Site icon Vistara News

Liquor Shop : ‌ಹೊಸ ಲಿಕ್ಕರ್‌ ಶಾಪ್‌ಗಿಲ್ಲ ಲೈಸೆನ್ಸ್‌; MSILಗೆ ಓಕೆ, ಅಮಾನತಾಗಿದ್ದರೂ ಸಿಗುತ್ತೆ ಪರ್ಮಿಶನ್!

liquor shop

ಬೆಂಗಳೂರು: ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರವು ಮೊದಲೇ ಘೋಷಣೆ ಮಾಡಿದ್ದ ಐದು ಗ್ಯಾರಂಟಿ ಯೋಜನೆಗಳಲ್ಲಿ (Congress Guarantee Scheme) ನಾಲ್ಕನ್ನು ಈಗಾಗಲೇ ಜಾರಿ ಮಾಡಿದೆ. ಇದಕ್ಕೆ ಈ ಆರ್ಥಿಕ ವರ್ಷದಲ್ಲಿ ಸರಿಸುಮಾರು 38 ಸಾವಿರ ಕೋಟಿ ರೂಪಾಯಿಯನ್ನು ಎತ್ತಿಡಬೇಕಿದೆ. ಹೀಗಾಗಿ ಸರ್ಕಾರವು ಆದಾಯ ಮೂಲವನ್ನು ಹೆಚ್ಚಿಸಲು ಮುಂದಾಗಿದೆ. ಸಹಜವಾಗಿ ಇದಕ್ಕೆ ಮದ್ಯವೇ (Liquor News) ಕಣ್ಣಮುಂದೆ ಬರುತ್ತದೆ. ಇದರ ಭಾಗವಾಗಿ ಪ್ರತಿ ಗ್ರಾಮ ಪಂಚಾಯಿತಿಗೆ (Grama Panchayat) ಎರಡರಂತೆ ಮದ್ಯದಂಗಡಿ (Liquor Shop) ತೆರೆಯುವ ಪ್ರಸ್ತಾಪ ಕೇಳಿಬಂದಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾದಾಗ, ಅಂತಹ ನಿರ್ಧಾರವನ್ನೇ ಮಾಡಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿತ್ತು. ಈಗ ಹೊಸ ಮದ್ಯದಂಗಡಿಯನ್ನು ತೆರೆಯಲು ಲೈಸೆನ್ಸ್‌ (License for liquor shop) ಕೊಡುವುದಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ (Excise Minister RB Thimmapura) ಹೇಳಿದ್ದಾರೆ. ಆದರೆ, ಅಮಾನತಾಗಿದ್ದ, ರದ್ದಾಗಿದ್ದ, ನವೀಕರಣವಾಗದೇ ಬಾಕಿ ಉಳಿದಿದ್ದ ಮದ್ಯದಂಗಡಿ ತೆರೆಯಲು ಅನುವು ಮಾಡಿಕೊಡುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಗೃಹ ಕಚೇರಿ ಕೃಷ್ಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಹೊಸ ಮದ್ಯದಂಗಡಿಗೆ ಲೈಸೆನ್ಸ್ ಕೊಡುವುದಿಲ್ಲ. ಆದರೆ, ಹಿಂದಿನ ಬಾಕಿ ಉಳಿದಿರುವ ಲೈಸೆನ್ಸ್‌ಗಳು ಹಾಗೂ ಎಂಎಸ್ಐಎಲ್ ಮದ್ಯದಂಗಡಿಗಳನ್ನು ತೆರಯಲು ಅಡ್ಡಿಯಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Mysore dasara : ದಸರಾ ಮಹೋತ್ಸವದ ಉದ್ಘಾಟನೆಗೆ ಕ್ಷಣಗಣನೆ; ನಾಳೆ ಹಂಸಲೇಖರಿಂದ ಸಿಗಲಿದೆ ಚಾಲನೆ

ಅಮಾನತಾಗಿದ್ದ, ರದ್ದಾಗಿದ್ದ, ನವೀಕರಣವಾಗದೆ ಬಾಕಿ ಉಳಿದಿದ್ದ ಮದ್ಯದಂಗಡಿ ತೆರೆಯಲು ಅನುವು ಮಾಡಿಕೊಡುತ್ತೇವೆ. ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಬೇರೆ ಬೇರೆ ಮಾರ್ಗಗಳನ್ನು ರೂಪಿಸಲಾಗಿದೆ. ಮದ್ಯ ಮಾರಾಟಕ್ಕೆ ಹೆಚ್ಚಳ ಮಾಡುವುದಕ್ಕೆ ಯಾವುದೇ ಟಾರ್ಗೆಟ್ ನಿಗದಿ ಮಾಡಿಲ್ಲ. ಎಂದಿನಂತೆ ಯಥಾ ಪ್ರಕಾರ ಮದ್ಯ ಮಾರಾಟವಾಗಲಿದೆ ಎಂದು ಸಚಿವ ತಿಮ್ಮಾಪುರ ಹೇಳಿದ್ದಾರೆ.

ಮಾಲ್‌ನಲ್ಲೂ ಸಿಗಲಿದೆ ಎಣ್ಣೆ!

ಶಾಪಿಂಗ್‌ ಮಾಲ್‌ಗಳಿಗೆ, ಸೂಪರ್‌ ಮಾರ್ಕೆಟ್‌ಗೆ (Shopping Mall and Super Market) ಕುಟುಂಬ ಸಮೇತ ಹೋದಾಗ ಪುರುಷರಿಗೆ ಬೇಗನೆ ಬೋರ್‌ (Men feel bore) ಆಗಿಬಿಡುತ್ತದೆ. ಹೆಣ್ಮಕ್ಕಳೂ ಶಾಪಿಂಗ್‌ (Womens Shopping) ಮಾಡುವಾಗ ನಾವೇನ್ಮಾಡೋಣ ಅಂತ ಬೇಜಾರು ಮಾಡಿಕೊಳ್ಳುವ ಗಂಡಸರಿಗೆ ಸರ್ಕಾರ ಈಚೆಗೆ ಒಂದು ಗುಡ್‌ ನ್ಯೂಸ್‌ (Good News for Men) ಕೊಟ್ಟಿದೆ. ಆದರೆ, ಇದು ಎಲ್ಲ ಪುರುಷರಿಗೆ ಅನ್ವಯ ಅಲ್ಲ!

ವಿಷಯ ಏನಪ್ಪಾ ಅಂದರೆ, ಇನ್ನು ಮುಂದೆ ಶಾಪಿಂಗ್‌ ಮಾಲ್‌, ಸೂಪರ್‌ ಮಾರ್ಕೆಟ್‌ಗಳಲ್ಲೂ ಮದ್ಯ ಮಾರಾಟಕ್ಕೆ (Liqour business) ಸರ್ಕಾರ ಪ್ಲ್ಯಾನ್‌ ಮಾಡಿದೆ. ಹೀಗಾಗಿ ಇನ್ನು ಮುಂದೆ ಹೆಣ್ಮಕ್ಕಳು ಶಾಪಿಂಗ್‌ಗೆ ಅಂತ ಹೊರಟಾಗ ನೀವು ಹೋಗ್ಬನ್ನಿ, ನಾನು ಬರೋಲ್ಲ ಅನ್ನೋ ಗಂಡಸರು ಕೂಡಾ ನಾನೂ ಬರ್ತೀನಿ ಇರಿ ಅನ್ನಬಹುದು!

