Site icon Vistara News

Ration Card : ಹೊಸ ರೇಷನ್ ಕಾರ್ಡ್ ಸದ್ಯಕ್ಕಿಲ್ಲ; ಗೃಹಲಕ್ಷ್ಮಿ, ಅನ್ನಭಾಗ್ಯದ ಕನಸು ನನಸು ದೂರ!

cm siddaramaiah infront of vidhana soudha No new Ration card in Karnataka

ಬೆಂಗಳೂರು: ಹೊಸ ರೇಷನ್‌ ಕಾರ್ಡ್‌ಗೆ (New Ration Card) ಅರ್ಜಿ ಕರೆಯುವ ತೀರ್ಮಾನವನ್ನು ರಾಜ್ಯ ಸರ್ಕಾರ (Congress Government) ತಾತ್ಕಾಲಿಕವಾಗಿ ಮುಂದೂಡಿದೆ. ಈ ಮೂಲಕ ಗೃಹಲಕ್ಷ್ಮಿ (Gruha lakshmi scheme), ಅನ್ನಭಾಗ್ಯ ಯೋಜನೆಯ (Anna Bhagya Scheme) ಫಲಾನುಭವಿಗಳಾಗಲು ಉತ್ಸುಕರಾಗಿದ್ದ ಅರ್ಹ ಫಲಾನುಭವಿಗಳ ಕನಸಿಗೆ ತಣ್ಣೀರೆರಚಿದಂತೆ ಆಗಿದೆ. ಶೀಘ್ರವೇ ಹೊಸ ಎಪಿಎಲ್‌ ಹಾಗೂ ಬಿಪಿಎಲ್‌ ಕಾರ್ಡ್‌ಗೆ (APL and BPL Card) ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್.‌ ಮುನಿಯಪ್ಪ (KH Muniyappa) ಹೇಳಿದ್ದರು. ಅಲ್ಲದೆ, ಯೆಲ್ಲೋ ಬೋರ್ಡ್‌ ಕಾರು (Yellow Board Car) ಹೊಂದಿರುವವರೂ ಬಿಪಿಎಲ್ ಪಡಿತರವನ್ನು ಪಡೆಯಬಹುದು ಎಂದು ಹೇಳಿದ್ದರು. ಈಗ ಸರ್ಕಾರ ಈ ನಿರ್ಧಾರದಿಂದ ಸ್ವಲ್ಪ ಹಿಂದೆ ಸರಿದಂತೆ ಕಾಣುತ್ತಿದೆ.

ರಾಜ್ಯದಲ್ಲಿ 14 ಲಕ್ಷ ಎಪಿಎಲ್ ಕಾರ್ಡ್‌ಗಳು ಇವೆ. ಇದರಲ್ಲಿ ಹಲವರು ಬಳಸುತ್ತಿಲ್ಲ. ಕೆಲವರು ಮೃತಪಟ್ಟ ಹಿನ್ನೆಲೆಯಲ್ಲಿ ಚಾಲ್ತಿಯಲ್ಲಿ ಇಲ್ಲ. ಆದರೆ, ಇವುಗಳ ರದ್ದು ಪ್ರಕ್ರಿಯೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಒಂದು ನಿಗದಿತ ಲೆಕ್ಕ ಸಿಗುತ್ತಿಲ್ಲ. ಕಾರ್ಡ್‌ಗಳ ಸಂಖ್ಯೆಗೂ ಪಡಿತರ ಪಡೆಯುತ್ತಿರುವವರ ಸಂಖ್ಯೆಗೂ ಬಹಳವೇ ವ್ಯತ್ಯಾಸ ಇದೆ. ಈ ಹಿನ್ನೆಲೆಯಲ್ಲಿ ಅವುಗಳನ್ನು ಮೊದಲು ಸರಿಪಡಿಸುವತ್ತ ಹೆಜ್ಜೆ ಇಡುತ್ತಿದೆಯೇ ಎಂಬ ಅನುಮಾನ ಮೂಡಿದೆ.

ಇದನ್ನೂ ಓದಿ: Gruha Lakshmi Scheme : ಸೆಪ್ಟೆಂಬರ್‌ನಲ್ಲಿ ಗೃಹಲಕ್ಷ್ಮಿಯರ ಖಾತೆಗೆ ಹಣ? 2500 ಕೋಟಿ ಉಳಿಸಲು ಪ್ಲ್ಯಾನ್!

ಇದಕ್ಕೆ ಆಹಾರ ಸಚಿವ ಕೆ.ಎಚ್.‌ ಮುನಿಯಪ್ಪ ಅವರ ಹೇಳಿಕೆಯೂ ಪುಷ್ಟಿ ನೀಡುತ್ತದೆ. ಹೊಸದಾಗಿ ಎಪಿಎಲ್ ಇಲ್ಲವೇ ಬಿಪಿಎಲ್ ಕಾರ್ಡ್​​ಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಸದ್ಯಕ್ಕೆ ಅನುಮತಿ ನೀಡಲಾಗುತ್ತಿಲ್ಲ. ಇದಕ್ಕೆ ಕಾರಣ ಇದ್ದು, ಈಗಲೇ ಹೇಳಲಾಗದು. ಆ ಬಗ್ಗೆ ಸದ್ಯದಲ್ಲಿಯೇ ಹೇಳುತ್ತೇನೆ ಎಂದು ಹೇಳಿದ್ದಾರೆ.

