Site icon Vistara News

ಮುಗಿಯಲಿಲ್ಲ ಪಠ್ಯಪುಸ್ತಕ ವಿವಾದ: ಮರು ಪರಿಷ್ಕರಣೆ ಆದರೆ ₹158 ಕೋಟಿ ಹೊರೆ

text book

ಬೆಂಗಳೂರು: ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ನಡೆಯುತ್ತಿರುವ ಫೈಟ್‌ ಯಾಕೋ ಮುಗಿಯುವ ಹಾಗೆ ಕಾಣುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಎಷ್ಟೇ ಮನವೊಲಿಕೆ ಮಾಡಿದರೂ ಒಂದಲ್ಲ ಒಂದು ಗದ್ದಲ ಗಲಾಟೆಗೆ ಕಾರಣವಾಗುತ್ತಿದೆ. ಇದರ ಪರಿಣಾಮ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಮುಗಿಯುತ್ತಿಲ್ಲ, ಮಕ್ಕಳಿಗೆ ಪಾಠ ಶುರುವಾಗುವುದು ತಡವಾಗುತ್ತಿದೆ.

ಪಠ್ಯಪುಸ್ತಕ ಪರಿಷ್ಕರಣೆ ಸಮಸ್ಯೆಯ ಎಫೆಕ್ಟ್‌ನಿಂದಾಗಿ ಮತ್ತೆ ಎರಡು ತಿಂಗಳು ಮಕ್ಕಳಿಗೆ ಪಠ್ಯ ಪುಸ್ತಕ ಬೋಧನೆ ಇಲ್ಲದಂತಾಗಿದೆ. ಕೋವಿಡ್‌ ಕಾರಣಕ್ಕೆ ಶಿಕ್ಷಣ ಇಲಾಖೆಯು ಶಾಲಾರಂಭದ ಭಾಗವಾಗಿ ಕಲಿಕಾ ಚೇತರಿಕೆ ಕಾರ್ಯಕ್ರಮ ನಡೆಸುತ್ತಿದೆ. ಒಂದು ವೇಳೆ ಪಠ್ಯ ಪುಸ್ತಕ ಜಟಾಪಟಿ ಹೀಗೆಯೇ ಮುಂದುವರಿದರೆ ಕಲಿಕಾ ಚೇತರಿಕಾ ಕಾರ್ಯಕ್ರಮವನ್ನೆ ಮತ್ತೆರಡು ತಿಂಗಳು ವಿಸ್ತರಿಸಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ಪಠ್ಯ ಬೋಧನೆ ತಡವಾದರೆ ಮಕ್ಕಳ ಕಲಿಕಾ ಹಿನ್ನಡೆ ಆಗುತ್ತದೆ ಎಂದು ಶಿಕ್ಷಣ ಇಲಾಖೆಯ ವಿರುದ್ಧ ಶಿಕ್ಷಣ ತಜ್ಞರು ಗರಂ ಆಗಿದ್ದಾರೆ. ವರ್ಷ ಪೂರ್ತಿ ಕಲಿಕಾ ಚೇತರಿಕೆಯೊಂದಿಗೆ ಪಠ್ಯ ಬೋಧನೆ ಮಾಡಲು ಶಿಕ್ಷಣ ಇಲಾಖೆ ಆರಂಭದಲ್ಲಿ ಪ್ಲಾನ್ ಮಾಡಿತ್ತು. ಆದರೆ ಪಠ್ಯ ಪರಿಷ್ಕರಣಾ ವಿವಾದ ಮುಂದುವರಿದಿದ್ದು ಮಕ್ಕಳಿಗೆ ಇನ್ನೂ ಪಠ್ಯ ತಲುಪಿಲ್ಲ.

