ರಮೇಶ ದೊಡ್ಡಪುರ, ಬೆಂಗಳೂರು
ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಜನರ ಮನಸ್ಸನ್ನು ಕೆರಳಿಸುವ ಹೇಳಿಕೆ ನೀಡಿ ಲೈಮ್‌ಲೈಟ್‌ಗೆ ಬರುವ ಪ್ರಯತ್ನವನ್ನು ಅಲ್ಲಲ್ಲಿ ಅನೇಕರು ಮಾಡುತ್ತಿದ್ದಾರೆ. ಆದರೆ ಅವರದೇ ಪಕ್ಷದಲ್ಲಿ ಇಂತಹ ವಿಪರೀತ, ಪ್ರಚೋದನಕಾರಿ ಹೇಳಿಕೆಗಳಿಗೆ ಬೆಂಬಲ ಸಿಗುತ್ತಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.
ಮೈಸೂರಿನ ಗುಂಬಜ್ ವಿವಾದ
ಈ ಹಿಂದೆ ಮೈಸೂರಿನಲ್ಲಿ ಟಿಪ್ಪು ನಿಜ ಕನಸುಗಳು ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ್ದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಗುಂಬಜ್ ಆಕಾರದ ಬಸ್ ನಿಲ್ದಾಣಗಳನ್ನು ತಾವೇ ಕೆಡವುವುದಾಗಿ ಹೇಳಿಕೆ ನೀಡಿದ್ದರು.
ಇದರ ನಂತರ ಬಿಜೆಪಿ ವಿರುದ್ಧ ಕಾಂಗ್ರೆಸ್ ವಿಪರೀತ ದಾಳಿ ನಡೆಸಿತು. ಈ ವಿಚಾರವು ಬಿಜೆಪಿಯ ಆಂತರಿಕ ವಿಚಾರ ಎನ್ನುವುದೂ ನಂತರ ಬಯಲಾಯಿತು. ಸ್ಥಳೀಯ ಬಿಜೆಪಿ ಶಾಸಕ ಎಸ್. ರಾಮದಾಸ್ ಹಾಗೂ ಸಂಸದರ ನಡುವಿನ ಭಿನ್ನಾಭಿಪ್ರಾಯವೇ ಈ ವಿಚಾರಕ್ಕೆ ಇಂಬು ನೀಡಿದ್ದು ಎನ್ನುವುದು ಪಕ್ಷದ ಒಳಗೂ ಚರ್ಚೆಯಾಗಿ ಎಲ್ಲರೂ ಮೌನ ವಹಿಸಿದರು. ಯಾವುದೇ ಬಿಜೆಪಿ ನಾಯಕರು ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳಲು ಮುಂದಾಗಲಿಲ್ಲ. ಕೊನೆಗೆ ರಾಮದಾಸ್ ಅವರೇ ಎರಡು ಗುಂಬಜ್ ತೆರವುಗೊಳಿಸಿ ನಡುವಿನ ಒಂದು ಗುಂಬಜ್ ಉಳಿಸಿಕೊಂಡು ಪ್ರಕರಣಕ್ಕೆ ಅಂತ್ಯ ಕಾಣಿಸಿದರು. ರಾಮದಾಸ್ ಅವರು ಜನರ ಆಶೋತ್ತರಗಳಿಗೆ ತಲೆಬಾಗಿ ಎರಡು ಗುಂಬಜ್ ಒಡೆದು ಹಾಕಿದ್ದಕ್ಕೆ ಧನ್ಯವಾದ ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದರು.
