Site icon Vistara News

Operation Hasta : ಬಿಜೆಪಿಯಲ್ಲಿ ಬೇಸರ ಆಗಿದೆ ಎಂದ ಎಸ್‌.ಟಿ. ಸೋಮಶೇಖರ್; 4 ದಿನದ ಡೆಡ್‌ಲೈನ್‌ ಕೊಟ್ಟರೇ?

Yeshwanthpur MLA ST Somashekar and bjp congress logos

ಬೆಂಗಳೂರು: ನನಗೆ ಬಿಜೆಪಿಯಲ್ಲಿ ಬೇಸರವಾಗಿದೆ ನಿಜ. ಹಾಗಂತ ಈಗಲೇ ಪಕ್ಷ ಬಿಡುವ ತೀರ್ಮಾನವನ್ನು ಮಾಡಿಲ್ಲ. ಸ್ವಲ್ಪ ಸಮಯ ಕಾಯೋಣ ಎಂದು ನಮ್ಮ ಬೆಂಬಲಿಗರಿಗೂ ನಾನು ಹೇಳಿದ್ದೇನೆ. ಸದ್ಯಕ್ಕಂತೂ ಘರ್‌ ವಾಪ್ಸಿ (Ghar Wapsi) ನಿರ್ಧಾರ ಮಾಡಿಲ್ಲ ಎಂದು ಮಾಜಿ ಸಚಿವ, ಯಶವಂತಪುರ ಶಾಸಕ ಎಸ್‌.ಟಿ‌. ಸೋಮಶೇಖರ್ (Yeshwanthpur MLA ST Somashekar) “ಆಪರೇಷನ್‌ ಹಸ್ತ”ದ (Operation Hasta) ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಬಿಜೆಪಿಯಿಂದ ಬಂದವರಿಗೆ ಫಸ್ಟ್‌ ಬೆಂಚ್‌ ಸಿಗುವುದಿಲ್ಲ ಎಂಬ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ (Home Minister Dr G Parameshwara) ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಪರಮೇಶ್ವರ್‌ ಅವರಿಗೇನು ಈಗ ಫಸ್ಟ್‌ ಬೆಂಚ್‌ ಸಿಕ್ಕಿದೆಯಾ? ಎಂದು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌.ಟಿ‌. ಸೋಮಶೇಖರ್, ನನ್ನ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಹೇಳಿದ್ದೇನೆ. ವರಿಷ್ಠರು ಕ್ರಮ ತೆಗೆದುಕೊಳ್ಳುವ ಭರವಸೆಯನ್ನೂ ನೀಡಿದ್ದಾರೆ. ಹೀಗಾಗಿ ಇಂದು (ಗುರುವಾರ) ನಡೆದ ಬೆಂಬಲಿಗರ ಸಭೆಯಲ್ಲಿ ನಾಲ್ಕು ದಿನ ನೋಡೋಣ ಎಂದು ಹೇಳಿದ್ದಾಗಿ ತಿಳಿಸಿದರು. ಈ ಮೂಲಕ ನಾಲ್ಕು ದಿನದ ಡೆಡ್‌ಲೈನ್‌ ಕೊಟ್ಟರೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಬಿಜೆಪಿಯಲ್ಲಿ ಎರಡು ಸುದ್ದಿಗೋಷ್ಠಿ ಹೊರತುಪಡಿಸಿ ಪಕ್ಷದ ಎಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಗ್ರಾಮ ಪಂಚಾಯಿತಿ ಎಲೆಕ್ಷನ್‌ ಇರುವುದರಿಂದ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದೆ. ಯಾಕೆ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬದಲಾಗಿದ್ದೀರಿ? ಕುಡಿಯುವ ನೀರಿನ ಬಗ್ಗೆ ಭಿಕ್ಷೆ ಕೇಳಬೇಕಾ ಎಂದು ತುಷಾರ್ ಗಿರಿನಾಥ್‌ಗೆ ಕೇಳಿದ್ದೇನೆ. ಇಂದು ಬೆಳಗ್ಗೆ ರಾಕೇಶ್ ಸಿಂಗ್‌ಗೂ ರೇಗಿದ್ದೇನೆ. ಇವತ್ತಿನವರೆಗೂ ಒಂದು ರೂಪಾಯಿ ಅನುದಾನ ಬಂದಿಲ್ಲ. ನನಗೊಬ್ಬನಿಗೇ ಅಲ್ಲ, ಎಲ್ಲ 28 ಶಾಸಕರಿಗೂ ಅನುದಾನ ಸಿಕ್ಕಿಲ್ಲ. ಎಲ್ಲರಿಗೂ ಕೊಡಿ ಎಂದು ಕೇಳಿದ್ದೇನೆ ಎಂದು ಎಸ್‌.ಟಿ. ಸೋಮಶೇಖರ್‌ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: Operation Hasta : ʼಆಪರೇಷನ್ ಹಸ್ತʼದ ಹಿಟ್‌ ಲಿಸ್ಟ್‌ನಲ್ಲಿ ಇರೋದು ಈ 14 ಜನ!

