ಮೈಸೂರು: ಅನಂತ್ ಕುಮಾರ್ ಹಾದಿಯಲ್ಲಿ ಹೋಗುತ್ತಿದ್ದೇನೆ. ಯಾವುದೇ ಆಕಾಂಕ್ಷೆಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಬಾರದು ಎಂದು ಅವರು ಹೇಳಿದ್ದಾರೆ. ಹಿಂದೆಯೂ ನಾನು ಅವಕಾಶ ಕೇಳಿಲ್ಲ, ಈಗಲೂ ಕೇಳಲ್ಲ. ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಂಡಿಲ್ಲ. ಅವಕಾಶ ಕೊಟ್ಟರೆ ನೋಡೋಣ. ಎಲ್ಲದಕ್ಕೂ ಸಮಯ ಉತ್ತರ ಕೊಡಲಿದೆ ಎಂದು ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್‌ಕುಮಾರ್ ಹೇಳಿದರು.
ನಗರದ ಕಲಾಮಂದಿರದಲ್ಲಿ ಮಹಿಳೆಯರ ಅಭಿನಯದ ಕುರುಕ್ಷೇತ್ರ ನಾಟಕವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಈ ವೇಳೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಧಾನ ಮಂತ್ರಿ ಮೋದಿ ಅವರ ಭೇಟಿ ಸೌಹಾರ್ದಯುತವಾದದ್ದು. ಈ ವೇಳೆ ರಾಜಕಾರಣ ಚರ್ಚೆಯಾಗಿದೆ. ಚುನಾವಣಾ ಪ್ರಚಾರದ ವೇಳೆ, ದೆಹಲಿಗೆ ಬರುವಂತೆ ಆಹ್ವಾನ ನೀಡಿದ್ದರು. ಬಹಳ ದಿನದ ನಂತರ ಭೇಟಿಯಾಗಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ | BK Hariprasad : ಸಿಎಂ ಇಳಿಸುವ ಮಾತು ಹರಿಪ್ರಸಾದ್‌ರದ್ದೋ, ಡಿಕೆಶಿಯದ್ದೋ? ಮಾಳವೀಯ ಪ್ರಶ್ನೆ
ಪಕ್ಷಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಬಿಜೆಪಿಯಲ್ಲಿದ್ದೇನೆ. ಅನಂತ್ ಕುಮಾರ್ ಕಟ್ಟಿ ಬೆಳೆಸಿದ ಬಿಜೆಪಿ ಪಕ್ಷದ ಉಪಾಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದೇನೆ. ಅನಂತ್ ಕುಮಾರ್ ಪಕ್ಷದ ಜತೆ ಸದಾ ಇದ್ದವರು. ನಾನು ಕೂಡ ಸೈದ್ಧಾಂತಿಕವಾಗಿ ಬಿಜೆಪಿ ಸಿದ್ಧಾಂತ ಜತೆ ಬದ್ಧವಾಗಿದ್ದೇನೆ. ಅನಂತ್ ಕುಮಾರ್ ಅನುಪಸ್ಥಿತಿಯಲ್ಲಿ ನಡೆದ ಮೊದಲ ವಿಧಾನಸಭಾ ಚುನಾವಣೆ ಇದು. ಸೂಕ್ತ ವಿರೋಧ ಪಕ್ಷದ ನಾಯಕ ಆಯ್ಕೆಯಾಗುತ್ತಾರೆ, ಕಾದು ನೋಡಿ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಜನ ಏನೇನೋ ಮಾತನಾಡುತ್ತಾರೆ. ಸೋಷಿಯಲ್ ಮೀಡಿಯಾಗಳ ಮೂಲಕ ನಾವು ಹೇಳಿದ ವಿಷಯ ಒಂದಾದರೆ, ಅದು ಗುರಿ ತಲುಪುವ ವೇಳೆಗೆ ಬೇರೆ ವಿಷಯವಾಗಿ ಬದಲಾಗಿರುತ್ತದೆ. ನಾನು ಪಕ್ಷದ ಜತೆ ಇದ್ದೇನೆ, ಪಕ್ಷವೂ ನನ್ನ ಜತೆ ಇದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸೇರ್ಪಡೆ ಊಹಾಪೋಹಕ್ಕೆ ತೆರೆ ಎಳೆದರು.
ದೆಹಲಿಯಲ್ಲಿ ಮೋದಿಯನ್ನು ಭೇಟಿಯಾಗಿದ್ದ ತೇಜಸ್ವಿನಿ ಅನಂತ್‌ಕುಮಾರ್
ಜು.20ರಂದು ತೇಜಸ್ವಿನಿ ಅನಂತ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದರು. 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೇಳಲು ತೇಜಸ್ವಿನಿ ಅನಂತ್ ಕುಮಾರ್ ಅವರು ದೆಹಲಿಗೆ ಹೋಗಿದ್ದರು ಎಂಬ ಮಾತುಗಳು ಕೇಳಿಬಂದಿದ್ದವು.
ಇದನ್ನೂ ಓದಿ | ವಿಧಾನಸೌಧ ರೌಂಡ್ಸ್: ಬಿಜೆಪಿ ನಾಯಕರಿಗೆ ಈಗ ಜೆಡಿಎಸ್ ಬಾಸ್!
2019ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ಗಾಗಿ ತೇಜಸ್ವಿನಿ ಅನಂತ್ ಕುಮಾರ್ ಪ್ರಯತ್ನಿಸಿದ್ದರು, ಆದರೆ, ತೇಜಸ್ವಿ ಸೂರ್ಯಗೆ ಪಕ್ಷದ ಹೈಕಮಾಂಡ್ ಮಣೆ ಹಾಕಿತ್ತು. ಇತ್ತೀಚೆಗೆ ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ತೇಜಸ್ವಿನಿ ಅನಂತ್ ಕುಮಾರ್ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿ ಹರಡಿತ್ತು. ಆದರೆ, ಈ ವಿಚಾರವನ್ನು ಅವರು ತಳ್ಳಿಹಾಕಿದ್ದರು.