Site icon Vistara News

Residential Schools: ಜ್ಞಾನ ದೇಗುಲ ವಿವಾದ; ಘೋಷವಾಕ್ಯ ಬದಲಿಸಲು ಆದೇಶವನ್ನೇ ಹೊರಡಿಸಿಲ್ಲ; ಸಚಿವ ಮಹದೇವಪ್ಪ

Minister DR HC Mahadevappa

ಬೆಂಗಳೂರು: ರಾಜ್ಯದ ಎಲ್ಲ ವಸತಿ ಶಾಲೆಗಳ (Residential Schools) ಪ್ರವೇಶ ದ್ವಾರದಲ್ಲಿ ಇದ್ದ ಘೋಷ ವಾಕ್ಯವನ್ನು ಬದಲಾಯಿಸಿರುವ ಸಂಬಂಧ ಸಮಾಜ ಕಲ್ಯಾಣ ಇಲಾಖೆ (Department of Social Welfare) ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಸ್ಪಷ್ಟೀಕರಣ ನೀಡಿದ್ದು, ಪ್ರಸ್ತುತ ಇರುವ ಘೋಷವಾಕ್ಯವನ್ನು ತೆಗೆದುಹಾಕುವ ಆದೇಶವಾಗಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಡಾ. ಎಚ್.ಸಿ. ಮಹದೇವಪ್ಪ, ವಸತಿ ಶಾಲೆಗಳ ಘೋಷವಾಕ್ಯ ಬದಲಾವಣೆ ವಿಚಾರದಲ್ಲಿ ಯಾವುದೇ ಆದೇಶವನ್ನು ಹೊರಡಿಸಲಾಗಿಲ್ಲ. ಮಕ್ಕಳಲ್ಲಿ ಕಲಿಕೆಯ ದೃಷ್ಟಿಯಿಂದ ವೈಜ್ಞಾನಿಕತೆ, ವೈಚಾರಿಕತೆ ಮೂಡಿಸುವುದರ ಜತೆಗೆ ಯೋಚನಾ ಶಕ್ತಿಯನ್ನು ಹರಡುವ ದೃಷ್ಟಿಯಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಸಲಾಗಿದೆ. ಕೆಲವರು ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂದು ಶಾಲೆಗಳಲ್ಲಿ ಹಾಕಿದರೆ ಹೇಗೆ ಎಂಬ ಆಲೋಚನೆಯನ್ನು ಮುಂದಿಟ್ಟಿದ್ದಾರೆ. ಈ ಆಲೋಚನೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುತ್ತದೆ ಎಂದು ಹೇಳಿದ್ದಾರೆ.

ಡಾ. ಎಚ್‌.ಸಿ. ಮಹದೇವಪ್ಪ ಅವರ ಸ್ಪಷ್ಟನೆ ಏನು?

ಜ್ಞಾನ ದೇಗುಲವಿದು ಎಂಬ ಘೋಷವಾಕ್ಯಕ್ಕೆ ಸಂಬಂಧಿಸಿದಂತೆ ಬೆಳಗಿನಿಂದ ಮಾಧ್ಯಮಗಳಲ್ಲಿ ಸುದ್ದಿಯು ಬಿತ್ತರವಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಸರ್ಕಾರದ ವತಿಯಿಂದ ಈಗ ಪ್ರಸ್ತುತ ಇರುವ ಘೋಷವಾಕ್ಯವನ್ನು ತೆಗೆದುಹಾಕುವ ಯಾವುದೇ ಆದೇಶವನ್ನು ಹೊರಡಿಸಲಾಗಿಲ್ಲ. ಆದರೆ, ಸೃಜನಾತ್ಮಕ ಕಲಿಕೆಯ ದೃಷ್ಟಿಯಿಂದ, ಮಕ್ಕಳಲ್ಲಿ ವೈಜ್ಞಾನಿಕತೆ ಹಾಗೂ ವೈಚಾರಿಕತೆಯನ್ನು ಮೂಡಿಸಿ ಅವರಲ್ಲಿ ಯೋಚನಾ ಶಕ್ತಿಯನ್ನು ಹರಡುವ ದೃಷ್ಟಿಯಿಂದ ಸಾಮಾಜಿಕ ಜಾಲತಾಣದ ಗುಂಪಿನಲ್ಲಿ ಚರ್ಚೆಯನ್ನು ನಡೆಸಿದ್ದು, ಜ್ಞಾನ ದೇಗುಲವಿದು – ಧೈರ್ಯವಾಗಿ ಪ್ರಶ್ನಿಸಿ ಎಂದು ಶಾಲೆಗಳಲ್ಲಿ ಹಾಕಿದರೆ ಹೇಗೆ? ಎಂಬ ಆಲೋಚನೆಯನ್ನು ಕೆಲವರು ಮುಂದಿಟ್ಟಾಗ, ಅದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುತ್ತದೆ.

