Site icon Vistara News

Assembly Session : ಬಿಜೆಪಿ ರೌಡಿಗಿರಿಗೆ ಹೆದರಲ್ಲ; ಮಹಾಘಟಬಂಧನಕ್ಕೆ IAS ಅಧಿಕಾರಿಗಳ ಬಳಕೆ ತಪ್ಪಲ್ಲ: ಸಿದ್ದರಾಮಯ್ಯ

CM Siddaramaiah and Basavaraja Bommai

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷ ಸ್ಟ್ರಾಂಗ್ ಆಗಿರಬೇಕು. ನಾವು ಒಂದು ನಿಯಮಾವಳಿ ಮಾಡಿಕೊಂಡಿದ್ದೇವೆ. ಅದರಂತೆ ನಡೆದುಕೊಳ್ಳಬೇಕು. ಸ್ಪೀಕರ್ ಕುರ್ಚಿಗೆ (Speaker Chair) ಪ್ರತಿಯೊಬ್ಬರೂ ಗೌರವ ಕೊಡಬೇಕು. ವಿಧಾನಸಭೆ ಅಧಿವೇಶನದಲ್ಲಿ (Assembly Session) ಬಾವಿಗೆ ಬರೋದು, ಪ್ರತಿಭಟನೆ ಮಾಡೋದನ್ನು ಎಲ್ಲರೂ ಮಾಡಿದ್ದಾರೆ. ನಾವು ಸಹ ಈ ಹಿಂದೆ ಇದನ್ನು ಮಾಡಿದ್ದೇವೆ. ನಾವು ಹಿಂದೆ ಪತ್ರ ಹರಿದಿರಬಹುದು. ಆದರೆ ಸ್ಪೀಕರ್ ಮುಖಕ್ಕೆ ಯಾರೂ ಎಸೆದಿಲ್ಲ. ಇದೊಂದು ಗೂಂಡಾ ವರ್ತನೆ. ಬಿಜೆಪಿ ರೌಡಿತನಕ್ಕೆ (BJP rowdyism) ನಾವು ಹೆದರಲ್ಲ. ಅಲ್ಲದೆ, ನಾವು ಬೇರೆ ರಾಜ್ಯಗಳ ನಾಯಕರಿಗೆ ಗೌರವ ಕೊಟ್ಟರೆ ನಮ್ಮ ರಾಜ್ಯಕ್ಕೇ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳುವ ಮೂಲಕ ಮಹಾಘಟಬಂಧನ ಕಾರ್ಯಕ್ರಮಕ್ಕೆ (Mahagathbandhan Programme) ಐಎಎಸ್‌ ಅಧಿಕಾರಿಗಳನ್ನು (IAS Officers) ಬಳಸಿಕೊಂಡಿರುವುದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ವಿಧಾನ ಮಂಡಲ ಅಧಿವೇಶನದಲ್ಲಿ ಪತ್ರವನ್ನು ಹರಿದು ಸ್ಪೀಕರ್‌ ಮುಖಕ್ಕೆ ಎಸೆದಿದ್ದ ಬಿಜೆಪಿಯ 10 ಸದಸ್ಯರನ್ನು ಅಮಾನತು (BJP members suspended) ಮಾಡಿದ ಬಳಿಕ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಸಭಾತ್ಯಾಗ (BJP and JDS members walkout) ಮಾಡಿ ಹೊರಬಂದಿದ್ದಾರೆ. ಬಳಿಕ ಸದನವನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ರೌಡಿತನಕ್ಕೆ ನಾವು ಹೆದರುವುದಿಲ್ಲ. ಬಡವರ ಕಾರ್ಯಕ್ರಮವನ್ನು ಮುಂದುವರಿಸುತ್ತೇವೆ. ಇಂದು ನಡೆದ ಘಟನೆಯನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Assembly Session : 10 ಬಿಜೆಪಿ ಸದಸ್ಯರು ಸಸ್ಪೆಂಡ್; ಎಳೆದು ಹೊರಹಾಕಿದ ಮಾರ್ಷಲ್‌

