ಬೆಂಗಳೂರು: ರಾಜ್ಯ ಬರಗಾಲದತ್ತ (Drought in Karnataka) ಮುಖ ಮಾಡಿದೆ. ಅನೇಕ ಕಡೆ ಬೆಳೆಗಳು ಒಣಗಿವೆ, ಇನ್ನು ಕೆಲವೆಡೆ ತೇವ ಇದೆ. ಮಳೆ ಆಶ್ರಿತ ಪ್ರದೇಶಗಳಲ್ಲಿ ಬೆಳೆಯಲಾದ ಬೆಳೆಗಳು ರೈತರ ಕೈ ಸೇರುವ ಪರಿಸ್ಥಿತಿ ಇಲ್ಲ. ಇನ್ನೊಂದು ವಾರದಲ್ಲಿ ಮಳೆ (Rain News) ಬಂದರೆ ಶೇ. 50ರಿಂದ 60ರಷ್ಟು ಬೆಳೆ ಉಳಿಯಬಹುದು. ಇಲ್ಲದಿದ್ದರೆ ಅದೂ ಇಲ್ಲ. ದುರದೃಷ್ಟವಶಾತ್ ಈ ಪ್ರಮಾಣದಲ್ಲಿ ಮಳೆಯಾಗುವ ಯಾವುದೇ ವಾತಾವರಣ ಇಲ್ಲ. ರಾಜ್ಯದ ಅನೇಕ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ (Water storage in Karnataka dams) ಸಮಪರ್ಕವಾಗಿಲ್ಲ. ಇನ್ನು ರಾಜ್ಯದ ಮುಂದೆ ಮೋಡ ಬಿತ್ತನೆ (Cloud Seeding) ಮಾಡುವ ಯಾವುದೇ ಚಿಂತನೆ ಇಲ್ಲ. ರಾಜ್ಯದ 100ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಪರಿಸ್ಥಿತಿಯಲ್ಲಿದ್ದು, ಕೇಂದ್ರದ ಮಾನದಂಡ (Central Government’s drought criteria) ಇದಕ್ಕೆ ಅಡ್ಡಿ ಬರುತ್ತಿದೆ. ಹೀಗಾಗಿ ಗೈಡ್‌ಲೈನ್ ಬದಲಾವಣೆಗಾಗಿ ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (Agriculture Minister N Chaluvarayaswamy) ಹೇಳಿದರು.
ವಿಧಾನಸೌಧದಲ್ಲಿ ಶುಕ್ರವಾರ (ಆ.25) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಒಟ್ಟಾರೆಯಾಗಿ 130 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಇದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಆದರೆ, ಬರ ಘೋಷಣೆ ಮಾಡಲು ಕೇಂದ್ರದ ಮಾನದಂಡವು ಅಡ್ಡಿಯಾಗುತ್ತಿದೆ. ಅದರ ಆಧಾರವಾಗಿಟ್ಟುಕೊಂಡಲ್ಲಿ ಬರ ಘೋಷಣೆ ಮಾಡಲು ಆಗುವುದಿಲ್ಲ. ಈಗ ಬೆಳೆ ಪರಿಸ್ಥಿತಿ ಸಮೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಆಗಸ್ಟ್ 30ರೊಳಗೆ ಸಮೀಕ್ಷೆ ಮಾಡಿ ವರದಿ ನೀಡಲಾಗುತ್ತದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಉಪಸಮಿತಿ ಸಭೆ ನಡೆಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಮಳೆ ಇಲ್ಲದೆ ರಾಜ್ಯದ ಪರಿಸ್ಥಿತಿ ಬಿಗಡಾಯಿಸಿದೆ. ಮೋಡ ಬಿತ್ತನೆ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಈ ಹಿಂದೆ ಮೋಡ ಬಿತ್ತನೆ ಮಾಡಿದಾಗ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಮಳೆಗಾಗಿ ಮೋಡ ಬಿತ್ತನೆ ಮಾಡುವ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂಬ ಬಗ್ಗೆ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದರು.
