ಬೆಂಗಳೂರು: ಇಂದಿರಾ ಗಾಂಧಿ (Indira Gandhi) ಅವರಂಥಾ ಜನಪರ-ಜನಪ್ರಿಯ ಪ್ರಧಾನಮಂತ್ರಿ ಮತ್ತೆ ಯಾರೂ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಭಿಪ್ರಾಯಪಟ್ಟರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 39ನೇ ಪುಣ್ಯ ಸ್ಮರಣೆ (Indira Gandhi death anniversary) ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧಿರಾ ಗಾಂಧಿ ಅತ್ಯಂತ ಧೈರ್ಯವಂತ ಮಹಿಳೆ. ದೇಶದ ಬಡವರ ಆರಾಧ್ಯ ದೈವ ಆಗಿದ್ದರು ಎಂದು ಹೇಳಿದರು.
ಇದನ್ನೂ ಓದಿ: Vande Bharat Express : ಬೆಳಗಾವಿಗೂ ವಂದೇ ಭಾರತ್ ವಿಸ್ತರಿಸಿ; ರೈಲ್ವೆ ಸಚಿವರಿಗೆ ಸಿಎಂ ಪತ್ರ
ಮಹಾತ್ಮಗಾಂಧಿ ಹತ್ಯೆ, ಇಂದಿರಾಗಾಂಧಿ ಹತ್ಯೆ, ರಾಜೀವ್ ಗಾಂಧಿ ಹತ್ಯೆ ದೇಶಕ್ಕೆ ಆದ ದೊಡ್ಡ ನಷ್ಟ. ಈ ಮೂವರು ದೇಶಕ್ಕಾಗಿ ಹುತಾತ್ಮರಾದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು. ಇವರು ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನ ನಮ್ಮ ದೇಶದ ಮಣ್ಣಿನಲ್ಲಿ ದಾಖಲಾಗಿದೆ ಎಂದರು.
ಬಿಜೆಪಿಯವರಿಗೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಚರಿತ್ರೆ ಇಲ್ಲ. ಕೇವಲ ಖಾಲಿ ದೇಶಭಕ್ತಿ ಬಗ್ಗೆ ಭಾಷಣ ಮಾಡುತ್ತಾರೆ. ಖಾಲಿ ಭಾಷಣಗಳಿಂದ ದೇಶಕ್ಕೆ, ದೇಶದ ಜನರಿಗೆ ಏನೂ ಸಿಗುವುದಿಲ್ಲ ಎಂದು ಟೀಕಿಸಿದರು.
ಇಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಇವರ ಕೊಡುಗೆ ಅಪಾರ ಎಂದು ಅವರ ಹೋರಾಟದ ಘಟನೆಗಳನ್ನು ಸ್ಮರಿಸಿದರು.
ಎಲ್ಲರೂ ಸೇರಿ ದುಡಿಯೋಣ: ಡಿ.ಕೆ. ಶಿವಕುಮಾರ್
ನನಗೆ ಅಧಿಕಾರ ಸಿಗುತ್ತದೆಯೋ ಇಲ್ಲವೋ? ಅದರ ಬಗ್ಗೆ ನೀವು (ಕಾರ್ಯಕರ್ತರು) ತಲೆಕೆಡಿಸಿಕೊಳ್ಳುವುದು ಬೇಡ. ನಾವೆಲ್ಲ ಒಟ್ಟಿಗೆ ಸೇರಿ ಕೆಲಸ ಮಾಡೋಣ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿ.ಕೆ. ಶಿಮಕುಮಾರ್ ಕರೆ ನೀಡಿದರು. ಈ ಮೂಲಕ ತಮಗೆ ಹುದ್ದೆ ಮುಖ್ಯವಲ್ಲ, ಪಕ್ಷ ಮುಖ್ಯ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಆಗಮಿಸಿ ವೇದಿಕೆ ಮೇಲೆ ಕುಳಿತವರು ಮಾತ್ರ ಗಣ್ಯರಲ್ಲ. ವೇದಿಕೆ ಮುಂದೆ ಕುಳಿತಿರುವವರೂ ಗಣ್ಯರೇ ಆಗಿದ್ದಾರೆ. ನಮ್ಮ ಎಲ್ಲ ಕಾರ್ಯಕರ್ತರು ಗಣ್ಯರೇ. ದೇಶ ಕಂಡ ಎರಡು ಮಹಾನ್ ಗಣ್ಯರ ದಿನ ಇಂದು ಎಂಬುದು ಖುಷಿಯ ವಿಚಾರ ಎಂದು ಹೇಳಿದರು.
