‌ಪೂಲಿಂಗ್‌ ನಿಷೇಧವಿಲ್ಲ; ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

Bus Fare Hike

ಬೆಂಗಳೂರು: ನಗರದಲ್ಲಿ ಸಾರಿಗೆ ಇಲಾಖೆ ಕಾರ್‌ಪೂಲಿಂಗ್‌ಗೆ (Carpooling Ban) ನಿಷೇಧ ವಿಧಿಸಿ ಆದೇಶ ಹೊರಡಿಸಿದೆ ಎಂಬ ವರದಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಳ್ಳಿಹಾಕಿದ್ದಾರೆ. ರಾಜ್ಯ ಸರ್ಕಾರವು ಕಾರ್‌ಪೂಲಿಂಗ್‌ಗೆ ನಿಷೇಧ ವಿಧಿಸಿಲ್ಲ, ಇದು ಸುಳ್ಳು ಸುದ್ದಿ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.

ಸಾರಿಗೆ ಇಲಾಖೆಯಿಂದ ಕಾರ್‌ಪೂಲಿಂಗ್ ನಿಷೇಧ ಮಾಡಲಾಗಿದೆ. ನಿಯಮ ಉಲ್ಲಂಘಿಸಿದರೆ ವಾಹನ ಚಾಲಕರಿಗೆ 5ರಿಂದ 10 ಸಾವಿರ ರೂ.ವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಪ್ರಸಾರವಾಗಿದ್ದವು. ಇದರಿಂದ ಜನರಲ್ಲಿ ಗೊಂದಲ ಉಂಟಾಗಿತ್ತು. ಹೀಗಾಗಿ ಸಾರಿಗೆ ಸಚಿವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಕಾರ್‌ಪೂಲಿಂಗ್ ನಿಷೇಧಿಸಿಲ್ಲ, ಇದು ಸುಳ್ಳು ಸುದ್ದಿ. ಮೊದಲು ಅವರು ಸರ್ಕಾರದಿಂದ ಅನುಮತಿಯನ್ನು ಪಡೆದುಕೊಳ್ಳಲಿ. ಅವರು ಅನುಮತಿಯನ್ನು ತೆಗೆದುಕೊಳ್ಳದಿರುವಾಗ ನಿಷೇಧದ ಪ್ರಶ್ನೆ ಎಲ್ಲಿದೆ? ಪ್ರತಿಯೊಬ್ಬರೂ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ಬಿಳಿ ನಂಬರ್ ಪ್ಲೇಟ್‌ (ವೈಟ್‌ ಬೋರ್ಡ್‌) ಗಳನ್ನು ಹೊಂದಿರುವ ವಾಣಿಜ್ಯೇತರ ಖಾಸಗಿ ವಾಹನಗಳನ್ನು ಕಾರ್‌ಪೂಲಿಂಗ್ ಉದ್ದೇಶಗಳಿಗಾಗಿ ಬಳಸುವುದು ಕಾನೂನುಬಾಹಿರವಾಗಿದೆ. ಹಳದಿ ಬಣ್ಣದ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯ ವಾಹನಗಳನ್ನು ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಕಾರ್‌ಪೂಲಿಂಗ್‌ಗೆ ಬಳಸಬಹುದು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ | Namma Metro: ಐಟಿ ಉದ್ಯೋಗಿಗಳಿಗೆ ಗುಡ್‌ ನ್ಯೂಸ್‌; ಅ.6ಕ್ಕೆ ಚಲ್ಲಘಟ್ಟ- ವೈಟ್‌ಫೀಲ್ಡ್‌ ಮೆಟ್ರೋ ಸಂಚಾರ ಆರಂಭ ಸಾಧ್ಯತೆ