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಸೋಲಿಸಲೇಬೇಕು ಎಂದು ಕೆಲವರು ಮಾತನಾಡಿಕೊಂಡಿದ್ದಾರೆ. ಕ್ರಮ ಕೈಗೊಳ್ಳಲು ಹೇಳಿದ್ದೆ, ಆದರೆ ಕ್ರಮ ಆಗಿಲ್ಲ. ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಅವರ ಗಮನಕ್ಕೂ ತಂದಿದ್ದೆ. ನಮ್ಮನ್ನು ಸೋಲಿಸಲು ಬಂದವರಿಗೆ ಹಾರ ಹಾಕುತ್ತಿದ್ದಾರೆ ಎಂದು ತಿಳಿಸಿದ್ದೆ. 10 ದಿನದಲ್ಲಿ ನಮ್ಮದೇ ಫೋಟೊ, ಪಕ್ಷದ ಅಡಿಯಲ್ಲಿ ಹುಟ್ಟುಹಬ್ಬ ಮಾಡಿಕೊಂಡಿದ್ದಾರೆ. ಪಕ್ಷದ ಬ್ಯಾನರದ‌ನಲ್ಲಿ ಏಕೆ ಹುಟ್ಟುಹಬ್ಬ ಮಾಡಿದೀರಿ? ಅವರನ್ನು ಅಮಾನತು ಮಾಡಿ ಎಂದರೆ ಕೇಳಿಲ್ಲ, ಆದರೆ, ಏನಾದರೂ ಕ್ರಮ ಆಗಬೇಕಲ್ಲ? ತಿಳಿ ವಾತಾವರಣ ನಿರ್ಮಿಸಲು ಹೇಗೆ ಸಾಧ್ಯ? ನನ್ನ ವಿರೋಧ ಮಾಡಿಯೇ ನನ್ನ ಫೋಟೊ ಬಳಸಿಕೊಂಡು ಹುಟ್ಟುಹಬ್ಬ ಆಚರಣೆ ಮಾಡಿದ್ದು ತಪ್ಪು. ನಳಿನ್ ಕುಮಾರ್ ಕಟೀಲ್ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ಬೇರೆಯವರು ಕಾಂಗ್ರೆಸ್‌ ಸೇರುವ ಬಗ್ಗೆ ಮಾತನಾಡಿದ್ದು ಗೊತ್ತಿಲ್ಲ. ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ನಮಗೆ ಸ್ಥಳೀಯವಾಗಿ ಅಸಮಾಧಾನ ಇದೆ ಎಂದು ಎಸ್‌.ಟಿ. ಸೋಮಶೇಖರ್‌ ಸ್ಪಷ್ಟಪಡಿಸಿದರು.

ಬಿಜೆಪಿ‌ ರಾಜ್ಯಾಧ್ಯಕ್ಷ ಕಟೀಲ್‌ ಫೋನ್‌ ಮಾಡಿದ್ದರು. ಯಾವುದೇ ಡಿಸಿಷನ್ ಮಾಡಬೇಡಿ ಎಂದು ಹೇಳಿದರು. ನಾನು‌ ಏನೂ‌ ಡಿಸಿಷನ್ ಮಾಡಿಲ್ಲ, ಬನ್ನಿ‌ ಮಾತನಾಡುವೆ ಎಂದಿದ್ದೇನೆ. ಅದು ಬಿಟ್ಟು ಯಾವ ಡಿಸಿಷನ್ ಕೂಡಾ ಆಗಿಲ್ಲ ಎಂದು ಎಸ್‌.ಟಿ. ಸೋಮಶೇಖರ್‌ ಹೇಳಿದರು.

