ವಿಜಯಪುರ : ಜಿಲ್ಲೆಯಲ್ಲಿ ಈ ಬಾರಿಯ ವಾಯವ್ಯ ಶಿಕ್ಷಕರ ಹಾಗೂ ಪದವೀಧರರ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಬಿಜೆಪಿ ಪಕ್ಷದಲ್ಲಿನ ಒಳ ರಾಜಕೀಯದ ಲಾಭ ಪಡೆಯುವ ಮೂಲಕ ಕಾಂಗ್ರೆಸ್ ಒಗ್ಗಟ್ಟು ಪ್ರದರ್ಶಿಸಿದ್ದರಿಂದ ಮತದಾರರು ಕೈ ಹಿಡಿದಿದ್ದಾರೆ.
ಈ ಚುನಾವಣೆ ಎರಡೂ ಪಕ್ಷಗಳ ನಡುವಿನ ಚುನಾವಣೆ ಆಗದೆ, ಜಾತಿ ಆಧಾರಿತ ಚುನಾವಣೆ ಎಂದೇ ಬಿಂಬಿತವಾಗಿತ್ತು. ಕಾರಣ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಚಾರದಲ್ಲಿ ಸರ್ಕಾರ ಈ ಸಮಾಜದ ಮುಖಂಡರನ್ನು ಹಾಗೂ ಸ್ವಾಮೀಜಿಗಳನ್ನು ನಡೆಸಿಕೊಂಡಿರುವ ರೀತಿಯೇ ಇವತ್ತಿನ ಫಲಿತಾಂಶಕ್ಕೆ ಕನ್ನಡಿ ಎನ್ನಬಹುದು. ಕಾಂಗ್ರೆಸ್ ಅಭ್ಯರ್ಥಿ ಹಣ ಹಂಚಿಕೆ ವಿಚಾರದ ಆರೋಪ, ಅವರ ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ವಯಸ್ಸಿನ ಆಧಾರವನ್ನು ಲೆಕ್ಕಿಸದೆ ಪಂಚಮಸಾಲಿ ಮತಗಳು, ಹುಕ್ಕೇರಿಯವರ ಕೈ ಹಿಡಿದಿವೆ. ಈ ಫಲಿತಾಂಶ ಬಿಜೆಪಿಗೆ ಒಂದು ರೀತಿಯಲ್ಲಿ ಎಚ್ಚರಿಕೆಯ ಗಂಟೆ ಕೂಡಾ ಹೌದು.
ಇದನ್ನೂ ಓದಿ | 3ನೇ ಬಾರಿ ಅರುಣ್ ಶಹಾಪುರ ಕೈಹಿಡಿಯದ ಮತದಾರ: ವಾಯವ್ಯದಲ್ಲಿ ಹುಕ್ಕೇರಿಗೆ ಜಯ
ಬಿಜೆಪಿಯ ಪಂಚಮಸಾಲಿ ಶಾಸಕರು ಈ ಚುನಾವಣೆಯಲ್ಲಿ ಸಕ್ರಿಯ ಪ್ರಚಾರದಿಂದ ದೂರವೇ ಉಳಿದಿದ್ದರು. ಆದರೆ ಕಾಂಗ್ರೆಸ್ ಪಂಚಮಸಾಲಿ ಶಾಸಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಎಂ.ಬಿ.ಪಾಟೀಲರ ಚುನಾವಣೆ ತಂತ್ರ ವರ್ಕೌಟ್ ಆಗಿದೆ ಎಂದು ಚರ್ಚಿತವಾಗುತ್ತಿದೆ.
ಒಳ ಒಪ್ಪಂದದ ಚರ್ಚೆ
ಈ ಚುನಾವಣೆಯ ಫಲಿತಾಂಶ ಪಂಚಮಸಾಲಿಗಳ ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸಿದ್ದು, ಬಿಜೆಪಿಗೆ ಹಿನ್ನಡೆಯಾಗಲು ಕಾರಣವಾಗಿದೆ. ಪದವೀಧರರ ಕ್ಷೇತ್ರದ ಇಬ್ಬರೂ ಅಭ್ಯರ್ಥಿಗಳು ಪಂಚಮಸಾಲಿ ಸಮಾಜಕ್ಕೆ ಸೇರಿದವರಾಗಿದ್ದರೂ, ಆರ್ಥಿಕವಾಗಿ ಹಾಗೂ ಹೆಚ್ಚಿನ ಸದಸ್ಯತ್ವ ಮಾಡಿಸಿದ್ದರು ಎನ್ನುವ ಕಾರಣಕ್ಕೆ ಹನುಮಂತ ನಿರಾಣಿಯವರನ್ನು ಬೆಂಬಲಿಸಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ. ಮತದಾನಕ್ಕೂ ಮುಂಚೆಯೇ ಪದವೀಧರ ಕ್ಷೇತ್ರಕ್ಕೆ ನಿರಾಣಿ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಹುಕ್ಕೇರಿ ಎನ್ನುವ ಒಳ ಒಪ್ಪಂದದ ಚರ್ಚೆ ಬೆಳಗಾವಿ ರಾಜಕಾರಣದಲ್ಲಿ ಹರಿದಾಡಿತ್ತು.