ಹಿಂದು ಮೂಲದ ವಿವಾದ
ನಿಪ್ಪಾಣಿಯಲ್ಲಿ ನವೆಂಬರ್ 7ರಂದು ಆಯೋಜಿಸಿದ್ದ ಬುದ್ಧ ಮತ್ತು ಅಂಬೇಡ್ಕರ್ ಸಮಾವೇಶದಲ್ಲಿ ಮಾತನಾಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಹಿಂದು ಪದ ಮೂಲತಃ ಭಾರತದ್ದಲ್ಲ. ಅದು ಪರ್ಷಿಯನ್ ಮೂಲ ಹೊಂದಿದೆ. ಅದಕ್ಕೆ ಕೆಟ್ಟ ಅರ್ಧವಿದೆ ಎಂದು ತಿಳಿಸಿದ್ದರು.
ಇದರ ನಂತರ ರಾಜ್ಯಾದ್ಯಂತ ವಿವಾದ ಭುಗಿಲೆದ್ದಿತ್ತು. ಬಿಜೆಪಿ ನಾಯಕರು ಈ ಹೇಳಿಕೆ ವಿರುದ್ಧ ಹರಿಹಾಯ್ದಿದ್ದರು. ಆದರೆ ಚುನಾವಣೆ ಹತ್ತಿರವಾಗುತ್ತಿರುವಾಗ ಈ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡರೆ ಕಷ್ಟವಾಗಬಹುದು ಎಂದು ಅಂದಾಜಿಸಿದ ಕಾಂಗ್ರೆಸ್ ನಾಯಕರಾರೂ ಸಮರ್ಥನೆ ಮಾಡಿಕೊಳ್ಳಲಿಲ್ಲ. ಅನೇಕ ನಾಯಕರಂತೂ ಇದಕ್ಕೂ ಪಕ್ಷಕ್ಕೂ ಸಂಬಂಧವೇ ಇಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇದನ್ನು ಖಂಡಿಸಿದರು. ಕೊನೆಗೆ, ಈ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿಕೆಯೊಂದಿಗೆ ವಿವಾದ ಅಂತ್ಯ ಕಂಡಿತು.
ತಾವೇ ಸಿಲುಕಿಕೊಂಡ ಡಿ.ಕೆ. ಶಿವಕುಮಾರ್
ಈ ಹಿಂದೆ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದಾಗ ಇಂಥದ್ದನ್ನೆಲ್ಲ ಸಹಿಸಲು ಆಗುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಈಗ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಸಾಂಪ್ರದಾಯಿಕ ಮುಸ್ಲಿಂ ಮತಗಳು ಕಾಂಗ್ರೆಸ್ ಜತೆಗೇ ಇರಬೇಕು ಎಂಬುದು ಡಿ.ಕೆ. ಶಿವಕುಮಾರ್ ಉದ್ದೇಶ. ಇತ್ತೀಚೆಗೆ ಮುಸ್ಲಿಂ ಮುಖಂಡರ ಸಭೆಯನ್ನು ಸಲೀಂ ಅಹ್ಮದ್ ನೇತೃತ್ವದಲ್ಲಿ ನಡೆಸಲಾಗಿದೆ. ಆದರೆ ಈಗಾಗಲೆ ಚುನಾವಣಾ ಕಣದಲ್ಲಿ ಧುಮುಕಿರುವ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ, ಅಧಿಕಾರಕ್ಕೆ ಬಂದರೆ ಮುಸ್ಲಿಂ ಮುಖ್ಯಮಂತ್ರಿ ಮಾಡುವುದಾಗಿ ಘೋಷಿಸಿದ್ದಾರೆ. ಅವರು ಮುಸ್ಲಿಮರನ್ನು ಮುಖ್ಯಮಂತ್ರಿ ಮಾಡುತ್ತಾರೆಯೋ ಇಲ್ಲವೊ, ಅವರು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಾರೆಯೋ ಇಲ್ಲವೋ ಎನ್ನುವುದು ಎರಡನೇ ಪ್ರಶ್ನೆ. ಆದರೆ ಮುಸ್ಲಿಮರು ಒಮ್ಮೆ ಜೆಡಿಎಸ್ ಕಡೆಗೆ ತಿರುಗಿ ನೋಡಿದ್ದಾರೆ ಎನ್ನುವುದಂತೂ ಸತ್ಯ.
