ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಐದು ಗ್ಯಾರಂಟಿ (Congress Guarantee Shceme) ಯೋಜನೆಯ ಘೋಷಣೆ ಬಹಳ ಮುಖ್ಯ ಪಾತ್ರವನ್ನು ವಹಿಸಿದೆ. ಅದರ ಭಾಗವಾದ ಗೃಹಲಕ್ಷ್ಮಿ ಈಗ ಅನುಷ್ಠಾನವಾಗುತ್ತಿದೆ. ಆದರೆ, ಈ ವರ್ಷ ಹೇಗೋ ಲಭ್ಯವಾಗುವ ಗೃಹ ಲಕ್ಷ್ಮಿ ಯೋಜನೆಯು (Gruha lakshmi scheme) ಮುಂದಿನ ವರ್ಷ ನಿಂತು ಹೋಗಲಿದೆಯೇ? ಫಲಾನುಭವಿಗಳಿಗೆ 2 ಸಾವಿರ ರೂಪಾಯಿ ಸಹಾಯಧನ ಸಿಗುವುದಿಲ್ಲವೇ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಕಾರಣ, ಗೃಹಲಕ್ಷ್ಮಿಗೆ ಆರ್ಥಿಕ ಇಲಾಖೆ ನೀಡಿರುವ ಮಾನದಂಡ! ಈ ವರ್ಷ ಯೋಜನೆಯನ್ನು ಅನುಷ್ಠಾನ ಮಾಡಲೇಬೇಕು ಎಂಬ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಮಾನದಂಡ ಕೈಬಿಟ್ಟಿದ್ದಾರೆ. ಇದೇ ಈಗ ಈ ಗೊಂದಲಕ್ಕೆ ಕಾರಣವಾಗಿದೆ.
ಆರ್ಥಿಕ ಇಲಾಖೆ ನೀಡಿರುವ ಮಾನದಂಡವನ್ನು ಕೈಬಿಟ್ಟು ರಾಜ್ಯ ಸರ್ಕಾರ ಯೋಜನೆ ಜಾರಿ ಮಾಡಿದೆ ಎಂಬುದನ್ನು ವರದಿಯೊಂದು ಪುಷ್ಟೀಕರಿಸುತ್ತದೆ. ಗೃಹ ಲಕ್ಷ್ಮಿ ಯೋಜನೆ ಜಾರಿಗೆ ಈ ಮೊದಲು ಆರ್ಥಿಕ ಇಲಾಖೆ ವರದಿ ನೀಡಿತ್ತು. ಯೋಜನೆ ಜಾರಿಗೆ ಒಂದಿಷ್ಟು ಮಾರ್ಗಸೂಚಿಯನ್ನು ಆರ್ಥಿಕ ಇಲಾಖೆ ರೂಪಿಸಿತ್ತು.
ಇದನ್ನೂ ಓದಿ: Lok Sabha Election 2024 : ಲೋಕಸಭೆ ಟಾರ್ಗೆಟ್ 20: ರಾಜ್ಯ ಕೈ ನಾಯಕರಿಗೆ ಡೆಲ್ಲಿ ಫಾರ್ಮುಲಾ!
ಜೂನ್ 1ರಂದು ಸರ್ಕಾರಕ್ಕೆ ವರದಿ
ಗೃಹ ಲಕ್ಷ್ಮಿ ಯೋಜನೆ ಸಂಬಂಧ ಆರ್ಥಿಕ ಇಲಾಖೆಯು ಜೂನ್ 1ರಂದು ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿಯನ್ನು ಕೂಲಂಕಷವಾಗಿ ಗಮನಿಸಿದರೆ ಆರ್ಥಿಕ ಇಲಾಖೆ ನೀಡಿದ ಮಾರ್ಗಸೂಚಿಯನ್ನು ಪಾಲಿಸದೆ ರಾಜ್ಯ ಸರ್ಕಾರವು ಯೋಜನೆ ಘೋಷಣೆ ಮಾಡಿದೆ ಎಂಬುದು ತಿಳಿದುಬರುತ್ತದೆ.
ಆರ್ಥಿಕ ಇಲಾಖೆಯ ಆತಂಕ!
