ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವ ನಾರಾಯಣ (R Dhruvanarayana) ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎನ್ನುವುದು ನಿಜ. ಆದರೆ, ಅದೊಂದೇ ಕಾರಣವಲ್ಲ ಎಂದು ವೈದ್ಯಕೀಯ ತಪಾಸಣೆ ಬಳಿಕ ತಿಳಿದುಬಂದಿದೆ. ಧ್ರುವನಾರಾಯಣ ಅವರಿಗೆ ಹೊಟ್ಟೆಯಲ್ಲಿ ಅಲ್ಸರ್ ಇತ್ತು, ಅದು ಒಡೆದು ರಕ್ತಸ್ರಾವವಾಗಿದ್ದರಿಂದ ಹೃದಯ ಮತ್ತು ಶ್ವಾಸಕೋಶ ಸ್ತಂಭನದಿಂದ ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಹಾಗಿದ್ದರೆ ಬೆಳಗ್ಗೆ ಏನೇನಾಗಿತ್ತು? ಹೇಗೆಲ್ಲ ನೋವು ಅನುಭವಿಸಿದರು?
ಶನಿವಾರ ಬೆಳಗ್ಗೆ 6.50ರ ಸುಮಾರಿಗೆ ಮನೆಯ ಟೆರೇಸ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ಧ್ರುವ ನಾರಾಯಣ್ ಅವರಿಗೆ ಅಲ್ಲೇ ರಕ್ತ ವಾಂತಿಯಾಗಿತ್ತು. ಅವರು ಮಹಡಿ ಮೇಲಿಂದಲೇ ಕಾರು ಚಾಲಕನನ್ನು ಕರೆದಿದ್ದರು. ಚಾಲಕ ಹೋಗಿ ನೋಡುವಷ್ಟರಲ್ಲಿ ಅವರು ವಾಂತಿ ಮತ್ತು ರಕ್ತದ ಮಡುವಿನಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ಫಲ ಸಿಗಲಿಲ್ಲ.
ಅಸ್ವಸ್ಥರಾದ ಅವರನ್ನು ಡಿಎಂಆರ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ತುರ್ತು ನಿಗಾ ಘಟಕದಲ್ಲಿ 21 ಸುತ್ತು ಹೃದಯ ಪುನಶ್ಚೇತನ ಚಿಕಿತ್ಸೆ ನೀಡಲಾಯಿತು. ಆದರೂ ಶ್ವಾಸ ಹಾಗೂ ಹೃದಯ ಬಡಿತ ಚೇತರಿಸಲಿಲ್ಲ. ಈ ನಡುವೆ ಒಂದೇ ಸಮನೆ ರಕ್ತ ವಾಂತಿ ಆಗುತ್ತಲೇ ಇತ್ತು. ಅಲ್ಸರ್ ಒಡೆದು ತೀವ್ರ ರಕ್ತಸ್ರಾವ (ಗ್ಯಾಸ್ಟ್ರೋ ಇಂಟರ್‌ಸ್ಟೈನಲ್ ಬ್ಲೀಡಿಂಗ್) ಆಗುತ್ತಿದುದೇ ಇದಕ್ಕೆ ಕಾರಣ.
ಹೀಗೆ ದೇಹದಲ್ಲಿ ರಕ್ತಹೀನತೆ ಸಂಭವಿಸಿ ಹೃದಯಾಘಾತ, ಶ್ವಾಸಕೋಶದ ಪ್ರಕ್ರಿಯೆ ಸ್ಥಗಿತವಾಗಿತ್ತು. ಕೊನೆಗೆ ‘ಹೃದಯಾಘಾತದಿಂದ (ಕಾರ್ಡಿಯೊ ಪಲ್ಮನರಿ ಅರೆಸ್ಟ್) ಮೃತಪಟ್ಟಿದ್ದಾರೆ’ ಎಂದು ಬೆಳಿಗ್ಗೆ 8.26ಕ್ಕೆ ಘೋಷಿಸಲಾಯಿತು.
