Site icon Vistara News

Power Point with HPK : 2.5 ವರ್ಷ ಅಲ್ಲ, ಈಗಲೇ ಅಧಿಕಾರ ಬಿಟ್ಟುಕೊಡುವೆ;‌ ಲಂಚ ಕೊಡೋದನ್ನು ಜನರೇ ಬಿಡಲೆಂದ ಜಾರ್ಜ್!

KJ George in Power Point With HPK

ಬೆಂಗಳೂರು: ಎರಡೂವರೆ ವರ್ಷಕ್ಕೆ ಅಧಿಕಾರವನ್ನು ಬಿಟ್ಟುಕೊಡಬೇಕು ಎಂದು ಎಲ್ಲಿಯೂ ನಿರ್ಧಾರ ಆಗಿಲ್ಲ. ಈ ತೀರ್ಮಾನದ ಬಗ್ಗೆ ನನಗೆ ಗೊತ್ತಿಲ್ಲ. ಒಂದು ವೇಳೆ ನನಗೆ ಎರಡೂವರೆ ವರ್ಷದ ನಂತರವಲ್ಲ. ನಾಳೆಯೇ ಅಧಿಕಾರವನ್ನು ಬಿಟ್ಟುಕೊಡು ಎಂದರೂ ನಾನು ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದು ಬೆಂಗಳೂರಿನ ಸರ್ವಜ್ಞ ನಗರ ಶಾಸಕ, ಇಂಧನ ಸಚಿವ ಕೆ.ಜೆ. ಜಾರ್ಜ್ (KJ George) ಅವರು ಪವರ್‌ ಪಾಯಿಂಟ್‌ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್‌ ಪಾಯಿಂಟ್‌ ವಿತ್‌ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ‌ ಇಂಧನ ಸಚಿವ ಕೆ.ಜೆ. ಜಾರ್ಜ್, ಸಿಎಂ ಸಿದ್ದರಾಮಯ್ಯ (CM Siddaramaiah) ಸಹಿತ ಹೈಕಮಾಂಡ್‌ ರಾಜೀನಾಮೆ ಕೊಡಲು ಸೂಚಿಸಿದ ನಂತರ ಒಂದು ಕ್ಷಣವೂ ನಾನು ಅಧಿಕಾರದಲ್ಲಿ ಇರುವುದಿಲ್ಲ. ನಾನು ಅಧಿಕಾರಕ್ಕೋಸ್ಕರ ಇರುವವನಲ್ಲ ಎಂದು ಸ್ಪಷ್ಟಪಡಿಸಿದರು. ‌

ನನ್ನ ಚುನಾವಣಾ ಸ್ಪರ್ಧೆಯನ್ನು ಪಕ್ಷ ತೀರ್ಮಾನ ಮಾಡುತ್ತೆ

ನನಗೆ ಈ ಚುನಾವಣೆಯೇ ಬೇಡ ಎಂದು ಇದ್ದೆ. ಆದರೆ, ಪಕ್ಷ ನನ್ನನ್ನು ಈ ಬಾರಿಯೂ ಚುನಾವಣೆಯಲ್ಲಿ ನಿಲ್ಲುವಂತೆ ಸೂಚನೆ ನೀಡಿತ್ತು. ಹಾಗಾಗಿ ನಾನು ಸ್ಪರ್ಧೆ ಮಾಡಿದೆ. ಈ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಇನ್ನು ಉತ್ತರಾಧಿಕಾರಿ ನೇಮಿಸುವ ಪ್ರಶ್ನೆ ಬರುವುದಿಲ್ಲ. ಎಲ್ಲವನ್ನೂ ಪಕ್ಷವೇ ನಿರ್ಧಾರ ಮಾಡುತ್ತದೆ ಎಂದು ಕೆ.ಜೆ. ಜಾರ್ಜ್‌ ಸ್ಪಷ್ಟಪಡಿಸಿದರು.