ಜೆಡಿಎಸ್‌ ಮೇಲೆ ಸಿಎಂ ವ್ಯಂಗ್ಯ

ಸದನ ನಾಳೆ ಅಥವಾ ನಾಡಿದ್ದು ಮುಕ್ತಾಯ ಆಗಬಹುದು. ವಿರೋಧ ಪಕ್ಷಗಳು ಬಜೆಟ್ ಮೇಲೆ, ಜನರ ಸಮಸ್ಯೆ ಮೇಲೆ ಚರ್ಚೆ ಮಾಡಬೇಕಿತ್ತು. ಆದರೆ ಈಗ ಜೆಡಿಎಸ್‌ನವರು ಸಹ ಇವರ ಜತೆ ಸೇರಿಕೊಂಡಿರುವುದನ್ನು ನೋಡಿದರೆ ನಗಬೇಕೋ? ಬೇಡವೋ? ಏನೋ ಗೊತ್ತಾಗುತ್ತಿಲ್ಲ ಎಂದು ಜೆಡಿಎಸ್‌ಗೆ ಸಹ ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ತಿವಿದರು.

ಬೇರೆ ರಾಜ್ಯದ ನಾಯಕರನ್ನು ಗೌರವಿಸುವುದರಿಂದ ನಮ್ಮ ಗೌರವ ಹೆಚ್ಚಾಗುತ್ತದೆ. ಅನಂತಕುಮಾರ್ ಇದ್ದಾಗ ರಾಷ್ಟ್ರೀಯ ನಾಯಕರು ಬರುತ್ತಾರೆ. ಗೌರವ ಕೊಡಬೇಕು ಎಂದು ಕೇಳಿದ್ದರು. ನಾನು ಅಧಿಕಾರಿಗಳನ್ನು ಕಳುಹಿಸಿ ಕೊಟ್ಟಿದ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳುವ ಮೂಲಕ ಮಹಾಘಟಬಂಧನ ಕಾರ್ಯಕ್ರಮಕ್ಕೆ ಪ್ರಿನ್ಸಿಪಲ್‌ ಸೆಕ್ರೆಟರಿಗಳನ್ನು ಬಳಸಿಕೊಂಡಿರುವ ಕ್ರಮವನ್ನು ಸಮರ್ಥನೆ ಮಾಡಿಕೊಂಡರು.

ನನ್ನ ಹೆಸರಿಗೆ ಜನರಿಂದ ಪೂಜೆ

ನಮ್ಮ ಕಾರ್ಯಕ್ರಮಗಳಿಂದ ಜನರು ಖುಷಿಯಾಗಿದ್ದಾರೆ. ಇದಕ್ಕೆ ಇವರಿಗೆ ಸಹಿಸಲು ಆಗುತ್ತಿಲ್ಲ. ಜನ ನನ್ನ ಹೆಸರಲ್ಲಿ ಪೂಜೆ ಮಾಡಿಸುತ್ತಿದ್ದಾರೆ. ಇನ್ನು ಇಂದು ಬಿಜೆಪಿಯವರು ನಡೆದುಕೊಂಡ ವರ್ತನೆಯನ್ನು ಡೆಪ್ಯುಟಿ ಸ್ಪೀಕರ್ ಆಗಿದ್ದರಿಂದ ತಡೆದುಕೊಂಡಿದ್ದಾರೆ. ಅದೇ ನೀವೇ ಆಗಿದ್ದಿದ್ದರೆ ಸ್ಥಳದಲ್ಲಿ ಕ್ರಮ ಕೈಗೊಳ್ಳುತ್ತಿದ್ದಿರಿ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ಗೆ ಸಿದ್ದರಾಮಯ್ಯ ಹೇಳಿದರು.

ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? ಇಲ್ಲಿದೆ ವಿಡಿಯೊ

ಇದನ್ನೂ ಓದಿ: Assembly Session : ವಿಧಾನಸಭೆಯಲ್ಲಿ ತಳ್ಳಾಟಕ್ಕೆ ಕುಸಿದು ಬಿದ್ದ ಯತ್ನಾಳ್‌; ಆಸ್ಪತ್ರೆಗೆ ಶಿಫ್ಟ್

ನಾವು ಬಿಜೆಪಿ ಮುಕ್ತ ಮಾಡುತ್ತೇವೆ ಎಂದು ಹೇಳುವುದಿಲ್ಲ. ಆದರೆ, ವಿಪಕ್ಷದಲ್ಲಿಯೇ ಇರಲಿ ಅಂತ ಭಾವಿಸುತ್ತೇವೆ. ಕೇಶವಕೃಪದಲ್ಲಿ ಇರೋರು ನೋಡಬೇಕು ಅಂತ ಈ ರೀತಿ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವಿರೋಧಿ, ಸಂಸದೀಯ ವಿರೋಧಿಗಳು ನಮಗೆ ಪಾಠ ಮಾಡಲು ಹೇಳಿ ಕೊಡುತ್ತಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

ದಮನಕ್ಕೆ ಮುಂದಾದ ಕಾಂಗ್ರೆಸ್‌: ಬಸವರಾಜ ಬೊಮ್ಮಾಯಿ

ಇದೇ ಜುಲೈ 17, 18ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್ ಪಕ್ಷ ನಡೆಸಿದ ರಾಜಕೀಯ ಸಭೆಗೆ ಪ್ರಿನ್ಸಿಪಲ್‌ ಸೆಕ್ರೆಟರಿ ಮಟ್ಟದ ಅಧಿಕಾರಿಗಳನ್ನು ಗುಮಾಸ್ತರಂತೆ ಬಳಕೆ ಮಾಡಿಕೊಂಡಿದ್ದಾರೆ. ಇದು ಖಂಡನೀಯ ಹಾಗೂ ಅಧಿಕಾರ ದುರುಪಯೋಗ ಆಗಿದೆ. ಇದನ್ನು ನಾವು ಪ್ರಶ್ನೆ ಮಾಡಿದರೆ ದಮನ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ (Ex CM Basavaraj Bommai) ಹೇಳಿಕೆ ನೀಡಿದ್ದಾರೆ.

ಐಎಎಸ್‌ ಅಧಿಕಾರಿಗಳನ್ನು ಈ ರೀತಿ ಬಳಸಿಕೊಂಡಿರುವುದು ಅಕ್ಷಮ್ಯ. ಇಂಥವರನ್ನು ರಾಜ್ಯ ಅಭಿವೃದ್ಧಿ ಮಾಡಲು ಜನ ಆರಿಸಿ ಕಳಿಸಿದ್ದಾರೆ. ಹಿಂದೆಂದೂ ನಡೆಯದ ರೀತಿಯಲ್ಲಿ ಸೇವಕರಂತೆ ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಲಾಗಿದೆ. ಪ್ರೊಟೋಕಾಲ್ ಅಧಿಕಾರಿಗಳನ್ನು ಬಿಟ್ಟು ಇವರನ್ನು ಸ್ವಾಗತ ಕೋರಲು ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿ ಕೊಲೆಗಳಾಗುತ್ತಿವೆ. ಆ ಬಗ್ಗೆ ಗಮನ ಇಲ್ಲ. ಇದನ್ನೆಲ್ಲ ಬಿಟ್ಟು ರಾಜಕೀಯ ವ್ಯಕ್ತಿಗಳಿಗೆ ರಾಜಮರ್ಯಾದೆ ಕೊಟ್ಟಿರೋದು ಖಂಡನೀಯ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್‌ನದ್ದು ದಮನಕಾರಿ ನೀತಿ

ಕಾಂಗ್ರೆಸ್ ಸೇಡಿನ ರಾಜಕೀಯವನ್ನು ಮಾಡುತ್ತಿದೆ. ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ. ಸ್ಪೀಕರ್ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ನಾವು ನ್ಯಾಯವನ್ನು ಕೇಳಿದೆವು, ಆದರೆ ನ್ಯಾಯ ಕೊಡಲಿಲ್ಲ. ಕಾಂಗ್ರೆಸ್ ಪಕ್ಷದ ಔತಣಕೂಟಕ್ಕೆ ಸ್ಪೀಕರ್‌ ಹೋಗಿ ಬಂದಿದ್ದಾರೆ. ಸ್ಪೀಕರ್ ಸ್ಥಾನದ ಗೌರವ ಹರಾಜಾಗಿದೆ. ಅವಿಶ್ವಾಸಕ್ಕೆ ಜೆಡಿಎಸ್ ಬೆಂಬಲ ಕೊಟ್ಟಿದ್ದಾರೆ. ಸ್ಪೀಕರ್ ವಿರುದ್ಧ ಅವಿಶ್ವಾಸ ಮಂಡನೆಗೆ ಮುಂದಾಗಿದ್ದೇವೆ. ನಮ್ಮ ಸದಸ್ಯರಿಗೆ ಶಿಕ್ಷೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಸರ್ವಾಧಿಕಾರಿ, ಹಿಟ್ಲರ್ ಧೋರಣೆ ಅನುಸರಿಸಿದೆ. ನಮ್ಮ ಶಾಸಕರ ಅಮಾನತು ಖಂಡನೀಯ ಎಂದು ಬಸವರಾಜ ಬೊಮ್ಮಾಯಿ ಗುಡುಗಿದರು.

ಇದನ್ನೂ ಓದಿ: Assembly Session : 5 ವಿಧೇಯಕ ಪಾಸ್;‌ ಬಿಲ್‌ ಹರಿದು ಸ್ಪೀಕರ್‌ ಮುಖಕ್ಕೆಸೆದ ಬಿಜೆಪಿ-ಜೆಡಿಎಸ್!

ರುದ್ರಪ್ಪ ಲಮಾಣಿಗೆ ಕಾಂಗ್ರೆಸ್‌ನಿಂದ ಅವಮಾನ

ಕಾಂಗ್ರೆಸ್‌ನವರು ಸ್ಪೀಕರ್ ಮೈಕ್ ಕಿತ್ತು ಎಸೆದಿದ್ದರು. ಸಿದ್ದರಾಮಯ್ಯನವರು ವಿಧಾನಸಭೆ ಬಾಗಿಲನ್ನು ಒದ್ದಿದ್ದರು. ಆಗ ಇವರನ್ನು ಅಮಾನತು ಮಾಡಿರಲಿಲ್ಲ. ಈಗ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ವಿಪಕ್ಷಗಳನ್ನು ಹತ್ತಿಕ್ಕಲು ದಮನಕಾರಿ ನೀತಿ ಅನುಸರಿಸಿದ್ದು, ಜನ ತಕ್ಕಪಾಠ ಕಲಿಸುತ್ತಾರೆ. ಸ್ಪೀಕರ್ ಇದನ್ನು ಎದುರಿಸಬೇಕಿತ್ತು. ಆದರೆ, ಡೆಪ್ಯುಟಿ ಸ್ಪೀಕರ್ ಅವರನ್ನು ಕೂರಿಸಿ ಎದ್ದು ಹೋಗಿದ್ದಾರೆ. ರುದ್ರಪ್ಪ ಲಮಾಣಿಗೆ ಅವಮಾನ ಆಗಿದ್ದರೆ, ಅದಕ್ಕೆ ಕಾಂಗ್ರೆಸ್ ಕಾರಣ. ಅವರನ್ನು ಮಂತ್ರಿ ಮಾಡಬೇಕಿತ್ತು. ಮಾಡದೇ ಅವಮಾನ ಮಾಡಿದ್ದಾರೆ. ನಮ್ಮ ಶಾಸಕರನ್ನ ಹೊರಗೆ ಹಾಕಿದರೆ, ನಾವೂ ಕೂಡ ಪ್ರೊಟೆಸ್ಟ್ ಮಾಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಗುಡುಗಿದರು.

Exit mobile version