ಇನ್ನು ಗುಜರಾತ್ ಚುನಾವಣೆಯನ್ನು ಗಣನೆಗೆ ತೆಗೆದುಕೊಂಡರೆ, ಬಿಲ್ಕಿಸ್ ಬಾನೊ ಪ್ರಕರಣದ ಹಚ್ಚಹಸಿರಾಗಿರುವಂತೆಯೇ 12 ಮುಸ್ಲಿಂ ಪ್ರಧಾನ ಕ್ಷೇತ್ರಗಳಲ್ಲಿ 10ನ್ನು ಬಿಜೆಪಿ ಗೆದ್ದುಕೊಂಡಿದೆ. ಇದಕ್ಕೆ ಮುಖ್ಯವಾಗಿ ಆಮ್ ಆದ್ಮಿ ಪಕ್ಷವು ತನ್ನ ಸಾಂಪ್ರದಾಯಿಕ ಮತಗಳನ್ನು ಕಸಿದುಕೊಂಡಿದ್ದು ಎನ್ನುವುದು ಸ್ಪಷ್ಟ. ಅದೇ ಆಮ್ ಆದ್ಮಿ ಪಕ್ಷ ಕರ್ನಾಟಕದ ವಿವಿಧೆಡೆಯೂ ಸಕ್ರಿಯವಾಗಿದೆ. ಚುನಾವಣೆ ಹತ್ತಿರವಾದಂತೆಲ್ಲ ಅಸಾದುದ್ದೀನ್ ಓವೈಸಿಯ ಎಐಎಂಐಎಂ ಪಕ್ಷವೂ ಕಣಕ್ಕಿಳಿಯುತ್ತದೆ. ಪಿಎಫ್‌ಐ ಬ್ಯಾನ್ ಆಗಿದ್ದರೂ ಎಸ್‌ಡಿಪಿಐ ಮಾತ್ರ ಇನ್ನೂ ಕಣದಲ್ಲಿಯೇ ಇದೆ. ಇದೆಲ್ಲ ಪಕ್ಷಗಳೂ ಸೇರಿ ಮುಸ್ಲಿಂ ಮತಗಳನ್ನು ವಿಭಜಿಸಿದರೆ ತನ್ನದು ಅಧೋಗತಿ ಎಂದು ತಿಳಿದಿರುವ ಡಿ.ಕೆ. ಶಿವಕುಮಾರ್, ಮುಸ್ಲಿಂ ಮತ ಸೆಳೆಯಲು ಈ ಹೇಳಿಕೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಆದರೆ ಒಂದು ಕಡೆ ಮುಸ್ಲಿಂ ಮತ ಪಡೆಯುವ ತಂತ್ರದಲ್ಲಿ ಬೃಹತ್ ಪ್ರಮಾಣದ ಮತಗಳನ್ನು ಕಳೆದುಕೊಳ್ಳುವ ಅಪಾಯವನ್ನು ಕಾಂಗ್ರೆಸ್‌ನ ಇನ್ನಿತರೆ ನಾಯಕರು ಗ್ರಹಿಸಿದ್ದಾರೆ. ಅದಕ್ಕಾಗಿಯೇ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯಿಂದ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್‌ನಲ್ಲಿರುವ ಬಣ ರಾಜಕೀಯವೂ ಮತ್ತೊಂದು ಕಾರಣ.