ಉತ್ತಮ ಆಲೋಚನೆಯನ್ನು ಹೊಂದಿದ ಈ ಸಾಲನ್ನು ಕೆಲವರು ಶಾಲೆಗಳಲ್ಲೂ ಬಳಸಿರುತ್ತಾರೆ. ಅಂದಹಾಗೆ ಜ್ಞಾನ ದೇಗುಲವಿದು – ಧೈರ್ಯವಾಗಿ ಪ್ರಶ್ನಿಸಿ ಎಂದರೆ ಅದು ಕುವೆಂಪು ಅವರು ಹೇಳುವ ವಿಚಾರ ಕ್ರಾಂತಿಗೆ ಆಹ್ವಾನ ಪ್ರಬಂಧದ ಆಶಯವೇ ಆಗಿದ್ದು ಕುವೆಂಪು ಅವರಿಗೆ ಅವಮಾನ ಎಸಗುವ ಯಾವುದೇ ಪ್ರಮಾದವು ಇಲ್ಲಿ ಜರುಗಿರುವುದಿಲ್ಲ.

ಇದನ್ನೂ ಓದಿ: Chetan Ahimsa : ಶಾಲೆಗಳಲ್ಲಿ ಪೂಜೆ ಬೇಕಿಲ್ಲ; ಜ್ಞಾನ ದೇಗುಲ ವಿವಾದದ ಬೆನ್ನಲ್ಲೇ ಕುಟುಕಿದ ಚೇತನ್‌ ಅಹಿಂಸಾ

ಇದೊಂದು ವಿವಾದದ ಅಂಶವೇ ಅಲ್ಲ

ಶಿಕ್ಷಣದ ಉದ್ದೇಶವೇ ಮಕ್ಕಳಲ್ಲಿ ವೈಚಾರಿಕತೆಯ ಜೊತೆಗೆ, ಪ್ರಶ್ನಿಸುವ ಸಾಮರ್ಥ್ಯವನ್ನು ಬೆಳೆಸುವುದಾಗಿದೆ. ಐಸಾಕ್ ನ್ಯೂಟನ್, ಆಲ್ಬರ್ಟ್ ಐನ್ ಸ್ಟೀನ್ ನಿಂದ ಹಿಡಿದು ಬಹಳಷ್ಟು ವಿಜ್ಞಾನಿಗಳು ಇದನ್ನೇ ಪ್ರತಿಪಾದಿಸಿದ್ದು ಕಲಿಯುವ ಮಕ್ಕಳಲ್ಲಿ ಪ್ರಶ್ನಿಸುವ ಸಾಮರ್ಥವನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಆಲೋಚನೆಗಳನ್ನು ನಾವು ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು. ನನ್ನ ಪ್ರಕಾರ ಇದೊಂದು ವಿವಾದದ ಅಂಶವೇ ಅಲ್ಲ” ಎಂದು ಡಾ. ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.

Exit mobile version