ಈಗಾಗಲೇ ಈ ಹಿಂದೆ ನಡೆದಿರುವ ಚುನಾವಣೆಗಳ ಫಲಿತಾಂಶ ಗಮನಿಸಿದಾಗ, ಪಂಚಮಸಾಲಿ ಸಮುದಾಯದ ಅಭ್ಯರ್ಥಿಗಳೇ ಮೆಲುಗೈ ಸಾಧಿಸಿರುವುದು ಸಾಬೀತಾಗಿದೆ. ಈ ಹಿಂದೆ ಬೆಳಗಾವಿ ಲೋಕಸಭಾ ಚುನಾವಣೆಗೆ ನಡೆದ ಉಪಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಯಾಸದಿಂದ ಗೆಲ್ಲುವಂತಾಗಿತ್ತು. ಅದಕ್ಕೂ ಪಂಚಮಸಾಲಿ ಸಮಾಜ ಕಾರಣ ಎಂದರೆ ತಪ್ಪಿಲ್ಲ. ಜೊತೆಗೆ ಸ್ಥಳೀಯ ಸಂಸ್ಥೆಗಳಿಂದ ನಡೆದ ಚುನಾವಣೆಯಲ್ಲಿ ಬೆಳಗಾವಿಯಲ್ಲಿ ಪಂಚಮಸಾಲಿ ಅಭ್ಯರ್ಥಿ ಎನ್ನುವ ಒಂದೇ ಕಾರಣಕ್ಕೆ ಬಿಜೆಪಿಯ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿ ಚನ್ನರಾಜ ಹಟ್ಟಿಹೊಳಿಗೆ ಪಂಚಮಸಾಲಿಗಳು ಮತ ನೀಡಿದ್ದರು.
ಇದನ್ನೂ ಓದಿ | ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿ ಮಹಾತ್ಮ ಗಾಂಧಿ ಮೊಮ್ಮಗ ?!; ಅಚ್ಚರಿಯ ಆಯ್ಕೆ
ಕೇವಲ ಜಾತಿಯೊಂದೇ ಅಲ್ಲದೆ, ಅರುಣ ಶಹಾಪೂರ್ ಸೋಲಿಗೆ ಅನೇಕ ಕಾರಣಗಳಿವೆ, ಶಿಕ್ಷಕರಿಗೆ ಸರಿಯಾಗಿ ಸ್ಪಂದಿಸಿಲ್ಲ ಎನ್ನುವ ನೋವು ಶಿಕ್ಷಕರ ಬಳಗದಲ್ಲಿತ್ತು. ಜತೆಗೆ ಬಿಜೆಪಿ ಅಭ್ಯರ್ಥಿಯನ್ನು ಬದಲಾಯಿಸಬೇಕು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇವೆಲ್ಲದರ ನಡುವೆ ಹುಕ್ಕೇರಿಯವರ ಕಾಂಚಾಣದ ಕರಾಮತ್ತು ‘ ಕೈ’ ಹಿಡಿದಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.
ಬಿಜೆಪಿಯ ಪರವಾಗಿ ಹಾಲಿ ಸಿಎಂ ಬೊಮ್ಮಾಯಿ ಅವರು ಬೆಳಗಾವಿಯಲ್ಲಿ ಪ್ರಚಾರ ಮಾಡಿದ್ದರು, ಮಾಜಿ ಸಿಎಂ, ನಿಕಟಪೂರ್ವ ಮುಖ್ಯಮಂತ್ರಿಯೂ ಆಗಿರುವ ಪ್ರಭಾವಶಾಲಿ ಬಿಜೆಪಿ ಮುಖಂಡ ಬಿ.ಎಸ್.ಯುಡಿಯೂರಪ್ಪ ಸಹ ಎರಡು ದಿನಗಳ ಕಾಲ ಬೆಳಗಾವಿ, ಚಿಕ್ಕೋಡಿ, ವಿಜಯಪುರ ಹಾಗೂ ಬಾಗಲಕೋಟೆಯಲ್ಲಿ ಪ್ರಚಾರ ಮಾಡಿ ಬಹಿರಂಗ ಸಭೆ ನಡೆಸಿದ್ದರು. ಜತೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಕೆಲ ಸಚಿವರು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸೇರಿದಂತೆ ಬಹುತೇಕರು ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದರು. ಆದರೂ ಶಿಕ್ಷಕರ ಕ್ಷೇತ್ರದ ತಂತ್ರಗಾರಿಕೆ ಫಲಿಸಿಲ್ಲ. ಆದರೆ ಪದವೀಧರ ಕ್ಷೇತ್ರದಲ್ಲಿ ಪಂಚಮಸಾಲಿ ಎನ್ನುವ ಜಾತಿ ಲೆಕ್ಕಾಚಾರ ಕೈ ಹಿಡಿದಿದೆ.