ಇದನ್ನೂ ಓದಿ | ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಪತ್ರ ಬರೆದಿದ್ದ ಸಾಹಿತಿಗಳ ಪೂರ್ವಾಪರ ಜಾಲಾಡಲಿದೆ ಗುಪ್ತಚರ ಇಲಾಖೆ

ಕಳೆದ ವರ್ಷವೂ ಕೋವಿಡ್ ಕಾರಣಕ್ಕೆ ಪಠ್ಯ ಬೋಧನೆಗೆ ಹೆಚ್ಚು ದಿನಗಳು ಸಿಕ್ಕಿರಲಿಲ್ಲ. ಇದೀಗ ಈ ವರ್ಷವೂ ಬೋಧನಾ ಸಮಯ ಇಲ್ಲದಂತಾಗುತ್ತೆ ಎಂದು ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಇವೆಲ್ಲದರ ನಡುವೆ ಕೆಲವು ವಿರೋಧದ ಕಾರಣಕ್ಕೆ ಪರಿಷ್ಕೃತ ಪಠ್ಯದ ಲೋಪ ಸರಿಪಡಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಹಾಗೆಯೇ ಪರಿಷ್ಕರಣೆಯ ವಿಚಾರದಲ್ಲಿ ಜನಾಭಿಪ್ರಾಯ ಸಂಗ್ರಹಕ್ಕೂ ಶಿಕ್ಷಣ ಇಲಾಖೆ ಮುಂದಾಗಿದೆ.

ಮತ್ತೆ ಪರಿಷ್ಕರಣೆಯಾದರೆ ಸರ್ಕಾರದ ಬೊಕ್ಕಸಕ್ಕೆ ಹೊರೆ

ಈಗಾಗಲೇ ಪರಿಷ್ಕೃತ ಪಠ್ಯ ಮುದ್ರಣವೂ 75% ಪೂರ್ಣಗೊಂಡಿದೆ. ಈ ಕಾರ್ಯಕ್ಕೆ ₹158 ಕೋಟಿ ಖರ್ಚಾಗಿದೆ. 2022-23ನೇ ಸಾಲಿನಲ್ಲಿ ಪಠ್ಯ ಮುದ್ರಣದಲ್ಲಿ ಸಾಕಷ್ಟು ಲೋಪದೋಷಗಳು ಇದರಲ್ಲಿ ಕಂಡು ಬಂದಿದೆ. ಹೀಗಾಗಿ ಶಿಕ್ಷಣ ಇಲಾಖೆ ಜನಾಭಿಪ್ರಾಯದ ಮೊರೆ ಹೋಗಿದೆ. ಜನರ ಅಭಿಪ್ರಾಯದ ಮೇಲೆ ಪಠ್ಯದಲ್ಲಿರು ತಪ್ಪುಗಳ ಮರು ಪರಿಷ್ಕರಿಸಲು ಮುಂದಾಗಿದೆ. ಆದರೆ ಈಗ ಪಠ್ಯದಲ್ಲಿ ಮತಷ್ಟು ಲೋಪದೋಷಗಳು ಕಂಡು ಬಂದ ಬೆನ್ನಲ್ಲೆ, ಮರು ಮುದ್ರಣಕ್ಕೆ ₹158 ಕೋಟಿ ಹೊರೆಯಾಗುವ ಆತಂಕ ಎದುರಾಗಿದೆ.

ಪರಿಷ್ಕರಣೆಗೊಂಡು ಮುದ್ರಣವಾಗಿರುವ ಪಠ್ಯವನ್ನು ಮರು ಮುದ್ರಿಸದೇ ಸರಿಪಡಿಸುವ ಪ್ರಯತ್ನಕ್ಕೆ ಇಲಾಖೆ ಮುಂದಾಗಿದೆ. ಲೋಪವಾದ ಪಾಠಗಳನ್ನಷ್ಟೇ ಪ್ರತ್ಯೇಕವಾಗಿ ಮಕ್ಕಳಿಗೆ ನೀಡುವ ಪ್ಲಾನ್ ಮಾಡಿದೆ. ಆದರೆ ಹೆಚ್ಚಿನ ತಪ್ಪು ಕಂಡ ಬಂದಿರುವುದರಿಂದ ಹೇಗೆ ಪಾಠಗಳನ್ನ ಮಾರ್ಪಡಿಸುವುದು, ಪರ್ಯಾಯ ಪಠ್ಯ ಮುದ್ರಿಸಿ ನೀಡುವುದು ಹೇಗೆ ಎನ್ನುವ ಗೊಂದಲವೂ ಮೂಡಿದೆ.

ಇದನ್ನೂ ಓದಿ | ಪಠ್ಯಪುಸ್ತಕ ನೆಪದಲ್ಲಿ ಅಶಾಂತಿ: ಸಿಎಂ ರಾಜೀನಾಮೆಗೆ ಡಿ. ಕೆ. ಶಿವಕುಮಾರ್ ಆಗ್ರಹ

Exit mobile version