ಇದನ್ನೂ ಓದಿ: Leopard Spotted : ಚಿರತೆ ಸೆರೆಯಾಗಲಿದೆ; ಯಾರಿಗೂ ಆತಂಕ ಬೇಡ, ಜಾಗ್ರತೆ ಇರಲಿ: ಈಶ್ವರ ಖಂಡ್ರೆ
ಇಂದು ಸುಲಭವಾಗಿ ಸಾಲ ಸಿಗಲು ಇಂದಿರಾ ಗಾಂಧಿ ಕಾರಣ
ಅಂದು ನಾನು ದೆಹಲಿಗೆ ಯೂತ್ ಕಾಂಗ್ರೆಸ್ ಕಾರ್ಯಕ್ರಮಕ್ಕಾಗಿ ರೈಲಿನಲ್ಲಿ ಹೋಗುತ್ತಾ ಇದ್ದೆ. ರೈಲು ಅರ್ಧಕ್ಕೆ ನಿಂತು ಕೊಂಡಿತು. ಯಾಕೆ ಅಂದಿದ್ದಕ್ಕೆ ಇಂದಿರಾ ಗಾಂಧಿ ಅವರ ಕಗ್ಗೊಲೆ ಆಗಿದೆ ಅನ್ನೋ ಸುದ್ದಿ ಬಂತು. ಹೊರಗೆ ದೇಶ ಹೊತ್ತಿ ಉರಿಯುತ್ತಿತ್ತು ನನ್ನನ್ನು ಬಂಧಿಸಿ ಮಲ್ಲೇಶ್ವರಂ ಠಾಣೆಯಲ್ಲಿ ಇಟ್ಟಿದ್ದರು. ನಾನು ಕಾರು, ಬೈಕು, ತಗೋಬೇಕಿತ್ತು. ಬ್ಯಾಂಕ್‌ನವರು ಸಾಲ ಕೊಡುತ್ತಾ ಇರಲಿಲ್ಲ. ಸೇಟು ಹತ್ತಿರ ಬಡ್ಡಿಗೆ ದುಡ್ಡು ತಗೊಂಡು ವಾಹನ ಖರೀದಿ ಮಾಡಬೇಕಿತ್ತು. ಜನಾರ್ದನ್ ಪೂಜಾರಿ ಅವರು ಅಂದು ಸಾಲ ಮೇಳ ಶುರು ಮಾಡಿದರು. ಅಂದಿಗೆ ಆ ಯೋಜನೆ ಸಾಕಷ್ಟು ಜನಪ್ರಿಯ ಆಗಿತ್ತು. ನಾನು ಸಾಲ ಮೇಳದ ಹೆಸರು ಹೇಳಿಕೊಂಡೆ ಚುನಾವಣೆ ಗೆದ್ದು ಬಂದೆ. ಬ್ಯಾಂಕ್‌ಗಳ ರಾಷ್ಟ್ರೀಕರಣ ಆಗಿದ್ದೇ ಇಂದಿರಾ ಗಾಂಧಿ ಅವರಿಂದ ಎಂಬುದಾಗಿದೆ. ಇಂದು ಎಲ್ಲರ ಕೈಯಲ್ಲಿ ಮೊಬೈಲ್ ಇದೆ. ಸಾಲ ಬೇಕಾ ಅಂತ ಕರೆ ಮಾಡ್ತಾರೆ. ಇದಕ್ಕೆಲ್ಲ ಕಾರಣ ಇಂದಿರಾ ಗಾಂಧಿ ಅವರೇ ಆಗಿದ್ದಾರೆ ಎಂದು ಹೇಳಿದರು.