ದೊಡ್ಡ ದೊಡ್ಡ ಮಾಲ್‌, ಸೂಪರ್‌ ಮಾರ್ಕೆಟ್‌ಗಳಲ್ಲಿ ಆಗಾಗಲೇ ಸಿಎಲ್‌-2 ಪರವಾನಗಿ ಹೊಂದಿರುವವರಿಂದ ಮದ್ಯ ಖರೀದಿಸಿ ಮಾರಾಟ ಮಾಡಲಾಗುತ್ತಿದೆ. ಆದರೆ, ಮಾಲ್‌ಗಳಿಗೆ ಪ್ರತ್ಯೇಕ ಪರವಾನಗಿ ನೀಡಿಲ್ಲ. ಇದೀಗ ಮಾಲ್‌, ಸೂಪರ್‌ ಮಾರ್ಕೆಟ್‌ಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಗಿ ನೀಡೋದಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಅಬಕಾರಿ ಸಚಿವರ ಜತೆಗೆ ಒಂದು ಸುತ್ತಿನ ಸಭೆ ನಡೆದಿದೆ ಎಂದು ತಿಳಿದುಬಂದಿದೆ. ಇನ್ನು ಸರ್ಕಾರ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ.

ಅಂದಹಾಗೆ ಈ ಸುದ್ದಿ ಓದಿ, ಇದೇನಿದು ಪುರುಷರಿಗೆ ಮಾತ್ರಾನಾ ಅಂತ ಹೆಣ್ಮಕ್ಕಳು ತಲೆ ಕೆಡಿಸಿಕೊಳ್ಳಬೇಕಿಲ್ಲ, ಸಿಟ್ಟು ಮಾಡ್ಕೊಳ್ಳೋದೂ ಬೇಕಾಗಿಲ್ಲ. ಶಾಪಿಂಗ್‌ಗೆ ಬಂದಿರೋರು ಆರಾಮವಾಗಿ ಲಿಕ್ಕರ್‌ ಶಾಪ್‌ಗೆ ಹೋಗಿ ತಮಗಿಷ್ಟವಾದ ಬ್ರಾಂಡನ್ನು ಚೂಸ್‌ ಮಾಡಿಕೊಳ್ಳಲು ಅವಕಾಶವಿರುತ್ತದೆ. ಇದು ಪುರುಷರು ಮತ್ತು ಹೆಣ್ಮಕ್ಕಳಿಗೆ ಇಬ್ಬರಿಗೂ ಓಪನ್‌.

ಇಲ್ಲಿ ಮಹಿಳೆಯರೂ ಲಿಕ್ಕರ್‌ ಖರೀದಿ ಮಾಡಬಹುದು.

ಇದರ ಹಿಂದೆ ಇರುವುದು ಗ್ಯಾರಂಟಿ ಪಾಲಿಟಿಕ್ಸ್‌

ಹಾಗಂತ ಇದನ್ನು ಯಾರೋ ಪುರುಷರು ಖುಷಿಯಾಗಿರ್ಲಿ, ಮಾಲ್‌ಗಳಲ್ಲಿ ಮದ್ಯ ಸಿಗ್ಲಿ ಅಂತ ಮಾಡ್ತಿಲ್ಲ ಸರ್ಕಾರ. ಸಾಲು ಸಾಲು ಗ್ಯಾರಂಟಿಗಳನ್ನ ಜಾರಿ ಮಾಡಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರೋ ಸರ್ಕಾರ, ಇದೀಗ ತನ್ನ ಆದಾಯವನ್ನ ಹೆಚ್ಚಿಸಿಕೊಳ್ಳಲು ಈ ಅಸ್ತ್ರ ಬಳಸಲು ತಯಾರಿ ನಡೆಸಿದೆ. ಮದ್ಯಪ್ರಿಯರಿಗೆ ಗುಡ್‌ನ್ಯೂಸ್‌ ಕೊಡೋದರ ಜೊತೆಗೆ ಆದಾಯ ಏರಿಕೆಗೂ ಪ್ಲಾನ್‌ ಮಾಡಿಕೊಂಡಿದೆ.

ಜನರಿಗೆ ಸಾಲು ಸಾಲು ಗ್ಯಾರಂಟಿಗಳನ್ನು ನೀಡಿದ್ದ ಸರ್ಕಾರ, ಇದೀಗ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ಮಾರ್ಗಗಳನ್ನು ಹುಡುಕುತ್ತಿರುವ ಸರ್ಕಾರ ಅಬಕಾರಿ ಇಲಾಖೆ ಮೇಲೆ ಕಣ್ಣಿಟ್ಟಿದೆ. ಮದ್ಯ ಮಾರಾಟದ ಮೂಲಕ ತನ್ನ ಖಜಾನೆ ತುಂಬಿಸಿಕೊಳ್ಳೋಕೆ ಪ್ಲ್ಯಾನ್‌ ಮಾಡಿಕೊಂಡಿದೆ. ಸದ್ಯ ಬಾರ್‌, ರೆಸ್ಟೋರೆಂಟ್‌ಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಲೈಸೆನ್ಸ್‌ ನೀಡಿದ್ದ ಸರ್ಕಾರ, ಇನ್ಮುಂದೆ ಮಾಲ್‌ ಹಾಗೂ ಸೂಪರ್‌ ಮಾರ್ಕೆಟ್‌ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಮುಂದಾಗಿದೆ.

ಅಬಕಾರಿ ತೆರಿಗೆ ಸಂಗ್ರಹವೂ ಹೆಚ್ಚಳ

ಈ ಹಿಂದೆ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದ ಸರ್ಕಾರ 30 ಸಾವಿರ ಕೋಟಿ ತೆರಿಗೆ ಸಂಗ್ರಹಕ್ಕೆ ಟಾರ್ಗೆಟ್‌ ನೀಡಿತ್ತು. ಸದ್ಯ ಏಪ್ರಿಲ್‌ 1ರಿಂದ ಆ.28ವರೆಗೆ 13,515 ಕೋಟಿ ಆದಾಯ ಸಂಗ್ರಹವಾಗಿದೆ. ಇದೀಗ 1994ರ ನಂತರ ಹೊಸ ಸಿಎಲ್-2, ಸಿಎಲ್-9 ಪರವಾನಗಿ ನೀಡದ ಸರ್ಕಾರ, ಹೊಸ ಪಬ್‌ಗಳಿಗೂ ಲೈಸೆನ್ಸ್‌ ನೀಡೋ ಮೂಲಕ ಆದಾಯ ಹೆಚ್ಚಿಸಿಕೊಳ್ಳೋಕೆ ಸಜ್ಜಾಗಿದೆ. ಅಲ್ಲದೇ ಲೈಸೆನ್ಸ್ ವರ್ಗಾವಣೆ ಶುಲ್ಕವನ್ನು ಕೂಡ ಶೇಕಡಾ 5ರಷ್ಟು ಹೆಚ್ಚಳ ಮಾಡುವ ಯೋಚನೆಯಲ್ಲಿದೆ.

ಇದನ್ನೂ ಓದಿ: Mysore dasara : ಜಂಬೂ ಸವಾರಿಯಲ್ಲಿ ಗಜ ಗಾಂಭೀರ್ಯ; ಗಮನ ಸೆಳೆವ ಆನೆಗಳ ಸೌಂದರ್ಯ

ಗ್ಯಾರಂಟಿಗಳ ಮೂಲಕ ಆರ್ಥಿಕ ಸ್ಥಿತಿಯಲ್ಲಿ ಅಸಮತೋಲನ ಕಾಣುತ್ತಿರುವ ಸರ್ಕಾರಕ್ಕೆ ಅಬಕಾರಿ ಇಲಾಖೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ ಕಾಣುತ್ತಿದೆ. ಮದ್ಯದ ಮೇಲೆ ಎಷ್ಟೇ ಟ್ಯಾಕ್ಸ್ ಹಾಕಿದರೂ ಕೇಳಲ್ಲ ಅನ್ನೋದು ಕೂಡಾ ಸರ್ಕಾರಕ್ಕಿರುವ ಒಂದು ನೆಮ್ಮದಿ!

Exit mobile version