ಗೃಹ ಲಕ್ಷ್ಮಿ ಯೋಜನೆ ಜಾರಿ ಬಗ್ಗೆ ಆರ್ಥಿಕ ಇಲಾಖೆಯಿಂದ ಆತಂಕ ವ್ಯಕ್ತವಾಗಿದೆ. ಈ ಬಗ್ಗೆ ಹಣಕಾಸು ಇಲಾಖೆಯು ಸರ್ಕಾರಕ್ಕೆ ತನ್ನದೇ ಆದ ಅಭಿಪ್ರಾಯ ನೀಡಿದೆ. ಪ್ರತಿ ವರ್ಷವೂ 31,000 ಕೋಟಿ ರೂಪಾಯಿಯು ಗೃಹ ಲಕ್ಷ್ಮಿ ಯೋಜನೆಗೆ ಬೇಕು. ಆದರೆ, ಇಷ್ಟನ್ನು ಕೊಡಲು ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆ ಬಹಳ ಸ್ಪಷ್ಟವಾಗಿ ಹೇಳಿತ್ತು. ಈ ಯೋಜನೆ ಜಾರಿ ಮಾಡಬೇಕಾದರೆ ಕೆಲವು ಷರತ್ತುಗಳನ್ನು ಹಾಕಬೇಕು ಎಂದು ಸಲಹೆ ನೀಡಿತ್ತು. ಷರತ್ತು ಹಾಕದಿದ್ದರೆ ಪ್ರತಿವರ್ಷ ಗೃಹ ಲಕ್ಷ್ಮಿ ಯೋಜನೆ ಅಸಾಧ್ಯ ಎಂದು ಅಭಿಪ್ರಾಯಪಟ್ಟಿತ್ತು. ಆದರೆ, ಇದ್ಯಾವುದನ್ನೂ ಇಲ್ಲಿ ಅನುಸರಿಸಲಾಗಿಲ್ಲ ಎಂಬುದು ತಿಳಿದು ಬಂದಿದೆ.
ಹಣಕಾಸು ಇಲಾಖೆ ಕಂಡೀಷನ್ ಏನಿತ್ತು?
- ಬಿಪಿಎಲ್ ಕಾರ್ಡ್ದಾರರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆ ನೀಡಬೇಕು
- ಆದಾಯ ತೆರಿಗೆ ಪಾವತಿದಾರರಿಗೆ ಕೊಡಬಾರದು
- ಜಿಎಸ್ಟಿ ರಿಟರ್ನ್ಸ್ ಪಾವತಿಸುವ ಮಹಿಳೆಯರಿಗೆ ನೀಡಬಾರದು
- ಪ್ರೊಫೆಷನಲ್ ಟ್ಯಾಕ್ಸ್ ಪಾವತಿದಾರರಿಗೆ ಕೊಡಬಾರದು
- 5 ಎಕರೆಗೂ ಮೀರಿದ ಒಣಭೂಮಿ ಹೊಂದಿರುವವರಿಗೆ ಕೊಡುವಂತಿಲ್ಲ
- ಒಂದು ವರ್ಷಕ್ಕೆ 1.2 ಲಕ್ಷ ಆದಾಯ ಇರುವವರಿಗೆ ಕೊಡಲಾಗದು
- ನಾಲ್ಕು ಚಕ್ರಗಳ ವಾಹನ ಹೊಂದಿದವರಿಗೂ ಕೊಡಬಾರದು
- ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿ ಪಡೆಯುವರಿಗೆ ಅನ್ವಯಿಸಲ್ಲ
- ಅಂಗನವಾಡಿ ಕಾರ್ಯಕರ್ತೆಯರು, ಆಶಾ, ಸರ್ಕಾರದ ಗುತ್ತಿಗೆ ನೌಕರರು, ಅತಿಥಿ ಶಿಕ್ಷಕರು, ಗ್ರಾಮ ಸಹಾಯಕರಿಗೆ ಕೊಡಬಾರದು
ಇದನ್ನೂ ಓದಿ : Lok Sabha Election 2024 : ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿ.ಕೆ. ಸುರೇಶ್ ಆಪ್ತೆ ಕುಸುಮಾ ಕಣಕ್ಕೆ?
ಹೀಗೆ ಸಾಲು ಸಾಲು ಷರತ್ತುಗಳನ್ನು ಹಣಕಾಸು ಇಲಾಖೆ ನೀಡಿದೆ. ಆದರೆ, ಇದರಲ್ಲಿ ಕೆಲವೇ ಕೆಲವು ಶಿಫಾರಸನ್ನು ಮಾತ್ರ ರಾಜ್ಯ ಸರ್ಕಾರ ಅನುಸರಿಸಿದೆ. ಹೀಗಾಗಿ ಮುಂದಿನ ವರ್ಷ ಏನಾಗಲಿದೆ ಎಂಬ ಗೊಂದಲ ಮನೆ ಮಾಡಿದೆ.