ಕಾದು ನೋಡುತ್ತೇನೆ – ಎಸ್‌.ಟಿ. ಸೋಮಶೇಖರ್‌

ಬೆಂಬಲಿಗರಿಗೆ ಇವತ್ತು ಮನವಿ ಮಾಡಿದ್ದೇನೆ. ನಾನು ಬಿಜೆಪಿ ಬಿಡುವ ಪ್ರಮೇಯ ಇಲ್ಲ ಅಂದಿದ್ದೇನೆ. ನಾಯಕರು ಎಲ್ಲ ಸರಿ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಕಾದು ನೋಡೋಣ ಎಂದು ಬೆಂಬಲಿಗರಿಗೆ ಹೇಳಿದ್ದೇನೆ ಎಂದು ಎಸ್‌.ಟಿ. ಸೋಮಶೇಖರ್‌ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: Operation Hasta : ಎಸ್‌.ಟಿ. ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ಫಿಕ್ಸ್? ಖಚಿತಪಡಿಸಿದ ಪರಮೇಶ್ವರ್!

ಕಾಂಗ್ರೆಸ್‌ಗೆ ಹೋಗಲ್ಲ

ನಿಮ್ಮ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವವರ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಎಸ್‌.ಟಿ. ಸೋಮಶೇಖರ್‌, ಎಲ್ಲರ ಮೇಲೆ ನಾವು ವಿಶ್ವಾಸ ಇಡಬೇಕಾಗುತ್ತದೆ. ಕಾಂಗ್ರೆಸ್‌ನಲ್ಲಿ ಇದ್ದಾಗ ಆ ಪಕ್ಷಕ್ಕೆ ಕೆಲಸ ಮಾಡಿದ್ದೇನೆ. ಈಗ ಬಿಜೆಪಿಯಲ್ಲಿದ್ದು, ಇಲ್ಲಿಯೂ ಕೆಲಸ ಮಾಡಿದ್ದೇನೆ. ನನ್ನ ಪ್ರಕಾರ ಯಾರೂ ಬೆಂಬಲಿಗರು ಕಾಂಗ್ರೆಸ್‌ಗೆ ಹೋಗಲ್ಲ ಎಂದು ಹೇಳಿದರು.

ಕಾಂಗೆಸ್‌ ಶಾಸಕ ಶ್ರೀನಿವಾಸ್‌ ಭೇಟಿ – ಬಿಜೆಪಿ ಸಭೆ ಕಾಕತಾಳೀಯ

ಬಿಜೆಪಿ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಭಾಗಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸ್‌.ಟಿ. ಸೋಮಶೇಖರ್‌, ಶ್ರೀನಿವಾಸ್ ನನ್ನ ಪಂಚಾಯತ್ ಅವನೇ. ಅವರ ಚಿಕ್ಕಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಮಸ್ಯೆ ಆಗಿದೆ. ಅವರ ಭೇಟಿ ಹಾಗೂ ಈ ಸಭೆ ಕಾಕತಾಳೀಯ. ನಾವು ಇಲ್ಲಿ ಸಭೆ ಸೇರೋದಕ್ಕೋ ಅವರು ಇಲ್ಲಿ ಬರುವುದಕ್ಕೂ ಕಾಕತಾಳೀಯ ಅಷ್ಟೇ ಎಂದು ಹೇಳಿದರು.

ಡಿಸಿಎಂ ಡಿ.ಕೆ‌. ಶಿವಕುಮಾರ್ ಅವರ ಬಗ್ಗೆ ನಾಲ್ಕು ಒಳ್ಳೆಯ ಮಾತು ಹೇಳಿದ್ದೇನೆ. ಅದು ತಪ್ಪಾ‌? ಸಿಎಂ ಸಿದ್ದರಾಮಯ್ಯ ಬಗ್ಗೆಯೂ ಮಾತನಾಡಿದ್ದೇನೆ ಅದು ತಪ್ಪಾ? ನಮಗೆ ಎಲ್ಲರ ಮೇಲೂ ವಿಶ್ವಾಸ ಇದೆ. ಬಿಜೆಪಿ ಬಂದ ಮೇಲೆ ಎಲ್ಲರ ಮೇಲೆ ವಿಶ್ವಾಸ ಇಟ್ಟಿದ್ದೇನೆ. ನನ್ನ ಪ್ರಕಾರ ನೂರಕ್ಕೆ ನೂರರಷ್ಟು ಯಾವ ಬೆಂಬಲಿಗರೂ ಕಾಂಗ್ರೆಸ್ ಹೋಗಲ್ಲ ಎಂದು ಎಸ್.ಟಿ. ಸೋಮಶೇಖರ್‌ ಹೇಳಿದರು.