ಮೇಜರ್‌ ಸರ್ಜರಿ?

ರಾಜ್ಯ ಸರ್ಕಾರವು ಈಗ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿರುವುದರಿಂದ ಸಹಜವಾಗಿಯೇ ಆರ್ಥಿಕ ಹೊರೆಯನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಲ್ಲಿ ಉಳಿತಾಯ ಮಾಡಲು ಸಾಧ್ಯವೋ ಅಲ್ಲಲ್ಲಿ ಉಳಿತಾಯಕ್ಕೆ ಮುಂದಾಗುತ್ತಿದೆ. ಇನ್ನು ಬಿಪಿಎಲ್‌ ಕಾರ್ಡ್‌ದಾರರಿಗೆ ಅನ್ನಭಾಗ್ಯ ಯೋಜನೆಯಡಿ ತಿಂಗಳಿಗೆ 10 ಕೆ.ಜಿ. ಕೊಡುವುದಾಗಿ ಘೋಷಿಸಿದೆ. ಅಂದರೆ ರಾಜ್ಯದ ಲೆಕ್ಕ 5 ಕೆ.ಜಿ. ಆಗುತ್ತದೆ. ಎಲ್ಲರಿಗೂ ಈಗ ಐದು ಕೆ.ಜಿ. ಅಕ್ಕಿ ಬದಲು ಹಣ ಹಾಕಲಾಗುತ್ತಿದೆ. ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ಚಾಲನೆ ಸಿಕ್ಕ ಬಳಿಕ ಅಕ್ಕಿ ವಿತರಣೆಯನ್ನು ಮಾಡಲಾಗುತ್ತದೆ. ಆದರೆ, ಈ ವೇಳೆ ರೇಷನ್‌ ಕಾರ್ಡ್‌ ಸಂಖ್ಯೆಯನ್ನೇ ಕಡಿಮೆ ಮಾಡಿದರೆ ಎಂಬ ಆಲೋಚನೆ ಸರ್ಕಾರಕ್ಕೆ ಬಂದಿದೆಯೇ ಎಂಬ ಪ್ರಶ್ನೆ ಮೂಡಿದೆ. ಅಂದರೆ, ಅನರ್ಹರು ಸಹ ರೇಷನ್‌ ಕಾರ್ಡ್‌ ಪಡೆಯುತ್ತಿದ್ದಾರೆ ಎಂಬ ಅಂಶ ಹಾಗೂ ದೂರುಗಳು ಸರ್ಕಾರಕ್ಕೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಈಗಿರುವ ಅರ್ಹತೆ ಇಲ್ಲದವರ ಬಿಪಿಎಲ್‌ ಕಾರ್ಡ್‌ಗೆ ಕತ್ತರಿ ಹಾಕುತ್ತದೆಯೇ ಎಂಬ ಚರ್ಚೆ ಹುಟ್ಟಿಕೊಂಡಿದೆ.

ಇದನ್ನೂ ಓದಿ: Karnataka Politics : ಕಾಂಗ್ರೆಸ್‌ನಲ್ಲಿ ಸಿಡಿದ ಮತ್ತೊಂದು ಟೀಂ; ಬ್ಯಾಡ್ಮಿಂಟನ್ ಕ್ಲಬ್‌ನಲ್ಲಿ ರಹಸ್ಯ ಸಭೆ!

ಈ ಹಿಂದೆ ನೋಂದಣಿ ಸ್ಥಗಿತಗೊಂಡಿದ್ದು ಏಕೆ?

ಈ ಹಿಂದೆ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆಗೆ ತಡೆ ನೀಡಲಾಗಿತ್ತು. ಈ ಸಂಬಂಧ ಆಹಾರ ಇಲಾಖೆಯ ವೆಬ್‌ಸೈಟ್‌ನಲ್ಲಿ ಇದ್ದ ಪಡಿತರ ಚೀಟಿ ಪಡೆಯುವ ಪೋರ್ಟಲ್ ಅನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಸದ್ಯಕ್ಕೆ ಅರ್ಜಿ ಕರೆಯಲಾಗುವುದಿಲ್ಲ ಎಂದು ಈಗ ಸ್ವತಃ ಆಹಾರ ಸಚಿವರೇ ಹೇಳಿದ್ದಾರೆ. ಈ ನಿರ್ಧಾರದ ಹಿಂದಿನ ಕಾರಣವನ್ನು ಶೀಘ್ರದಲ್ಲಿಯೇ ಹೇಳಲಾಗುತ್ತದೆ ಎಂದೂ ಹೇಳಿದ್ದಾರೆ.

Exit mobile version