Site icon Vistara News

Contaminated Water: ಕವಾಡಿಗರಹಟ್ಟಿ ನೀರಿನಲ್ಲಿ ವಿಷಕಾರಿ ಅಂಶವಿಲ್ಲ: ಎಫ್ಎಸ್ಎಲ್ ವರದಿ

Water supply through tanker in Kavadigarahatti

ಚಿತ್ರದುರ್ಗ: ಕವಾಡಿಗರಹಟ್ಟಿ ಕಲುಷಿತ ನೀರು ದುರಂತ ಪ್ರಕರಣದ ಹಿನ್ನೆಲೆಯಲ್ಲಿ ನಡೆಸಲಾಗಿದ್ದ ನೀರಿನ ಮಾದರಿ ಪರೀಕ್ಷೆಯ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ (ಎಫ್ಎಸ್ಎಲ್) ಜಿಲ್ಲಾಡಳಿತದ ಕೈ ಸೇರಿದೆ. ಗ್ರಾಮಕ್ಕೆ ಸರಬರಾಜಾದ ನೀರಿನಲ್ಲಿ (Contaminated Water) ಯಾವುದೇ ವಿಷಕಾರಿ ಅಂಶ ಇಲ್ಲಾ ಎಂದು ಎಫ್‌ಎಸ್‌ಎಲ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕವಾಡಿಗರಹಟ್ಟಿಯ ಟ್ಯಾಂಕ್‌ನಿಂದ ಸಂಗ್ರಹಿಸಲಾಗಿದ್ದ ನೀರಿನ ಸ್ಯಾಂಪಲ್, ಮೃತರು ಹಾಗೂ ಅಸ್ವಸ್ಥರ ಮನೆಯಿಂದ ಸಂಗ್ರಹಿಸಿದ್ದ ನೀರಿನ ಸ್ಯಾಂಪಲ್ ಅನ್ನು ಪರೀಕ್ಷೆ ಮಾಡಿದಾಗ ಯಾವುದರಲ್ಲಿಯೂ ಕೂಡ ವಿಷದ ಅಂಶ ಪತ್ತೆಯಾಗಿಲ್ಲ ಎಂದು ಎಫ್‌ಎಸ್‌ಎಲ್ ದೃಢಪಡಿಸಿದೆ ಎಂದು ಚಿತ್ರದುರ್ಗ ಎಸ್‌ಪಿ ಪರಶುರಾಮ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Contaminated water: 3 ದಿನಗಳ ನಂತರ ಆಸ್ಪತ್ರೆಗೆ ಬಂದ ಶಾಸಕ ವೀರೇಂದ್ರ ಪಪ್ಪಿಗೆ ಜನರ ತರಾಟೆ

ಕಲುಷಿತ ನೀರಿನ ಸಮಸ್ಯೆ ಕಾಣಿಸಿಕೊಂಡ ಕೂಡಲೇ ಎಲ್ಲರಿಗೂ ವಾಟರ್‌ ಮ್ಯಾನ್‌ ಮೇಲೆ ಮೊದಲು ಸಂಶಯ ಬಂದಿತ್ತು. ವಾಟರ್‌ಮ್ಯಾನ್‌ ಸುರೇಶ್‌ ವರ್ಷಾನುಗಟ್ಟಲೆ ಟ್ಯಾಂಕ್‌ ತೊಳೆಯದೆ ಅದಕ್ಕೇ ನೀರು ತುಂಬುತ್ತಿದ್ದ. ಹೀಗಾಗಿ ನೀರು ಕಲುಷಿತಗೊಂಡಿರಬಹುದು ಎನ್ನುವುದು ಒಂದು ಸಂಶಯವಾಗಿತ್ತು.

ಆದರೆ, ಅದರ ಜತೆಗೇ ಬಯಲುಗೊಂಡ ಪ್ರೇಮ ಪ್ರಕರಣವೊಂದು ಸುರೇಶ್‌ ಮೇಲಿನ ಸಂಶಯ ಮತ್ತಷ್ಟು ಹೆಚ್ಚಿಸಿತ್ತು. ಅದೇನೆಂದರೆ, ಸುರೇಶ್‌ ಮಗಳ ಮದುವೆ!. ಸುರೇಶ್‌ ಲಿಂಗಾಯತ ಸಮುದಾಯದವರು. ಅವರ ಮಗಳನ್ನು ಊರಿನ ಎಸ್‌ಟಿ ಸಮುದಾಯದ ಯುವಕನೊಬ್ಬ ಪ್ರೀತಿ ಮಾಡುತ್ತಿದ್ದ. ಇದನ್ನು ಸುರೇಶ್‌ ವಿರೋಧಿಸಿದ್ದರು. ಆದರೆ, ಸುರೇಶ್‌ ಅವರನ್ನು ಧಿಕ್ಕರಿಸಿ ಆ ಜೋಡಿ ಕೆಲವು ದಿನಗಳ ಹಿಂದೆ ಮದುವೆ ಮಾಡಿಕೊಂಡಿತ್ತು.

ಇದನ್ನೂ ಓದಿ | Contaminated Water: ಕವಾಡಿಗರ ಹಟ್ಟಿಯಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಸರಬರಾಜು; ಮೂವರ ಅಮಾನತು

ಈ ಪ್ರೀತಿ ಮತ್ತು ಮದುವೆ ವಿಚಾರವಾಗಿ ಕಳೆದ ವಾರ ಸುರೇಶ್‌ ಭಾರಿ ಆಕ್ರೋಶದಿಂದ ಮಾತನಾಡಿದ್ದರು, ಜಗಳ ಮಾಡಿದ್ದರು. ಇದೇ ಜಾತಿ ವೈಷಮ್ಯದಿಂದ ಅವರು ಎಸ್‌ಟಿ ಸಮುದಾಯದವರು ಬಳಸುವ ನೀರಿಗೆ ಏನಾದರೂ ವಿಷ ಬೆರೆಸಿದ್ದರಾ ಎನ್ನುವ ಸಂಶಯ ಕೆಲವರಿಗಿತ್ತು. ವಾಟರ್‌ಮ್ಯಾನ್‌ ಸುರೇಶ್‌ ಮೇಲೆ ಶಂಕೆ ವ್ಯಕ್ತಪಡಿಸಿದ್ದ ಗ್ರಾಮಸ್ಥರು, ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಆದರೆ, ಇದೀಗ ಬಂದಿರುವ ಎಫ್‌ಎಸ್‌ಎಲ್‌ ವರದಿ ಪ್ರಕಾರ ನೀರಿನಲ್ಲಿ ಯಾವುದೇ ವಿಷಕಾರಿ ಅಂಶವಿಲ್ಲ. ಹೀಗಾಗಿ ಕಲುಷಿತ ನೀರು ಸೇವನೆ ಅಥವಾ ಇನ್ನಾವ ಕಾರಣಕ್ಕಾಗಿ ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ ಎಂಬುವುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

Exit mobile version