Site icon Vistara News

ಜಾತ್ರೆ ಸೀಸನ್‌ಗೂ ಮುನ್ನ ಶುರುವಾಯಿತು ಧರ್ಮ ದಂಗಲ್, ಅನ್ಯಮತೀಯರ ವ್ಯಾಪಾರ ತಡೆಯಲು ಆಗ್ರಹ

dharma dangal

ಬೆಂಗಳೂರು: ಮತ್ತೆ ʻಧರ್ಮ ದಂಗಲ್‌ʼ ಆರಂಭವಾಗಿದೆ. ದೇವಸ್ಥಾನದ ಜಾತ್ರಾ ಮಹೋತ್ಸವಗಳು ನಡೆಯುವ ಸಂದರ್ಭದಲ್ಲಿ ಹಿಂದುಗಳಿಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡುವಂತೆ ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ಇದೇ ತಿಂಗಳು ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಚಂಪಾಷಷ್ಠಿ ಆಚರಣೆಯಲ್ಲಿಯೂ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಮನವಿ ಮಾಡಿಕೊಳ್ಳಲಾಗಿತ್ತು. ಇದೀಗ ಇತರ ಜಾತ್ರಾ ಮಹೋತ್ಸವಗಳಲ್ಲಿಯೂ ಹಿಂದು ಧರ್ಮದವರನ್ನು ಹೊರತು ಪಡಿಸಿ ಬೇರೆ ಧರ್ಮದವರಿಗೆ ವ್ಯಾಪಾರ ಮಾಡಲು ಅವಕಾಶ ನೀಡದಂತೆ ಹಿಂದೂ ಜನಜಾಗೃತಿ ಸಮಿತಿ ಅಧ್ಯಕ್ಷ ಮೋಹನ್ ಗೌಡ ಎಂಬವರು ಧಾರ್ಮಿಕ ದತ್ತಿ‌ ಇಲಾಖೆಗೆ ಮನವಿ ಮಾಡಿದ್ದಾರೆ.

ಬೆಂಗಳೂರಿನ ಕಡಲೆಕಾಯಿ ಪರಿಷೆಯಲ್ಲಿ ಅನ್ಯಧರ್ಮಿಯರು ವ್ಯಾಪಾರ ವಹಿವಾಟುಗಳಲ್ಲಿ ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಭಾಗದಲ್ಲಿ ಜಾತ್ರಾ ಮಹೋತ್ಸವಗಳು ಶುರುವಾಗಲಿವೆ. 2002ರ ಧಾರ್ಮಿಕ ದತ್ತಿ ಇಲಾಖೆ ಕಾಯಿದೆಯಲ್ಲಿಯೂ ಈ ಬಗ್ಗೆ ಉಲ್ಲೇಖವಿದೆ. ಹೀಗಾಗಿ ಜಾತ್ರೆ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ಹಿಂದುಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ಕಳೆದ ವರ್ಷವೂ, ದೇವಸ್ಥಾನದ ನಿಗದಿತ ಅಂಗಡಿಗಳ ಏಲಂನಲ್ಲಿ ಅನ್ಯ ಧರ್ಮೀಯರು ಪಾಲ್ಗೊಳ್ಳಲು ಅವಕಾಶವಿರಬಾರದು ಎಂದು ಆಗ್ರಹಿಸಲಾಗಿತ್ತು. ಹಿಂದು ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳಲ್ಲೇ ಈ ವಿಚಾರ ಉಲ್ಲೇಖವಾಗಿರುವುದನ್ನು ಬೊಟ್ಟು ಮಾಡಲಾಗಿತ್ತು. ಅದರ ಜತೆಯೇ ಹಿಂದು ದೇವಳಗಳ ಜಾತ್ರೆ ಸಂದರ್ಭದಲ್ಲಿ ಅನ್ಯಮತೀಯರಿಗೆ ಅಂಗಡಿ ಇಡಲು ಅವಕಾಶ ನೀಡಬಾರದು ಎಂಬ ವಾದ ಜೋರಾಗಿ ಕೇಳಿಬಂದಿತ್ತು. ಈ ವರ್ಷವೂ ಈ ʻಧರ್ಮ ದಂಗಲ್‌ʼ ಆರಂಭವಾಗಿದೆ.

ಇದನ್ನೂ ಓದಿ | Kukke subrahmanya | ಕುಕ್ಕೆ ಕ್ಷೇತ್ರದಲ್ಲಿ ಅನ್ಯಮತೀಯರಿಗೆ ವ್ಯಾಪಾರ ನಿರ್ಬಂಧ: ಜಾಗರಣ ವೇದಿಕೆ ಮನವಿ

Exit mobile version