ರಾಜ್ಯ, ಜಿಲ್ಲಾ ನಾಯಕರ ಮೇಲೆ ಅಸಮಾಧಾನ ಇಲ್ಲ

ನನಗೆ ರಾಜ್ಯ ನಾಯಕರ ಮೇಲೆ ಅಸಮಾಧಾನ ಇಲ್ಲ. ಜಿಲ್ಲಾ ನಾಯಕರ ಮೇಲೆ ಅಸಮಾಧಾನ ಇಲ್ಲ. ಸ್ಥಳೀಯರ ಸಮಸ್ಯೆ ಬಗೆಹರಿಸಿ ಎಂದಿದ್ದೇನೆ. ಕೆಲವು ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತಿರಬಹುದು. ಈ ಬಗ್ಗೆ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರೊಂದಿಗೆ ಮಾತನಾಡಿದ್ದೇನೆ. ಕಟೀಲ್ ಅವರು ಭರವಸೆ ಕೊಟ್ಟಿದ್ದಾರೆ. ಅಲ್ಲಿಯವರೆಗೆ ಸಮಾಧಾನವಾಗಿರಿ ಎಂದು ಬೆಂಬಲಿಗರಿಗೆ ಹೇಳಿದ್ದೇನೆ ಎಂದು ಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

ಪರಮೇಶ್ವರ್‌ ಈಗ ಯಾವ ಬೆಂಚ್‌ನಲ್ಲಿದ್ದಾರೆ?

ಪರಮೇಶ್ವರ್ ಅವರು ಕರೆಕ್ಟ್ ಆಗಿ ಇದ್ದಿದ್ದರೆ ಅವರಿಗೆ ಫಸ್ಟ್ ಬೆಂಚ್‌ ಸಿಗುತ್ತಿತ್ತು. ಆದರೆ, ಅವರೇ ಈಗ ಎಲ್ಲಿದ್ದಾರೆ? ಅವರು ಆಗ ಉಪ ಮುಖ್ಯಮಂತ್ರಿ ಆಗಿದ್ದವರು. ಈಗ ಎಲ್ಲಿದ್ದಾರೆ? ನಾನು ನೋಡಿ ಇಲ್ಲಿ ಆರಾಮಾಗಿ ಆಗಿದ್ದೇನೆ. ಹಿಂದೆ, ಮುಂದೆ ಎಲ್ಲ ನಾನೇ ಎಂದು ಎಸ್‌.ಟಿ. ಸೋಮಶೇಖರ್‌ ಹೇಳಿದರು.

ಸೋಮಶೇಖರ್‌ ಸಮಯ ಕೇಳಿದ್ದಾರೆ. : ಕಾಂಗ್ರೆಸ್ ಶಾಸಕ ಶ್ರೀನಿವಾಸ್

ಎಸ್.ಟಿ. ಸೋಮಶೇಖರ್ ಅವರು ಸ್ವಲ್ಪ ಕಾಲ ಸಮಯ ಕೇಳಿದ್ದಾರೆ. ಇವರು ಮತ್ತು ಇವರ ಬೆಂಬಲಿಗರನ್ನು ಕಾಂಗ್ರೆಸ್‌ಗೆ ಕರೆ ತರುವಂತೆ ಡಿ.ಕೆ. ಶಿವಕುಮಾರ್‌ ಅವರು ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ಅವರೂ ಒಬ್ಬರು ಶಾಸಕರು. ಶಾಸಕರು ನಮ್ಮಲ್ಲಿ ಬರುತ್ತಾರೆ ಎಂದಾದರೆ ಸಿಎಂ ಸಿದ್ದರಾಮಯ್ಯ ಅವರೂ ಒಪ್ಪಿಕೊಳ್ಳತ್ತಾರೆ. ಆಗ ಸಿದ್ದರಾಮಯ್ಯ ಸೇರಿಸಿಕೊಳ್ಳಲ್ಲ ಅಂದಿದ್ದರು. ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಒಪ್ಪಿಕೊಳ್ಳುತ್ತಾರೆ ಎಂದು ಶ್ರೀನಿವಾಸ್‌ ಹೇಳದಿರು.