ಏನಿದು ಕಾರ್‌ಪೂಲಿಂಗ್‌

ಸಂಚಾರ ದಟ್ಟಣೆ ಕಿರಿಕಿರಿ ಕಡಿಮೆಯಾಗುವುದು ಹಾಗೂ ಒಂದೇ ಮಾರ್ಗದಲ್ಲಿ ಸಂಚರಿಸುವ ಉದ್ಯೋಗಿಗಳಿಗೆ ನೆರವಾಗುವುದರಿಂದ ಕಾರ್‌ಪೂಲಿಂಗ್ ಇತ್ತೀಚೆಗೆ ಟ್ರೆಂಡ್ ಆಗಿದೆ. ಇದರಿಂದ ಒಂದು ಮಾರ್ಗದಲ್ಲಿ ಒಬ್ಬ ವ್ಯಕ್ತಿ ಕಾರಿನಲ್ಲಿ ಹೋಗುವಾಗ ಅದೇ ಮಾರ್ಗದಲ್ಲಿ ಬರುವ ಇತರರನ್ನು ಕರೆದೊಯ್ಯುತ್ತಾನೆ. ಆದರೆ, ಇದನ್ನು ಆ್ಯಪ್‌ಗಳನ್ನು ಬಳಸಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಕಾರ್‌ಪೂಲಿಂಗ್‌ ಹಾಗೂ ಬೈಕ್‌ ಶೇರಿಂಗ್‌ ಆ್ಯಪ್‌ಗಳನ್ನು ಬಳಸಿ ವೈಟ್ ಬೋರ್ಡ್ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದರ ಮೇಲೆ ನಿಷೇಧ ವಿಧಿಸಲಾಗಿತ್ತು. ಬೆಂಗಳೂರಿನಲ್ಲೂ ಕಾರ್‌ಪೂಲಿಂಗ್‌ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕ್ವಿಕ್‌ ರೈಡ್‌, ಬ್ಲಾಬ್ಲಾ ಕಾರ್‌ ಮತ್ತಿತರ ಆ್ಯಪ್‌ಗಳನ್ನು ಬಳಸಿ ಕಾರ್‌ಪೂಲಿಂಗ್‌ ಮಾಡುವುದಕ್ಕೆ ಸಾರಿಗೆ ಇಲಾಖೆ ನಿಷೇಧ ವಿಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು.

ಕಾರ್‌ಪೂಲಿಂಗ್‌ ನಿಷೇಧದಿಂದ ಆ್ಯಪ್‌ಗಳನ್ನು ಬಳಸಿ ವೈಟ್ ಬೋರ್ಡ್ ವಾಹನಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದಕ್ಕೆ ಕಡಿವಾಣ ಬೀಳಲಿದೆ. ನಿಯಮ ಉಲ್ಲಂಘಿಸಿದರೆ ವಾಹನ ಚಾಲಕರಿಗೆ 5ರಿಂದ 10 ಸಾವಿರ ರೂ.ವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಇದನ್ನೂ ಓದಿ | Gandhi Jayanti: ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಗಾಂಧೀಜಿ ಚಿಂತನೆಗಳೇ ಪ್ರೇರಣೆ: ಸಿಎಂ ಸಿದ್ದರಾಮಯ್ಯ

ವಾಣಿಜ್ಯ ಉದ್ದೇಶಕ್ಕೆ ವಾಹನಗಳನ್ನು ಬಳಸಬೇಕೆಂದರೆ ಯೆಲ್ಲೋ ಬೋರ್ಡ್‌ ಇರಬೇಕಾಗುತ್ತದೆ. ಇದಕ್ಕಾಗಿ ಹೆಚ್ಚುವರಿ ತೆರಿಗೆ ಕಟ್ಟಬೇಕು. ಆದರೆ, ಕೆಲವರು ವೈಟ್‌ಬೋರ್ಟ್‌ ವಾಹನ ಬಳಸಿ ಬಾಡಿಗೆಗಾಗಿ ಓಡಿಸುತ್ತಿರುವುದರಿಂದ ಟ್ಯಾಕ್ಸಿ ಚಾಲಕರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಕಾರ್‌ಪೂಲಿಂಗ್‌ ನಿಷೇಧ ಮಾಡಬೇಕು ಎಂದು ಚಾಲಕರ ಸಂಘಟನೆಗಳು ಒತ್ತಾಯಿಸಿವೆ.

Exit mobile version