ಅಲ್ಸರ್ ಇರುವುದು ಗೊತ್ತಾಗಿರಲಿಲ್ಲ
ಧ್ರುವನಾರಾಯಣ್ ಅವರು ಆರೋಗ್ಯವಾಗಿಯೇ ಇದ್ದರು. ಅವರಿಗೆ ಹೃದಯ ಸಂಬಂಧಿ ಅಥವಾ ಇನ್ಯಾವುದೇ ರೋಗಗಳು ಯಾವ ಹಂತದಲ್ಲೂ ಗೊತ್ತಾಗಿರಲಿಲ್ಲ. ಸಣ್ಣಮಟ್ಟಿಗೆ ಮಧುಮೇಹ ಇತ್ತು ಎಂದು ಅವರ ಕುಟುಂಬದ ವೈದ್ಯರು ಅಂತಿಮವಾಗಿ ಚಿಕಿತ್ಸೆ ನೀಡಿದ ಡಾ. ಮಂಜುನಾಥ್ ಅವರಿಗೆ ಮಾಹಿತಿ ನೀಡಿದ್ದರು. ಈಗ ಪ್ರಾಣಾಂತಿಕವಾದ ಅಲ್ಸರ್ ಸಮಸ್ಯೆ ಅವರಿಗೆ ಇದ್ದ ಬಗ್ಗೆ ಯಾವ ಸೂಚನೆಯೂ ಇರಲಿಲ್ಲ.
ನಿನ್ನೆಯೇ ಹೋಗಿದ್ದರೆ ಬದುಕುತ್ತಿದ್ದರಾ?
ನಿಜವೆಂದರೆ ಶುಕ್ರವಾರ ರಾತ್ರಿಯೇ ಧ್ರುವ ನಾರಾಯಣ ಅವರಿಗೆ ಸಣ್ಣ ಮಟ್ಟಿಗಿನ ಅನಾರೋಗ್ಯ ಇತ್ತು. ರಾತ್ರಿ ಹತ್ತು ಗಂಟೆಯ ಹೊತ್ತಿಗೆ ಅವರು ತಮ್ಮ ಕುಟುಂಬದ ವೈದ್ಯರಾದ ಡಾ. ಸದಾನಂದ ಅವರಿಗೆ ಫೋನ್ ಮಾಡಿ ಸ್ವಲ್ಪ ಅನಾರೋಗ್ಯ ಇದೆ ಎಂದಿದ್ದರಂತೆ. ಆಗ ವೈದ್ಯರು ಈಗಲೇ ಬನ್ನಿ ತಪಾಸಣೆ ಮಾಡೋಣ ಎಂದಿದ್ದರಂತೆ. ಆದರೆ, ಧ್ರುವ ನಾರಾಯಣ ಅವರು ನಾಳೆ ಬರುತ್ತೇನೆ ಎಂದಿದ್ದರಂತೆ. ಶುಕ್ರವಾರ ಇಡೀ ದಿನ ಪ್ರವಾಸ ಮಾಡಿ ದಣಿದಿದ್ದರು ಧ್ರುವನಾರಾಯಣ ಅವರು. ಒಂದೊಮ್ಮೆ ಅವರು ರಾತ್ರಿಯೇ ಕುಟುಂಬ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದಿದ್ದರೆ, ಏನಾದರೂ ಗಂಭೀರ ಸಮಸ್ಯೆ ಪತ್ತೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದರೆ ಬದುಕುಳಿಯುತ್ತಿದ್ದರಾ? ಗೊತ್ತಿಲ್ಲ. ಅಂತೂ 62ನೇ ವಯಸ್ಸಿಗೆ ಧ್ರುವ ನಾರಾಯಣ ನಿರ್ಗಮಿಸಿದ್ದಾರೆ.
ಇದನ್ನೂ ಓದಿ : R Dhruvanarayana : ಸಾವಿನ ಬೆನ್ನಲ್ಲೇ ಪಾಲಿಟಿಕ್ಸ್, ಪುತ್ರ ದರ್ಶನ್‌ಗೇ ಟಿಕೆಟ್ ನೀಡಲು ಅಭಿಮಾನಿಗಳ ಪಟ್ಟು