ಭತ್ತ, ರಾಗಿ ಸೇರಿ ಹಲವು ಬೆಳೆಗಳ ಬಿತ್ತನೆ ಕೊರತೆ
ರಾಜ್ಯದಲ್ಲಿ ಮಳೆ ಕೊರತೆಯ ಪರಿಣಾಮ ಬಹಳವೇ ಆಗಿದೆ. 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ಕೊರತೆ ಇದೆ. ರಾಗಿ 3.5 ಲಕ್ಷ, ತೊಗರಿ 2.5 ಲಕ್ಷ, ಹೆಸರು 2.36 ಲಕ್ಷ, ಶೇಂಗಾ 93 ಸಾವಿರ ಹೆಕ್ಟೇರ್ ಪ್ರದೇಶದಷ್ಟು ಬಿತ್ತನೆ ಕೊರತೆಯನ್ನು ಎದುರಿಸುತ್ತಿದೆ. ಮಳೆ ಆಗದೆ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಶೇ. 79ರಷ್ಟು ಬಿತ್ತನೆ ಆಗಿದೆ, ಎಲ್ಲಿಯೂ ಸಮಸ್ಯೆ ಆಗದಂತೆ ಬೀಜ, ಗೊಬ್ಬರ ನೀಡಲಾಗಿದೆ. ಆದರೆ, ಬೆಳೆ ರಕ್ಷಣೆ ಮಾಡಿ ರೈತರಿಗೆ ಫಲ ಸಿಗುವ ಸ್ಥಿತಿ ಇಲ್ಲ ಎನ್ನುವುದು ಬೇಸರದ ಸಂಗತಿ ಎಂದು ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಬೆಳೆ ವಿಮೆ ಮಾಡಿಸಿದ್ದರಿಂದ ಕೇಂದ್ರ ಸರ್ಕಾರದಕಂದ ಪ್ರಶಂಸೆ ಪತ್ರ ಬಂದಿದೆ. ಈಗಾಗಲೇ ಬೆಳೆ ವಿಮೆಗೆ 16 ಲಕ್ಷ ನೋಂದಣಿ ಆಗಿದೆ. ರಾಜ್ಯದ 194 ಗ್ರಾಪಂಗಳಲ್ಲಿ 35.90 ಕೋಟಿ ರೂಪಾಯಿ ಪರಿಹಾರ ಲಭಿಸುತ್ತದೆ. ಬಾಗಲಕೋಟೆ, ಗದಗ, ತುಮಕೂರು, ಬೆಳಗಾವಿಯ 194 ಗ್ರಾಪಂಗಳ 35,284 ರೈತರಿಗೆ ಉಪಯೋಗವಾಗಿದೆ. 15-20 ದಿನದಲ್ಲಿ ಹಣ ರವಾನೆ ಆಗುತ್ತದೆ ಎಂದು ಎನ್. ಚಲುವರಾಯಸ್ವಾಮಿ ಹೇಳಿದರು.
ಬರಪೀಡಿತ ಜಿಲ್ಲೆ ಘೋಷಣೆಗೆ ಕಾಲ ವಿಳಂಬ ಎಂಬ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಟೀಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಚಲುವರಾಯಸ್ವಾಮಿ, ಯಡಿಯೂರಪ್ಪ ಸರ್ಕಾರ ಇದ್ದಾಗ ಏನು ಮಾಡಿದ್ದಾರೆ? ಅದನ್ನೇ ಈಗ ನಾವು ಮಾಡಬೇಕಾಗುತ್ತದೆ. ರೈತರಿಗೆ ಅನುಕೂಲ ಮಾಡಲು ಮೊದಲಿಗೆ ವಿಮೆ ಮೊತ್ತ 900 ಕೋಟಿ ರೂಪಾಯಿಯನ್ನು ಕಟ್ಟಿದ್ದೇವೆ. ಈಗ 10 ಕೆ.ಜಿ. ಅಕ್ಕಿ, ಕರೆಂಟ್ ಫ್ರೀ, 2000 ರೂ. ಸಹ ರೈತರ ಏಳಿಗೆಗೆ ಅನುಕೂಲ ಆಗುತ್ತದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.
ಇದನ್ನೂ ಓದಿ: Guest Teachers Appointment : ಪ್ರಾಥಮಿಕ ಶಾಲೆಗಳ 35000 ಅತಿಥಿ ಶಿಕ್ಷಕರ ನೇಮಕಾತಿಗೆ ಆಹ್ವಾನ
ಮಳೆಗಾಗಿ ಪ್ರಾರ್ಥನೆ ಮಾಡೋಣ
ಮಳೆಗಾಗಿ ಪ್ರಾರ್ಥಿಸಬಹುದೇ ಹೊರತು, ಮಳೆ ತರೋಕೆ ಆಗಲ್ಲ. ಕೇಂದ್ರ ಸರ್ಕಾರದ ಗೈಡ್‌ಲೈನ್ಸ್ ಬಿಟ್ಟು ಏನೂ ಮಾಡಲು ಆಗಲ್ಲ. ಸೆಪ್ಟೆಂಬರ್ ಮೊದಲ ವಾರದಲ್ಲಿ ಬರ ಘೋಷಣೆ ಮಾಡುತ್ತೇವೆ. ಈಗಿನ ವರದಿ ಪ್ರಕಾರ 100ಕ್ಕೂ ಹೆಚ್ಚು ತಾಲೂಕು ಘೋಷಣೆ ಆಗುವ ಅಂದಾಜಿದೆ. ಕೃಷಿ ಸಾಲ ಪಾವತಿ ಮುಂದೂಡಿಕೆ ಕುರಿತು ಸಂಪುಟಗಳಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.