ಬೆಂಗಳೂರು: ಈ ಬಾರಿ ಗಣರಾಜ್ಯೋತ್ಸವ ಪಥಸಂಚಲನದಲ್ಲಿ (Republic Day parade) ರಾಜ್ಯದ ಯಾವುದೇ ಸ್ತಬ್ಧಚಿತ್ರಕ್ಕೆ (Karnataka Tableau) ಅವಕಾಶ ಸಿಕ್ಕಿಲ್ಲ. ರಾಜ್ಯ ಸರ್ಕಾರದ ವಾರ್ತಾ ಇಲಾಖೆ ಕಳುಹಿಸಿದ್ದ ಸ್ತಬ್ಧ ಚಿತ್ರಗಳ ನಾಲ್ಕು ಮಾದರಿಗೂ ಪ್ರದರ್ಶನಕ್ಕೆ ಅನುಮತಿ ದೊರೆತಿಲ್ಲ.
ನಾಲ್ಕು ಮಾದರಿಯ ಸ್ತಬ್ಧಚಿತ್ರಗಳನ್ನು ರಾಜ್ಯ ಸರ್ಕಾರ ಕಳುಹಿಸಿತ್ತು. ಬ್ರಾಂಡ್ ಬೆಂಗಳೂರು (Brand bengaluru), ನಾಲ್ವಡಿ ಕೃಷ್ಣರಾಜ ಒಡೆಯರ್ (Nalvadi Krishnaraja Wadiyar), ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2 (Bengaluru Airport Terminal 2), ಅಣ್ಣಮ್ಮ ದೇವಸ್ಥಾನದ (Annamma Temple) ಮಾದರಿಗಳನ್ನು ಕಳುಹಿಸಲಾಗಿತ್ತು. ರಾಜ್ಯದ ಸ್ತಬ್ಧ ಚಿತ್ರಕ್ಕೆ ಈ ಬಾರಿ ಅನುಮತಿ ನಿರಾಕರಣೆ ಮಾಡಿದೆ ಎಂದು ರಾಜ್ಯದ ವಾರ್ತಾ ಇಲಾಖೆಯ ದೆಹಲಿ ಮೂಲಗಳು ಮಾಹಿತಿ ತಿಳಿಸಿವೆ.
ಸುಮಾರು 14 ವರ್ಷಗಳಿಂದ ನಿರಂತರವಾಗಿ ಕರ್ನಾಟಕ ರಾಜ್ಯದ ಸ್ತಬ್ಧ ಚಿತ್ರ ಪ್ರದರ್ಶನವಾಗಿದೆ. ಈ ಸಲ ಬೇರೆ ರಾಜ್ಯದ ಮಾದರಿ ಪ್ರದರ್ಶನಕ್ಕೆ ಅವಕಾಶ ಕೊಡಬೇಕು ಎಂದು ಕೇಂದ್ರ ಸರ್ಕಾರ ಕಾರಣ ತಿಳಿಸಿದೆ.
ಈ ಬಾರಿ ತೆಲಂಗಾಣ ಮತ್ತು ಕರ್ನಾಟಕ ರಾಜ್ಯದ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅನುಮತಿ ಸಿಕ್ಕಿಲ್ಲ. ಆದರೆ ತೆಲಂಗಾಣದಲ್ಲಿ ಕೇಂದ್ರ ಸರ್ಕಾರದ ನಡೆಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮರುಪರಿಶೀಲನೆ ನಡೆಸಿ ಮತ್ತೆ ಅನುಮತಿ ನೀಡಲಾಗಿದೆ. ಆದರೆ ರಾಜ್ಯದ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡದಿದ್ದರೂ ಈ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ, ಬದಲಾಗಿ ಮಾಹಿತಿ ಮುಚ್ಚಿಡುವ ಕೆಲಸ ಮಾಡಿದೆ. ಮಾಧ್ಯಮಗಳಿಗೂ ತಿಳಿಯದಂತೆ ಮಾಹಿತಿ ಮುಚ್ಚಿಡಲಾಗಿದೆ.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲೂ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡಲಾಗಿತ್ತು. ಉತ್ತರ ಪ್ರದೇಶ ಸೇರಿದಂತೆ ಬೇರೆ ರಾಜ್ಯಗಳಿಗೆ ಅವಕಾಶ ನೀಡಬೇಕು ಎಂಬ ಕಾರಣ ನೀಡಿ ಕಳೆದ ವರ್ಷ ರಾಜ್ಯದ ಟ್ಯಾಬ್ಲೋಗೆ ಅವಕಾಶ ನಿರಾಕರಣೆ ಮಾಡಲಾಗಿತ್ತು. ಬಳಿಕ ಆಗಿನ ಸಿಎಂ ಬೊಮ್ಮಾಯಿ ಹಾಗೂ ಜನರ ಒತ್ತಡದ ಮೇರೆಗೆ, ಹಾಗೂ ರಾಜ್ಯದಲ್ಲಿ ಚುನಾವಣೆ ಸಮೀಪಿಸಿದ್ದ ಕಾರಣ ರಾಜ್ಯಕ್ಕೆ ಕೊನೆ ಗಳಿಗೆಯಲ್ಲಿ ಅವಕಾಶ ದೊರೆತಿತ್ತು. ಗಣರಾಜ್ಯೋತ್ಸವ ಪರೇಡ್‌ಗೆ 15 ದಿನ ಬಾಕಿ ಇರುವಾಗ ಪುನಃ ಅನುಮತಿ ದೊರೆತಿತ್ತು.
ಈ ಬಾರಿಯೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ (CM Siddaramaih), ಸಚಿವರು ಮಾಡಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ಸಿಎಂ ಮೌನ ಮುರಿಯುತ್ತಾರಾ, ಸತತ 14 ಬಾರಿ ಪ್ರದರ್ಶನ ಆಗಿರುವ ಸ್ತಬ್ಧ ಚಿತ್ರ 15ನೇ ಬಾರಿಯೂ ಪ್ರದರ್ಶನವಾಗುತ್ತಾ ಎಂಬುದೀಗ ಕುತೂಹಲಕರವಾಗಿದೆ.
ಇದನ್ನೂ ಓದಿ: Women Agniveers: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮಹಿಳಾ ಅಗ್ನಿವೀರರು ಭಾಗಿ; ಇದೇ ಮೊದಲು