ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಶಿಕ್ಷಣ ನೀತಿಗೆ (NEP 2020) ಕೊನೇ ಮೊಳೆ ಹೊಡೆಯಲು ರಾಜ್ಯ ಸರ್ಕಾರ (Karnataka Government) ಸಿದ್ಧತೆ ನಡೆಸಿದ್ದು, ಈ ನಿರ್ಧಾರಕ್ಕೆ ಶಿಕ್ಷಣ ತಜ್ಞರು (Educational experts) ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ, “ರಾಜ್ಯ ಶಿಕ್ಷಣ ನೀತಿ”ಗೆ (SEP) ಮಹತ್ವದ ಸಲಹೆಗಳನ್ನೂ ನೀಡಿದ್ದಾರೆ. ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶವು ನಗರದ ಗಾಂಧಿಭವನದಲ್ಲಿ ಶುಕ್ರವಾರ (ಜು. 28) ನಡೆದಿದ್ದು, ಕೆಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ (Education Minister Madhu Bangarappa) ಸಹ ರಾಜ್ಯದಲ್ಲಿ ಎನ್‌ಇಪಿ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ- 2020 (ಎನ್ಇಪಿ- National Education Policy 2020) ಜಾರಿಯಾಗಿ 3 ವರ್ಷಗಳೇ ಉರುಳಿದರೂ ಈ ಕುರಿತ ವಾದ- ವಿವಾದಗಳು ಮಾತ್ರ ಇನ್ನೂ ಮುಂದುವರಿದಿವೆ. ರಾಜ್ಯದಲ್ಲಿ ಎನ್‌ಇಪಿ ನಿಷೇಧ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಈಗಾಗಲೇ ಕೈಗೊಂಡಿದ್ದು, ಬಜೆಟ್‌ನಲ್ಲಿ (Karnataka State Budget 2023) ಸಹ ಘೋಷಣೆ ಮಾಡಿದೆ. ಇದರ ಮುಂದುವರಿದ ಭಾಗವಾಗಿ ಮಹತ್ವದ ಬೆಳವಣಿಗೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಶಿಕ್ಷಣ ತಜ್ಞರು ಅಖಿಲ ಭಾರತ ಶಿಕ್ಷಣ (Education news) ಉಳಿಸಿ ಸಮಿತಿ ಆಯೋಜಿಸಿದ್ದ ರಾಜ್ಯ ಮಟ್ಟದ ಸಮಾವೇಶದಲ್ಲಿ ಭಾಗಿಯಾಗಿ ಎನ್‌ಇಪಿ ರದ್ದು ಮಾಡುವುದರ ಜತೆಗೆ ಗುಣಮಟ್ಟದ ಪರ್ಯಾಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ:Karnataka Politics : ಸಚಿವರಿಂದ 6 ಪರ್ಸೆಂಟ್ ವರ್ಗಾವಣೆ, ಬಾಕಿಯದ್ದು ಸಿಎಂಗೆ: ಸತೀಶ್ ಜಾರಕಿಹೊಳಿ
ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್, ಯುಜಿಸಿ ಮಾಜಿ ಅಧ್ಯಕ್ಷ ಸುಖ್ ದೇವ್ ತಾರೋಟ್ ಸೇರಿ ಹಲವರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ವೇಳೆ ಶಿಕ್ಷಣ ತಜ್ಞರ ಅನಿಸಿಕೆ, ಅಭಿಪ್ರಾಯಗಳನ್ನು ಆಲಿಸಿದ ಸಚಿವರು ಎನ್‌ಇಪಿ ರದ್ದು ಮಾಡುವ ಕುರಿತ ತಮ್ಮ ಬದ್ಧತೆಯನ್ನು ಪ್ರದರ್ಶನ ಮಾಡಿದರು. ಅಲ್ಲದೆ ಈ ಕುರಿತು ಪ್ರಕ್ರಿಯೆ ನಡೆಯುತ್ತಿದ್ದು, ನೂತನ ರಾಜ್ಯ ಶಿಕ್ಷಣ ನೀತಿಗೆ ನಿಮ್ಮೆಲ್ಲರ ಸಲಹೆಗಳನ್ನು ಪರಿಗಣಿಸುವ ಭರವಸೆ ನೀಡಿದರು.
ಆಗಸ್ಟ್ 2ರ ಬಳಿಕ ಸಿಎಂ ನೇತೃತ್ವದಲ್ಲಿ ಸಭೆ
ಆಗಸ್ಟ್ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಹೊರತಾಗಿ ಪ್ರತ್ಯೇಕ ನೀತಿಯನ್ನು ಅಳವಡಿಸಲು ಸಭೆ ಕರೆಯಲಾಗಿತ್ತು. ಆದರೆ, ಸಿಎಂ ದೆಹಲಿಗೆ ಹೋಗಬೇಕಿರುವ ಕಾರಣ ಸಭೆ ಮುಂದಕ್ಕೆ ಹೋಗಿದೆ. ಬಳಿಕ ದಿನಾಂಕ ನಿಗದಿ ಮಾಡಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.
ಹೊರ ದೇಶದ ಶಿಕ್ಷಣ ಸಂಸ್ಥೆಗಳ ಹಿಡಿತದ ಭಯ- ಸುಖ್ ದೇವ್ ತೋರಟ್
ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಯುಜಿಸಿ ಮಾಜಿ ಅಧ್ಯಕ್ಷ ಸುಖ್ ದೇವ್ ತೋರಟ್ (Sukhadeo Thorat) ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಮಗ್ರವಾಗಿ ಚರ್ಚೆ ಮಾಡದೆ ಅನುಷ್ಠಾನ ಮಾಡಲಾಗುತ್ತಿದೆ. ಹೊರ ದೇಶದ ಶಿಕ್ಷಣ ಸಂಸ್ಥೆಗಳು ಇಲ್ಲಿನ ವಿಶ್ವ ವಿದ್ಯಾಲಯಗಳಲ್ಲಿ ಹಿಡಿತ ಸಾಧಿಸಲು ಬಿಡಬಾರದು. ಏಕೆಂದರೆ ಮುಂದಿನ ದಿನಗಳಲ್ಲಿ ಅವುಗಳು ಹಿಡಿತಕ್ಕೆ ಸಿಗುವುದಿಲ್ಲ. ವಿಶ್ವ ವಿದ್ಯಾಲಯಗಳ ಬೆಳವಣಿಗೆಗೆ ಬಾಹ್ಯ ರೂಪದಲ್ಲಿ ಹೊರದೇಶಗಳ ಬೆಂಬಲವನ್ನು ಪಡೆದುಕೊಳ್ಳಬೇಕು. ಸದ್ಯ ದೇಶದಿಂದ ಹೆಸರು ಮಾಡಿರುವ ಐಐಟಿ, ಐಐಎಸ್‌ಸಿ (IISC) ಎಲ್ಲವೂ ಸಹ ಇದೇ ಮಾದರಿಯಲ್ಲಿ ಅಭಿವೃದ್ಧಿ ಆಗಿದೆ. ಎನ್‌ಇಪಿ ಅಡಿಯಲ್ಲಿ ಸಂಸ್ಕೃತ ಭಾಷೆಯನ್ನು (Sanskrit language) ಹಿಂದಿಗೆ ಪರ್ಯಾಯವಾಗಿ ಹೇರಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.
ಲೋಪ ದೋಷಗಳಿಗೆ ಅವಕಾಶ ನೀಡುವುದಿಲ್ಲ- ಡಾ. ಎಂ.ಸಿ. ಸುಧಾಕರ್
ಎನ್‌ಇಪಿ ಜಾರಿಯಾಗಿ ಈಗಾಗಲೇ 2 ವರ್ಷ ಕಳೆದು ಹೋಗಿದೆ. ನಾವು ಮತ್ತೆ ಯಾವುದೇ ಲೋಪ ದೋಷಗಳಿಗೆ ಅವಕಾಶ ನೀಡುವುದಿಲ್ಲ. ಸಿನಿಮಾ ಬಿಡುಗಡೆ ರೀತಿಯಲ್ಲಿ ನಾವು ಹೊಸ ನೀತಿ ಘೋಷಣೆ ಮಾಡೋಕೆ ಆಗಲ್ಲ. ನಿಮ್ಮೆಲ್ಲ ಸಲಹೆ ಮಾರ್ಗದರ್ಶನ ನಮಗೆ ಬೇಕಾಗಿದೆ. ನಮ್ಮ ಸರ್ಕಾರದ ಬಜೆಟ್‌ನಲ್ಲಿ ಸಹ ಹೊಸ ನೀತಿ ಬಗ್ಗೆ ಭರವಸೆ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Tahsildar Transfer : ಕಂದಾಯ ಇಲಾಖೆಯಲ್ಲಿ ಮೇಜರ್ ಸರ್ಜರಿ; 46 ತಹಸೀಲ್ದಾರ್ ವರ್ಗಾವಣೆ
ಗುಮಾಸ್ತರಾಗಲು ಅಲ್ಲ ಶಿಕ್ಷಣ- ಎಚ್.ಸಿ. ಮಹದೇವಪ್ಪ
ನಾನು ಅಧಿಕಾರದಲ್ಲಿ ಇಲ್ಲದೆ ಇರುವಾಗ ಸಹ ಎನ್‌ಇಪಿಯನ್ನು ವಿರೋಧ ಮಾಡಿದ್ದೇನೆ. ಒಂದು ಶಾಸನ ಜಾರಿ ಆಗಬೇಕಾದರೆ, ಅದು ಜನರಿಗೆ ಎಷ್ಟು ಅನುಕೂಲ ಆಗುತ್ತದೆ ಎಂಬುದು ತಿಳಿದಿರಬೇಕು. ಸುಬ್ರಹ್ಮಣ್ಯನ್ ಹಾಗೂ ಪಟಿಯಾಲಾ ಸಮಿತಿ ವರದಿ ಅನ್ವಯ ದೇಶದಲ್ಲಿ ಶೈಕ್ಷಣಿಕ ಸುಧಾರಣೆ ಆಯಿತು. ಆದರೆ, ಈ ಎನ್‌ಇಪಿ ಕುರಿತಾಗಿ ಯಾವುದೇ ಚರ್ಚೆ ಆಗಿಲ್ಲ. ಸಂಸತ್‌ನಲ್ಲಿ ಇದರ ಪ್ರಸ್ತಾಪವೂ ಆಗಲಿಲ್ಲ. ಜ್ಯೋತಿ ಬಾ ಪುಲೆ ಅವರು ಪ್ರತಿಯೊಬ್ಬರಿಗೂ ಶಿಕ್ಷಣ ನೀಡಲು ಹೋರಾಟ ಮಾಡಿದರು. ನಾವು ಬರೀ ಗುಮಾಸ್ತರಾಗಿ ಕೆಲಸ ಮಾಡೋಕೆ ಶಿಕ್ಷಣ ಪಡೆಯುವುದಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ (Minister HC Mahadevappa) ಕಿಡಿಕಾರಿದ್ದಾರೆ.
ಎನ್‌ಇಪಿ ಜಾರಿ ಇಲ್ಲವೇ ಇಲ್ಲ; ಎಸ್‌ಇಪಿ ನಮ್ಮ ಗುರಿ: ಮಧು ಬಂಗಾರಪ್ಪ
ಈಗಾಗಲೇ ನಾವು ಹೊಸ ಶಿಕ್ಷಣ ನೀತಿ ಬಗ್ಗೆ ತಯಾರಿ ಆರಂಭ ಮಾಡಿದ್ದೇವೆ. ನಮ್ಮ ಸರ್ಕಾರ ಒಂದು ಒಳ್ಳೆಯ ರೀತಿಯಲ್ಲಿ ನೀತಿಯನ್ನು ರೂಪಿಸುತ್ತೇವೆ. ಶಿಕ್ಷಣ ಕ್ಷೇತ್ರದ ಎಲ್ಲ ನುರಿತ ತಜ್ಞರಿಂದ ಸಲಹೆ ಪಡೆದು ಮುಂದೆ ಸಾಗುತ್ತೇವೆ. ನಮಗೆ ಮಕ್ಕಳ ಭವಿಷ್ಯ ತುಂಬಾ ಮುಖ್ಯ ಆಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ನಮಗೆ ಎಲ್ಲ ರೀತಿಯಿಂದ ಸಹಕಾರ ನೀಡುತ್ತಿದ್ದಾರೆ. ಇಲ್ಲಿ ಸೇರಿರುವ ಎಲ್ಲ ಗಣ್ಯರಿಂದ ಮಾಹಿತಿ ಪಡೆಯುತ್ತೇನೆ. ನನ್ನ ಶಿಕ್ಷಣದ ಬಗ್ಗೆ ತುಂಬಾ ಜನ ಕಮೆಂಟ್ ಮಾಡಿದ್ದಾರೆ. ನನ್ನ ಶಿಕ್ಷಣದ ಬಗ್ಗೆ ಮಾತನಾಡಿದವರಿಗೆ ಒಳ್ಳೆಯದಾಗಲಿ. ಮಕ್ಕಳ ಒಳ್ಳೆಯದಕ್ಕೆ, ಭವಿಷ್ಯಕ್ಕೆ ನಾವು ಏನು ಬೇಕಿದ್ದರೂ ಮಾಡುತ್ತೇವೆ. ಮಕ್ಕಳ ಭವಿಷ್ಯದ ಜೊತೆ ನಮ್ಮ ಸರ್ಕಾರ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಎನ್‌ಇಪಿಯನ್ನು ನಾವು ಆರಂಭದಿಂದಲೂ ವಿರೋಧಿಸುತ್ತಾ ಬಂದಿದ್ದೇವೆ. ನಾವು ಹೊಸ ಎಸ್‌ಇಪಿ ಬಗ್ಗೆ ಚಿಂತನೆ ಮಾಡುತ್ತೇವೆ. ಎನ್‌ಇಪಿ ರದ್ದು ಮಾಡುವ ಬಗ್ಗೆ ನಾವು ಪ್ರಣಾಳಿಕೆಯಲ್ಲಿಯೇ ಹೇಳಿದ್ದೇವೆ. ತಜ್ಞರ ಸಲಹೆ ಹಾಗೂ ಸೂಚನೆಗಳನ್ನು ಪಡೆಯುತ್ತೇವೆ. ಎರಡು ಕೋಟಿ ಪೋಷಕರಿಗೆ ನಮ್ಮ ಸರ್ಕಾರದಿಂದ ಒಳ್ಳೆಯ ಕೆಲಸ ಆಗುತ್ತಿದೆ. ಪಠ್ಯ ಪುಸ್ತಕ ಪರಿಷ್ಕರಣೆಯೂ ನಮಗೆ ಆರಂಭದಲ್ಲಿ ಇತ್ತು. ಮಕ್ಕಳ ಕೈಗೆ ಪಠ್ಯ ಹೋಗಿರುವುದರಿಂದ ಈ ವರ್ಷ ಸಂಪೂರ್ಣ ಬದಲಾವಣೆ ಮಾಡಲು ಆಗಿಲ್ಲ. ಕೇವಲ ಕೆಲವು ಅಧ್ಯಾಯಗಳನ್ನಷ್ಟೇ ಬದಲಾವಣೆ ಮಾಡಿದ್ದೇವೆ. ನನ್ನ ಮೊದಲ ಸಹಿಯೇ ಪಠ್ಯ ಪರಿಷ್ಕರಣೆ ಆಗಿತ್ತು. ಮುಂದಿನ ವರ್ಷ ಮತ್ತೆ ಪಠ್ಯ ಪರಿಷ್ಕರಣೆ ಮಾಡುತ್ತೇವೆ. ಈಗಾಗಲೇ ರಾಜ್ಯ ಪಠ್ಯಕ್ರಮ ತರಲು ಕೆಲಸ ಶುರುವಾಗಿದೆ. ಪದೇ ಪದೆ ಪಠ್ಯಕ್ರಮ ಬದಲಾವಣೆಯಾಗದಂತೆ ತಜ್ಞರ ಜತೆ ಚರ್ಚಿಸಿ ಕ್ರಮ ವಹಿಸಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಇದನ್ನೂ ಓದಿ: Moral policing : ಪೊಲೀಸ್ ಸಿಬ್ಬಂದಿ ಪತ್ನಿ ಮೇಲೆ ಮಾನಭಂಗ ಯತ್ನ, ನೈತಿಕ ಪೊಲೀಸ್ ಗಿರಿ?
ಅಲ್ಲಮ ಪ್ರಭು ಬೆಟ್ಟದೂರು, ಡಾ. ಮೈಕೆಲ್ ವಿಲಿಯಮ್ಸ್ ಸೇರಿದಂತೆ ಹಲವು ಹಿರಿಯ ಸಾಹಿತಿಗಳು ಭಾಗಿಯಾಗಿದ್ದರು.