ಸಾಮಾನ್ಯವಾಗಿ ಇಂತಹ ವಿಚಾರಗಳಲ್ಲಿ ಪ್ರತಿಕ್ರಿಯಿಸಿರುವ ದಿನೇಶ್ ಗುಂಡೂರಾವ್ ಮಾಧ್ಯಮಗಳನ್ನು ನೋಡಿಯೂ ನೋಡದಂತೆ ಅತ್ತಕಡೆ ತಿರುಗಿ ಹೋಗಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿರುವ ಮಾಜಿ ಸಚಿವ ಯು.ಟಿ. ಖಾದರ್, ಶಾರೀಕ್ ವಿಷಯ ಕುರಿತು ಡಿ.ಕೆ. ಶಿವಕುಮಾರ್ ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಭಯೋತ್ಪಾದಕ ಘಟನೆ ಎಲ್ಲಿಯೂ ನಡೆಯಬಾರದು. ಯಾವ ಕಾರಣಕ್ಕೆ ಹೇಳಿದ್ದಾರೆ ನಾನು ಅವರೊಂದಿಗೆ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.
ಎಲ್ಲರೂ ಅಂತರ ಕಾಯ್ದುಕೊಂಡಿರುವ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, ನನ್ನ ಪರವಾಗಿ ಯಾರೂ ಬ್ಯಾಟಿಂಗ್ ಮಾಡುವ ಅವಶ್ಯಕತೆ ಇಲ್ಲ. ಯಾರ ಸಮರ್ಥನೆಯೂ ಬೇಕಾಗಿಲ್ಲ, ನನ್ನ ಹೇಳಿಕೆಗೆ ನಾನು ಬದ್ಧ. ಮಂಗಳೂರು ಪೊಲೀಸ್ ಕಮಿಷನರ್ ಇನ್ನೂ ವಿಚಾರಣೆ ಮಾಡಿಲ್ಲ. ಆರೋಪಿ ಇನ್ನೂ ಮಾತನಾಡುವ ಸ್ಥಿತಿಯಲ್ಲಿ ಇಲ್ಲ ಎಂದಿದ್ದಾರೆ. ವೋಟ್ ಐಡಿ ಹಗರಣ ಮುಚ್ಚಿಹಾಕಲು ಕುಕ್ಕರ್ ಬ್ಲಾಸ್ಟ್ ತಂದಿದ್ದಾರೆ. ನನಗೆ ಯಾರ ಸಮರ್ಥನೆ ಬೇಕಾಗಿಲ್ಲ ಎಂದಿದ್ದಾರೆ.
ಚುನಾವಣೆಗೆ ತೆರಳುವುದು, ಇದ್ದ ಮತಗಳನ್ನು ಉಳಿಸಿಕೊಂಡು ಒಂದಷ್ಟು ಹೊಸ ಮತಗಳನ್ನು ಸೆಳೆಯುವುದು ಈಗ ಬಹುತೇಕ ಆಕಾಂಕ್ಷಿಗಳಿಗಿರುವ ಚಿಂತೆ. ಈ ಸಂದರ್ಭದಲ್ಲಿ, ಪಕ್ಷದಲ್ಲಿ ಯಾವುದೇ ಚರ್ಚೆಯಾಗದೇ, ನಿರ್ಧಾರ ಆಗದೆ ನಾಯಕರುಗಳು ಏಕಾಏಕಿ ನೀಡುವ ಹೇಳಿಕೆಗಳಿಗೆ ಬೆಂಬಲ ನೀಡುವ ಸ್ಥಿತಿಯಲ್ಲಿ ಯಾರೂ ಇಲ್ಲ ಎಂಬ ಸಂದೇಶವನ್ನು ಎರಡೂ ರಾಷ್ಟ್ರೀಯ ಪಕ್ಷಗಳು ನೀಡಿವೆ. ಇನ್ನು ಮೂರನೇ ಪಕ್ಷ ಜೆಡಿಎಸ್‌ನಲ್ಲಿ ಇಂತಹ ಸಮಸ್ಯೆಗಳೇ ಇಲ್ಲ.
ಇದನ್ನೂ ಓದಿ | ಅರ್ಜಿ ಹಾಕದೇ ಇರುವಲ್ಲೂ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುತ್ತೇವೆ: ಮಾಧ್ಯಮ ಸಂವಾದದಲ್ಲಿ ಡಿ.ಕೆ. ಶಿವಕುಮಾರ್ ಮಾತು