ಬೆಂಬಲಿಗರೇ ಬರ್ತೀವಿ ಅಂದ್ಮೇಲೆ ಸೋಮಶೇಖರ್ ಬಿಜೆಪಿಯಲ್ಲಿ ಇರಲು ಆಗುತ್ತದೆಯೇ? ಸೋಮಶೇಖರ್ ಸಹ ಕಾಂಗ್ರೆಸ್‌ಗೆ ಬರೋ ನಿರೀಕ್ಷೆ ಇದೆ. ಸ್ಥಳೀಯವಾಗಿ ಇಲ್ಲಿ ಸೋಮಶೇಖರ್ ಮತ್ತು ಬೆಂಬಲಿಗರ ಕತ್ತು ಕುಯ್ಯುವ ಕೆಲಸ ಆಗ್ತಿದೆ. ಸೋಮಶೇಖರ್ ಬಿಜೆಪಿಯಲ್ಲಿ ಗೆದ್ದಿದ್ದು ಅವರ ಸ್ವಂತ ಬಲದಿಂದ. ಆದರೆ, ಅವರನ್ನು ಸೋಲಿಸಲು ಸ್ಥಳೀಯ ಬಿಜೆಪಿಯವ್ರು ಜೆಡಿಎಸ್ ಜತೆ ಕೈ ಜೋಡಿಸಿದ್ದರು ಎಂದು ಶ್ರೀನಿವಾಸ್‌ ಹೇಳಿದರು.

ಇದನ್ನೂ ಓದಿ: Kaveri River : ಡಿಕೆಶಿ ಕರ್ನಾಟಕಕ್ಕೆ ಮಂತ್ರಿಯೋ, ತಮಿಳುನಾಡಿಗೋ? ಸರ್ವಪಕ್ಷ ಸಭೆ ಕರೆಯಲು ಎಚ್‌ಡಿಕೆ ಆಗ್ರಹ

ಮಾಜಿ ಕಾರ್ಪೊರೇಟರ್, ಎಸ್‌ಟಿಎಸ್‌ ಆಪ್ತ ಚಿಕ್ಕರಾಜು ಮಾಧ್ಯಮದವರೊಂದಿಗೆ ಮಾತನಾಡಿ, ಎಸ್‌.ಟಿ. ಸೋಮಶೇಖರ್ ಅವರು ಮೂರ್ನಾಲ್ಕು ದಿನ ಟೈಂ ಕೊಡಿ ಎಂದು ಕೇಳಿದ್ದಾರೆ. ಸ್ಥಳೀಯ ಬಿಜೆಪಿಯವರು ಬೆಳೆಯಲು ಬಿಡುತ್ತಿಲ್ಲ. ನೀವು ಗೆಲ್ಲಲೂ ಅವರು ಕೆಲಸ ಮಾಡಲ್ಲ. ಕಾಂಗ್ರೆಸ್ ಪಕ್ಷಕ್ಕೆ ಹೋಗೋಣ ಎಂದಿದ್ದೇವೆ. ಎರಡು ದಿನ ಸುಮ್ಮನಿರಿ‌ ಎಂದಿದ್ದಾರೆ. ಬಿಜೆಪಿ ಪಕ್ಷದ ವರಿಷ್ಠರ ಜತೆ ಮಾತನಾಡುವೆ ಎಂದಿದ್ದಾರೆ. ಸರಿಪಡಿಸುವೆ ಎಂದು ಅವರು ಭರವಸೆ ನೀಡಿದ್ದಾರಂತೆ. ಮೂರ್ನಾಲ್ಕು ದಿನದಲ್ಲಿ‌ ಸೋಮಶೇಖರ್ ತೀರ್ಮಾನ ತಿಳಿಸದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

Exit mobile version