ಆಗಿನ ಬಿಜೆಪಿ ಸರ್ಕಾರದ ಮೇಲೆ 40 ಪರ್ಸೆಂಟ್‌ ಆಪಾದನೆ ಮಾಡಿದ್ದು ನಾವಲ್ಲ. ಗುತ್ತಿಗೆದಾರರ ಸಂಘದವರು ಮಾಡಿರುವ ಆರೋಪ ಆಗಿದೆ. ಆಗ ಅವರೇ ತನಿಖೆ ನಡೆಸಿದ್ದರೆ ಎಲ್ಲವೂ ಮುಗಿದು ಹೋಗುತ್ತಿತ್ತು. ಆ ಕೆಲಸವನ್ನು ಅವರು ಅಂದು ಮಾಡಿಲ್ಲ. ಇಂತಹ ಆರೋಪ ಮಾಧ್ಯಮದ ಹಾಗೂ ಜನರ ಮುಂದೆ ಬಂದಿದ್ದರಿಂದ ಒಂದು ತನಿಖೆ ನಡೆಸಿ, ಜನರಿಗೆ ಉತ್ತರ ಕೊಟ್ಟರೆ ಸಾಕಿತ್ತು ಎಂದು ಕೆ.ಜೆ. ಜಾರ್ಜ್‌ ಹೇಳಿದರು.

ಇದನ್ನೂ ಓದಿ: Power Point with HPK : ಶಾಸಕರಿಗೆ ಹೆಚ್ಚಿನ ಅನುದಾನ ಬೇಕಿದ್ದರೆ ಮುಂದಿನ ಬಜೆಟ್‌ವರೆಗೆ ಕಾಯಬೇಕೆಂದ ಜಾರ್ಜ್!

ಜನರೇ ಲಂಚ ಕೊಡುವುದನ್ನು ಬಿಡಬೇಕು: ಕೆ.ಜೆ. ಜಾರ್ಜ್

ಕೊಡುವವರು ಇದ್ದರಷ್ಟೇ ತೆಗೆದುಕೊಳ್ಳಲು ಆಗುತ್ತದೆ. ಯಾರೂ ಸಹ ಲಂಚ ಕೊಡಬೇಡಿ. ಆಗ ಭ್ರಷ್ಟಾಚಾರ ನಿರ್ಮೂಲನೆ ಆಗುತ್ತದೆ. ಆದರೆ, ಇಂದು ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಒಂದೊಂದು ಪೋಸ್ಟ್‌ಗೆ ಇಂತಿಷ್ಟು ಎಂದು ನಿಗದಿಯಾಗಿದೆ. ಈಗಲೂ ಹೆಚ್ಚಿನ ಅಧಿಕಾರಿಗಳು ಒಳ್ಳೆಯವರಿದ್ದಾರೆ. ಅವರನ್ನು ಎಲ್ಲಿಗೆ ವರ್ಗಾವಣೆ ಮಾಡಿದರೂ ಹೋಗಿ ಕೆಲಸ ಮಾಡುತ್ತಾರೆ. ಆದರೆ, ಈ ದುಡ್ಡು ಕೊಡುವವರು ಯಾರು? ಭ್ರಷ್ಟರು ಮಾತ್ರ ಅಲ್ಲವೇ? ಅವರು ಮನೆಯಿಂದ ದುಡ್ಡು ಕೊಡುವುದಿಲ್ಲ. ಅವರು ಕೊಡುವ ದುಡ್ಡು ಜನರಿಂದಲೇ ಪಡೆದುಕೊಳ್ಳುತ್ತಾರೆ. ಆದರೆ, ಹೀಗೆ ಲಂಚ ಕೊಡದಿರಲು ಜನ ತೀರ್ಮಾನ ಮಾಡಬೇಕು. ಮುಂದೆ ಇದೆಲ್ಲವೂ ಸರಿಯಾಗುತ್ತದೆ. ನಾನು ಇಲ್ಲಿಯವರೆಗೆ ಸಾಕಷ್ಟು ಬಾರಿ ಸಚಿವನಾಗಿದ್ದೇನೆ. ಆದರೆ, ಒಂದು ಬಾರಿಯೂ ಒಂದು ವರ್ಗಾವಣೆಗೂ ಒಂದು ರೂಪಾಯಿಯನ್ನು ಸಹ ಮುಟ್ಟಿಲ್ಲ ಎಂದು ಕೆ.ಜೆ. ಜಾರ್ಜ್‌ ಹೇಳಿದರು.

Exit mobile version