Site icon Vistara News

22 ಪೊಲೀಸರ ಕೊಂದ ವೀರಪ್ಪನ್‌ ಆಪ್ತನ ಶಿಕ್ಷೆ‌ ಪ್ರಮಾಣ ಇಳಿಕೆ ಇಲ್ಲ; ಸುಪ್ರೀಂಗೆ ಕೇಂದ್ರ ಸ್ಪಷ್ಟನೆ

Gnanaprakash

No remission for Veerappan aide convicted for killing 22 cops: Centre tells SC

ನವದೆಹಲಿ: ಕಾಡುಗಳ್ಳ ವೀರಪ್ಪನ್‌ (Veerappan) ಬಲಗೈ ಬಂಟ, 22 ಪೊಲೀಸರನ್ನು ಹತ್ಯೆಗೈದ ಪ್ರಕರಣದ ದೋಷಿ ಜ್ಞಾನಪ್ರಕಾಶ್‌ಗೆ (Gnanaprakash) ವಿಧಿಸಿರುವ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲು ಅನುಮತಿ ಇಲ್ಲ ಎಂದು ಕೇಂದ್ರ ಸರ್ಕಾರವು (Central Government) ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ. ಈ ಕುರಿತು ಕೇಂದ್ರ ಸರ್ಕಾರವು 2023ರ ಸೆಪ್ಟೆಂಬರ್‌ನಲ್ಲಿಯೇ ತೀರ್ಮಾನ ತೆಗೆದುಕೊಂಡಿದ್ದು, ಈಗ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

1993ರಲ್ಲಿ ಕರ್ನಾಟಕದಲ್ಲಿ ನೆಲಬಾಂಬ್‌ ಸ್ಫೋಟಿಸಿ 22 ಪೊಲೀಸರನ್ನು ಹತ್ಯೆಗೈದ ಪ್ರಕರಣದಲ್ಲಿ ಜ್ಞಾನಪ್ರಕಾಶ್‌ಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಪ್ರಕರಣದಲ್ಲಿ ಜ್ಞಾನಪ್ರಕಾಶ್‌ 30 ವರ್ಷ ಸೆರೆವಾಸ ಅನುಭವಿಸಿದ್ದಾನೆ. ಹಾಗಾಗಿ, ಜ್ಞಾನಪ್ರಕಾಶ್‌ಗೆ ವಿಧಿಸಿರುವ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಬೇಕು ಹಾಗೂ ಆತನನ್ನು ಬಿಡುಗಡೆ ಮಾಡಬೇಕು ಎಂಬುದಾಗಿ ಜ್ಞಾನಪ್ರಕಾಶ್‌ ಪತ್ನಿ ಸೆಲ್ವಾ ಮೇರಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ, ಜೀವಾವಧಿ ಶಿಕ್ಷೆಗೆ ಇಳಿಸಲು ಅನುಮತಿ ಇಲ್ಲ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

Veerappan

ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿರುವ ಜ್ಞಾನಪ್ರಕಾಶ್‌ಗೆ ಕಳೆದ ವರ್ಷದ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ. ಈಗ ಜಾಮೀನನ್ನು ಮತ್ತೆ ಮೂರು ತಿಂಗಳು ವಿಸ್ತರಿಸಿದೆ. ಹಾಗೆಯೇ, ಜೀವಾವಧಿ ಶಿಕ್ಷೆಗೆ ಇಳಿಸಲು ಕೇಂದ್ರ ಸರ್ಕಾರ ನಕಾರ ವ್ಯಕ್ತಪಡಿಸಿರುವುದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು ಎಂದು ಕೂಡ ಸರ್ವೋಚ್ಚ ನ್ಯಾಯಾಲಯವು ಸೆಲ್ವಾ ಮೇರಿ ಅವರಿಗೆ ತಿಳಿಸಿದೆ.

ಇದನ್ನೂ ಓದಿ: Mahisha Dasara : ಮಹಿಷ ದಸರಾ ಮಾಡಲು ಬಿಟ್ರೆ ವೀರಪ್ಪನ್‌ನನ್ನೂ ದೇವರು ಮಾಡ್ತಾರೆ ಎಂದ ಪ್ರತಾಪ್‌

ಕಾಡುಗಳ್ಳ ವೀರಪ್ಪನ್‌ ಆಪ್ತರಲ್ಲಿ ಜೀವಂತವಾಗಿರುವ ಏಕೈಕ ವ್ಯಕ್ತಿ ಎಂದರೆ ಅದು ಜ್ಞಾನಪ್ರಕಾಶ್.‌ ಸೈಮನ್‌, ಮೀಸೆಕಾರ ಮಾದಯ್ಯ ಹಾಗೂ ಬಿಲಾವೇಂದ್ರನ್‌ ಅವರು ಈಗಾಗಲೇ ಜೈಲಿನಲ್ಲಿ ಮೃತಪಟ್ಟಿದ್ದಾರೆ. ವಯಸ್ಸು ಹಾಗೂ ಅನಾರೋಗ್ಯದ ಕಾರಣದಿಂದಾಗಿ ಅವರು ಮೃತಪಟ್ಟಿದ್ದಾರೆ. “ಜ್ಞಾನಪ್ರಕಾಶ್‌ 22 ಪೊಲೀಸರ ಹತ್ಯೆಗೆ ಕಾರಣವಾಗಿದ್ದಾನೆ ಹಾಗೂ ಇದು ಗಂಭೀರ ಪ್ರಕರಣವಾಗಿದೆ. ದೇಶದ ಆಂತರಿಕ ಭದ್ರತೆಗೂ ಈ ಪ್ರಕರಣ ಆತಂಕ ತಂದಿದೆ. ಹಾಗಾಗಿ, ಜೀವಾವಧಿ ಶಿಕ್ಷೆಗೆ ಇಳಿಸಲು ಆಗುವುದಿಲ್ಲ” ಎಂದು ಕೇಂದ್ರ ಸರ್ಕಾರವು ತಿಳಿಸಿದೆ.

Exit mobile version