ಈ ಚುನಾವಣೆಯಲ್ಲಿ 2ಎ ಮೀಸಲಾತಿ ಹೋರಾಟದ ನೇತೃತ್ವ ವಹಿಸಿದ್ದ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದರು. ಹೀಗಾಗಿ ಜಾತಿ ಲೆಕ್ಕಾಚಾರ ಹಾಗೂ ಎಂ.ಬಿ.ಪಾಟೀಲ್ ತಂತ್ರಗಾರಿಕೆ ಕಾಂಗ್ರೆಸ್ ಪಕ್ಷವನ್ನು ದಡ ಸೇರಸಿದೆ ಎನ್ನಬಹುದು.
ವಿಮುಖರಾದ ಬಿಜೆಪಿ ನಾಯಕರು
ಬಿಜೆಪಿಯ ಪ್ರಭಾವಿ ನಾಯಕರು ಹಾಗೂ ಹಾಲಿ ಶಾಸಕರ ನೇತೃತ್ವದ ಶಿಕ್ಷಣ ಸಂಸ್ಥೆಗಳಿದ್ದರೂ ಶಿಕ್ಷಕರು ಬಿಜೆಪಿಯಿಂದ ವಿಮುಖರಾಗಿದ್ದಾರೆ ಎನ್ನುವುದು ಈ ಫಲಿತಾಂಶ ಸಾಬೀತುಪಡಿಸಿದೆ. ಜತೆಗೆ ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ ಪ್ರಬಲ ನಾಯಕಿಯರಾದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ವೀಣಾ ಕಾಶಪ್ಪನವರ್ ಈ ಚುನಾವಣೆಯ ನೇತೃತ್ವ ವಹಿಸಿಕೊಂಡಿದ್ದರು. ಹೇಗಾದರೂ ಮಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಎನ್ನುವ ಹಠಕ್ಕೆ ಬಿದ್ದು, ಕೊನೆಗೂ ಯಶಸ್ವಿಯಾಗಿದ್ದಾರೆ. ಈ ಚುನಾವಣೆಯಲ್ಲಿ ವಯಸ್ಸು ಹಾಗೂ ವಿದ್ಯಾರ್ಹತೆ ಮಾನದಂಡ ಅಲ್ಲ ಎನ್ನುವುದು ಒಂದುಕಡೆಯಾದರೆ, ಇದೆ ವಿಷಯವನ್ನು ಚುನಾವಣೆಗೆ ಬಳಸಿಕೊಂಡಿದ್ದ ಬಿಜೆಪಿಗೆ ಮುಖಭಂಗವಾದಂತಾಗಿದೆ.
ಪಂಚಮಸಾಲಿ ಮೀಸಲಾತಿ ಹೋರಾಟದ ವಿಚಾರದಲ್ಲಿ ಸರ್ಕಾರ ಒಂದು ಸ್ಪಷ್ಟ ನಿರ್ಧಾರಕ್ಕೆ ಬರದೆ ಹೋದರೆ, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪರಿಣಾಮ ಬೀರುವ ಎಲ್ಲಾ ಸಾಧ್ಯತೆಗಳಿವೆ ಎನ್ನುವುದು ಈಗಿನಿಂದಲೇ ಗೊತ್ತಾಗುತ್ತಿದೆ.
ಈ ಚುನಾವಣೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಲ್ಲಿ ಸರಕಾರ ಅನುಸರಿಸುತ್ತಿರುವ ವಿಳಂಬ ಹಾಗೂ ದ್ವಿಮುಖ ನೀತಿ ಧೋರಣೆಯೇ ಇವತ್ತಿನ ಫಲಿತಾಂಶಕ್ಕೆ ಕಾರಣ. ಇದೇ ರೀತಿ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿಯೂ ಪಾಠ ಕಲಿಸಬೇಕಾಗುತ್ತದೆ.
-ಬಸವ ಜಯಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಪೀಠ, ಕೂಡಲಸಂಗಮ
ಪ್ರಕಾಶ್ ಹುಕ್ಕೇರಿಯವರು ತುಂಬಾ ಹಿರಿಯ ರಾಜಕಾರಣಿಗಳು, ಅವರ ಅನುಭವ ಶಿಕ್ಷಕರಿಗೆ ವರದಾನ ಆಗುತ್ತೆ. ಜೊತೆಗೆ ಮೀಸಲಾತಿ ನೀಡುವ ವಿಚಾರದಲ್ಲಿ ಸರಕಾರ ನಡೆದುಕೊಂಡ ರೀತಿಯೂ ಇದಕ್ಕೆ ಕಾರಣ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಇದು ಮಾರಕವಾಗಿತ್ತದೆ.
ವೀಣಾ ಕಾಶೆಪ್ಪನವರ್, ಕಾಂಗ್ರೆಸ್ ನಾಯಕಿ
ಇದನ್ನೂ ಓದಿ | ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷದಿಂದ ಫಾರೂಖ್ ಅಬ್ದುಲ್ಲಾ, ಗೋಪಾಲಕೃಷ್ಣ ಗಾಂಧಿ ಹೆಸರು, ಗೌಡರ ಪ್ರಸ್ತಾಪ ಇಲ್ಲ