ಉಡುಪಿ: ನಮ್ಮ ರಾಜ್ಯದಲ್ಲಿ ಕಲ್ಲಿದ್ದಲು ಸರಬರಾಜು ನಿರ್ವಹಣೆ ಚೆನ್ನಾಗಿ ನಡೆಯುತ್ತಿದ್ದು, ವಿದ್ಯುತ್ ಉತ್ಪಾದನೆ ಎಲ್ಲೂ ಸ್ಥಗಿತವಾಗಿಲ್ಲ ಎಂದು ಉಡುಪಿಯಲ್ಲಿ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು.
ಕೇಂದ್ರ ಸರ್ಕಾರದ ಜೊತೆ ನಾವು ಮಾತುಕತೆ ನಡೆಸಿದ್ದು, ಸಮನ್ವಯ ಸಾಧಿಸಿ ಕಲ್ಲಿದ್ದಲು ಪೂರೈಕೆ ಮಾಡಿಕೊಳ್ಳುತ್ತಿದ್ದೇವೆ. ಏಪ್ರಿಲ್ ತಿಂಗಳಲ್ಲಿ ರಾಜ್ಯದಲ್ಲಿ ಮಳೆಯಾಗಿರುವುದರಿಂದ ವಿದ್ಯುತ್ ಉತ್ಪಾದನೆ ಮೇಲೆ ಒತ್ತಡ ಕಡಿಮೆಯಾಗಿದೆ. ರಾಜ್ಯಕ್ಕೆ 13ರಿಂದ 15 ರೇಖ್ ಕಲ್ಲಿದ್ದಲು ಪೂರೈಕೆ ಆಗುತ್ತಿದೆ. ಮೇ 30ರವರೆಗೂ ಅಂದರೆ ಬೇಸಿಗೆಕಾಲ ಮುಗಿಯುವ ತನಕ ಬರಬಹುದಾದ ಸವಾಲುಗಳನ್ನು ನಿರ್ವಹಣೆ ಮಾಡುತ್ತೇವೆ. ಎರಡು ದಿನಕ್ಕೊಂದು ಬಾರಿ ಈ ಬಗ್ಗೆ ಅಧಿಕಾರಿಗಳ ಸಭೆ ಸೇರಿಸಿ ಚರ್ಚೆ ಮಾಡುತ್ತಿದ್ದೇವೆ. ಕಲ್ಲಿದ್ದಲಿನ ಬಳಕೆ ಮತ್ತು ಪೂರೈಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದು, ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲಿನ ಕೊರತೆಯಾಗದಂತೆ ನಿರ್ವಹಣೆ ಮಾಡುತ್ತೇವೆ ಎಂದು ಸುನೀಲ್ ಕುಮಾರ್ ಹೇಳಿದರು.
ಟಿಸಿ ಸುರಕ್ಷತೆಗೆ ಅಭಿಯಾನ
ವಿದ್ಯುತ್ ಪರಿವರ್ತಕಗಳ ಸಮರ್ಪಕ ಬಳಕೆಗಾಗಿ ರಾಜ್ಯ ಇಂಧನ ಇಲಾಖೆಯಿಂದ ಹೊಸ ಅಭಿಯಾನವನ್ನು ಆರಂಭ ಮಾಡುತ್ತಿದ್ದು, ಮೇ 5ರಿಂದ ಮೇ 15ರ ತನಕ ಈ ಅಭಿಯಾನ ರಾಜ್ಯಾದ್ಯಂತ ನಡೆಯಲಿದೆ. ರಾಜ್ಯಾದ್ಯಂತ ಹತ್ತು ದಿನಗಳ ಕಾಲ ಎಲ್ಲಾ ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆಗೆ ಸೂಚನೆ ನೀಡಲಾಗಿದೆ. ಲೈನ್‌ಮ್ಯಾನ್‌ನಿಂದ ಹಿರಿಯ ಅಧಿಕಾರಿ ತನಕ ಎಲ್ಲರೂ ಟ್ರಾನ್ಸ್‌ಫಾರ್ಮರ್ ನಿರ್ವಹಣೆ ಕಡೆ ಗಮನ ಕೊಡುತ್ತಾರೆ. ಟಿಸಿಗಳ ನಿರ್ವಹಣೆ ಸಮಸ್ಯೆಯಾಗಿ ಕೆಲಕಡೆ ಟಿಸಿ ಬ್ಲಾಸ್ಟ್ ಆಗಿ ಪ್ರಾಣಹಾನಿಯಾಗಿದೆ. ಈ ಬಗ್ಗೆ ಪೂರ್ವಭಾವಿ ಸಭೆಗಳನ್ನು ನಡೆಸಿದ್ದು, ಹೆಚ್ಚುವರಿ ಲೋಡು, ಅರ್ಥಿಂಗ್, ಆಯಿಲ್ ಕೊರತೆ ಮುಂತಾದ ಎಲ್ಲಾ ವಿಚಾರಗಳ ತಪಾಸಣೆ ನಡೆಸಲಾಗುವುದು. ಅಪಾಯದ ಸ್ಥಿತಿಯಲ್ಲಿರುವ ಟಿಸಿಗಳನ್ನು ತಕ್ಷಣ ಬದಲಾಯಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಇಂಧನ ಸಚಿವರು ತಿಳಿಸಿದರು.
ಚಾರ್ಜಿಂಗ್ ಸೆಂಟರ್‌ಗಳು
ದ್ವಿಚಕ್ರ ಮತ್ತು ನಾಲ್ಕು ಚಕ್ರದ ಹೊಸ ಎಲೆಕ್ಟ್ರಿಕ್ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ಮಾರುಕಟ್ಟೆಗೆ ಬರುತ್ತಿದ್ದು, ಇವುಗಳಿಗಾಗಿ ರಾಜ್ಯಾದ್ಯಂತ ಚಾರ್ಜಿಂಗ್ ಸೆಂಟರ್‌ಗಳನ್ನು ಸ್ಥಾಪನೆ ಮಾಡುತ್ತಿದ್ದೇವೆ. ಸದ್ಯ ರಾಜ್ಯದ್ಯಂತ 1000 ವಿದ್ಯುತ್ ಚಾರ್ಜಿಂಗ್ ಸೆಂಟರ್‌ಗಳಿವೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಚಾರ್ಜಿಂಗ್ ಸೆಂಟರ್‌ಗಳನ್ನು ಮೊದಲು ಶುರು ಮಾಡಲಾಗುವುದು ಎಂದು ಸುನೀಲ್ ಕುಮಾರ್ ಹೇಳಿದರು.