ಚಿತ್ರದುರ್ಗ: “6 ವರ್ಷಗಳಿಂದ ಮಠದ ಹಾಸ್ಟೆಲ್ ವಾರ್ಡನ್ ಆಗಿದ್ದೇನೆ. ಮುರುಘಾಶ್ರೀ(Murugha Seer) ಕೊಠಡಿಗೆ ಮಕ್ಕಳನ್ನು ಕಳಿಸಲು ಟೈಂ ಟೇಬಲ್ ಮಾಡಿಲ್ಲ. ಮುರುಘಾಶ್ರೀ ಖಾಸಗಿ ಕೊಠಡಿಗೆ ಮಕ್ಕಳನ್ನು ಕಳಿಸಿಲ್ಲ. ಮಕ್ಕಳನ್ನು ನಾನು ಹೊಡೆದಿಲ್ಲ, ತಪ್ಪು ಮಾಡಿದಾಗ ಬುದ್ಧಿವಾದ ಹೇಳಿದ್ದೇನೆ, ಎರಡೇಟು ಹೊಡೆದಿದ್ದೇನೆ. ದೂರುದಾರ ಅಡುಗೆ ಸಹಾಯಕಿ ಹಾಗೂ ಅವರ ಇಬ್ಬರು ಮಕ್ಕಳು ನನಗೆ ಗೊತ್ತು. ಆದರೆ, ಸಂತ್ರಸ್ತ ಮಕ್ಕಳು ಸುಳ್ಳು ಆರೋಪ ಮಾಡಿದ್ದಾರೆ”. ಇದು ಮುರುಘಾ ಶ್ರೀ ವಿರುದ್ಧದ ೨ನೇ ಲೈಂಗಿಕ ದೌರ್ಜನ್ಯ ಪ್ರಕರಣದ ಎ2 ಆರೋಪಿ ವಾರ್ಡನ್ ರಶ್ಮಿ ನೀಡಿರುವ ಹೇಳಿಕೆಯಾಗಿದ್ದು, ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಮಠದ ಹಾಲ್‌ನಲ್ಲಿ ಭಕ್ತಾದಿಗಳು ಮತ್ತು ಮಕ್ಕಳಿಗೆ ಹಣ್ಣು, ಡ್ರೈಫ್ರೂಟ್ಸ್ ಅನ್ನು ಶ್ರೀಗಳು ನೀಡುತ್ತಿದ್ದರು. ಸ್ವಾಮೀಜಿ ನೀಡುವ ಹಣ್ಣಿನಲ್ಲಿ ಮತ್ತು ಬರುವ ಔಷಧಿ ಇರುತ್ತಿತ್ತು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಸ್ವಾಮೀಜಿ ಖಾಸಗಿ ಕೊಠಡಿಯನ್ನೇ ನೋಡಿಲ್ಲ. ಮಕ್ಕಳಿಗೆ ಹೊಡೆಯುವ ಸ್ಕೇಲ್ ನನ್ನ ರೂಮಿನಲ್ಲಿದೆ ಎಂದು ರಶ್ಮಿ ನೀಡಿರುವ ಹೇಳಿಕೆ ದಾಖಲಾಗಿದೆ.
ರಶ್ಮಿ ಹೇಳಿಕೆಯ ವಿಸ್ತೃತ ರೂಪ ಇಲ್ಲಿದೆ
ನಾನು ಈಗ 6 ವರ್ಷಗಳಿಂದ ಚಿತ್ರದುರ್ಗದ ಮುರುಘಮಠದ ಅಕ್ಕಮಹಾದೇವಿ ವಸತಿನಿಲಯದಲಿ ವಾರ್ಡನ್ ಆಗಿ ಕೆಲಸ ಮಾಡಿಕೊಂಡಿರುತ್ತೇನೆ. ಡಾ. ಶಿವಮೂರ್ತಿ ಮುರುಘಾ ಶರಣರು ನನಗೆ ಗೊತ್ತು. ಅವರು ಮಠದ ಪೀಠಾಧ್ಯಕ್ಷರಾಗಿದ್ದಾರೆ. ಮುರುಘಾ ಶರಣರ ಮೇಲೆ ಕೇಸು ದಾಖಲಾಗಿರುವ ವಿಚಾರ ನನಗೆ ಗೊತ್ತು. ಇಬ್ಬರು ದೂರು ಕೊಟ್ಟಿದರು. ಮಠದಲ್ಲಿರುವ ಅಕ್ಕಮಹಾದೇವಿ ಹಾಸ್ಟೆಲ್‌ನಲ್ಲಿ ವಾರ್ಡನ್‌ಗೆ ಎಂದು ಒಂದು ರೂಂ ಇರುತ್ತದೆ. ನಾನು ಅದೇ ರೂಂನಲ್ಲಿ ವಾಸ ಮಾಡುವುದಿಲ್ಲ. ಸಂಜೆ ಮನೆಗೆ ಹೋಗುತ್ತೇನೆ. ಮನೆಯಲ್ಲಿ ನಾನು ಮತ್ತು ನನ್ನ ತಾಯಿ ವಾಸವಿರುತ್ತೇವೆ. ನಾನು ಡಾ. ಶಿವಮೂರ್ತಿ ಮುರುಘಾ ಶರಣರ ಖಾಸಗಿ ಕೊಠಡಿಗೆ ಹೋಗುತ್ತಿರಲಿಲ್ಲ. ನಾನು ಶಿವಮೂರ್ತಿ ಮರುಘಾ ಶರಣ ಕಳುಹಿಸಿಕೊಡುತ್ತಿರಲಿಲ್ಲ, ಮಕ್ಕಳನ್ನು ಅವರ ಬಳಿಗೆ ಕಳುಹಿಸಲು ನಾನು ಯಾವುದೇ ಟೈಂ ಟೇಬಲ್ ಮಾಡಿರಲಿಲ್ಲ. ಹಾಸ್ಟೆಲ್‌ನಲ್ಲಿದ್ದ ಮಕ್ಕಳನ್ನು ನಾನು ಹೊಡೆಯುತ್ತಿರಲಿಲ್ಲ, ಮಕ್ಕಳು ಯಾವುದಾದರೂ ತಪ್ಪು ಮಾಡಿದರೆ ಬುದ್ಧಿ ಮಾತು ಹೇಳಿ ಒಂದು ಎರಡು ಏಟು ಹೊಡೆಯುತ್ತಿದ್ದೆ. ಸಣ್ಣ ಕಟ್ಟಿಗೆಯ ಸ್ಕೇಲ್‌ನಿಂದ ಹೊಡೆಯುತ್ತಿದ್ದೆ. ನಾನು ಹೊಡೆಯುತ್ತಿದೆ ಎಂಬ ಬಗ್ಗೆ ಯಾವುದೇ ಮಕ್ಕಳು ಕಂಪ್ಲೇಂಟ್ ಮಾಡಿರಲಿಲ್ಲ ಎಂದು ರಶ್ಮಿ ಹೇಳಿಕೆ ನೀಡಿದ್ದಾರೆ.
ಡಾ. ಶಿವಮೂರ್ತಿ ಮುರುಘಾ ಶರಣರ ಖಾಸಗಿ ಕೊಠಡಿಗೆ ನಾನು ಯಾರನ್ನೂ ಕಳುಹಿಸಿಲ್ಲ. ಮುರುಘಾ ಮಠದಲ್ಲಿ ದಾಸೋಹದಲ್ಲಿ ಅಡುಗೆ ಸಹಾಯಕಿಯು ನನಗೆ ಗೊತ್ತು, ಅವರ ಇಬ್ಬರು ಮಕ್ಕಳು ಸಹ ನನಗೆ ಗೊತ್ತು. ಆ ಇಬ್ಬರೂ ಮಕ್ಕಳು ನಮ್ಮ ಹಾಸ್ಟೆಲ್‌ನಲ್ಲಿ ಇದ್ದರು. ನಾನು ಜಾಬ್‌ಗೆ ಸೇರುವ ಮೊದಲಿನಿಂದಲೂ ಸಹ ಅವರು ಹಾಸ್ಟೆಲ್‌ನಲ್ಲಿ ಇದ್ದರು. ಅವರು ಬಸವ ಮಕ್ಕಳು, ಅವರು 5 ಅಥವಾ 6ನೇ ರೂಂನಲ್ಲಿ ಇದಿರಬಹುದು, ಅವರ ಜತೆಯಲ್ಲಿ ಇತರೆ ಮಕ್ಕಳನ್ನು ಹಾಕಿರುತ್ತೇವೆ. ಆದರೆ, ಅವರು ಯಾರು ಎಂಬುದು ನನಗೆ ಸರಿಯಾಗಿ ನೆನಪು ಇಲ್ಲ. ಇನ್ನು ಈಗ ಸಂತ್ರಸ್ತೆಯಾಗಿರುವ ಬಾಲಕಿಯರಿಬ್ಬರಿಗೆ ನಾನು ಹೊಡೆಯುತ್ತಿರಲಿಲ್ಲ. ಅವರಿಗೆ ಅಷ್ಟೇ ಅಲ್ಲದೆ ನಾನು ಯಾವ ಮಕ್ಕಳಿಗೂ ಸಹ ಹೊಡೆಯುತ್ತಿರಲಿಲ್ಲ. ಇನ್ನು ಇಬ್ಬರು ಬಾಲಕಿಯರ ತಾಯಿಯೂ ಮಠದಲ್ಲೇ ಇರುತ್ತಿದ್ದರು. ