ಹುಬ್ಬಳ್ಳಿ: ರಾಷ್ಟ್ರ ಧ್ವಜದ ವಿಚಾರದಲ್ಲಿ ರಾಜಕೀಯ ಬೇಡ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಆಗಸ್ಟ್ ೧೩ರಿಂದ ೧೫ರವರೆಗೆ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ ಹಾರಿಸಲು ಅನುಕೂಲವಾಗುವಂತೆ ಕೆಲವು ನಿಯಮಾವಳಿಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಕೇಂದ್ರ ಸರಕಾರ ಈ ಬಾರಿ ಬಟ್ಟೆಯ ಬಾವುಟಗಳನ್ನು ಹೊರತುಪಡಿಸಿ, ಆಮದು ಮಾಡಲಾದ ಪಾಲಿಸ್ಟರ್ ಧ್ವಜಗಳಿಗೂ ಅನುಮತಿ ನೀಡಿದ್ದನ್ನು ಕಾಂಗ್ರೆಸ್ ವಿರೋಧಿಸಿತ್ತು. ಸಾಮಾನ್ಯವಾಗಿ ಸರಕಾರ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದಿಂದ ಬಾವುಟಗಳನ್ನು ಖರೀದಿ ಮಾಡುತ್ತದೆ. ಈ ಬಾರಿ ವಿದೇಶದಿಂದ ತರಿಸಿಕೊಳ್ಳುತ್ತಿರುವುದರಿಂದ ಈ ಸಂಘಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಗಸ್ಟ್ ೧ರಂದು ಹುಬ್ಬಳ್ಳಿಗೆ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಲ್ಹಾದ್ ಜೋಶಿ ಅವರ ಹೇಳಿಕೆ ಮಹತ್ವ ಪಡೆದಿದೆ.
ʻʻನಮಗೆ ಹತ್ತು ಕೋಟಿ ಧ್ವಜ ಬೇಕು. ಅದನ್ನು ಪೂರೈಕೆ ಮಾಡಲು ಒಂದೇ ಕೇಂದ್ರಕ್ಕೆ ಆಗೋದಿಲ್ಲ. ಖಾದಿ ಧ್ವಜಕ್ಕೆ ಹೆಚ್ಚು ದುಡ್ಡು ಕೊಡಬೇಕು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತೆ, ಹೀಗಾಗಿ ಧ್ವಜ ಸಂಹಿತೆಗೆ ತಿದ್ದುಪಡಿ ತರಲಾಗಿದೆ. ಇದರಲ್ಲಿ ರಾಜಕೀಯ ಮಾಡೋ ಅವಶ್ಯಕತೆ ಇಲ್ಲʼʼ ಎಂದು ಹೇಳಿದ ಪ್ರಲ್ಹಾದ್ ಜೋಶಿ ಅವರು, ʻʻರಾಹುಲ್ ಗಾಂಧಿ ಹುಬ್ಬಳ್ಳಿಗೆ ಬರೋ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ರಾಹುಲ್ ಅವರಿಗೆ ಮಾಡೋಕೆ ಬೇರೆಯ ಒಳ್ಳೆ ಕೆಲಸಗಳಿವೆ, ಧ್ವಜ ವಿಚಾರ ಒಂದೇ ಇಲ್ಲʼʼ ಎಂದರು.
ʻʻಒಂದು ಧ್ವಜಕ್ಕೆ 400 ರೂಪಾಯಿ ಕೊಡಲು ಎಲ್ಲರಿಗೂ ಆಗಲ್ಲ, 20 ರೂಪಾಯಿಯಲ್ಲಿ ಜನರಿಗೆ ಧ್ವಜ ಸಿಗಬೇಕು. ಹಾಗಾಗಿ ಪಾಲಿಸ್ಟರ್ ಧ್ವಜಕ್ಕೆ ಅನುಮತಿ ನೀಡಲಾಗಿದೆʼʼ ಎಂದ ಅವರು, ಈ ಧ್ವಜಗಳು ನ್ಯಾಯಬೆಲೆ ಅಂಗಡಿ, ಮಾಲ್, ಮಹಾನಗರ ಪಾಲಿಕೆಗೆ ಸಂಬಂಧಪಟ್ಟ ಕಚೇರಿಗಳಲ್ಲಿ ರಾಷ್ಟ್ರಧ್ವಜಗಳು ದೊರೆಯಲಿವೆ ಎಂದರು.
ಹರ್ ಘರ್ ತಿರಂಗಾ ಕಾರ್ಯಕ್ರಮದಂತೆ ಆಗಸ್ಟ್ 13ರಿಂದ ಆಗಸ್ಟ್15 ರವರೆಗೆ ಧ್ವಜವನ್ನು ಎಲ್ಲರ ಮನೆಗಳ ಮೇಲೆ ಹಾರಿಸಬಹುದು ಎಂದು ಅವರು ಸ್ಪಷ್ಟಪಡಿಸಿದರು.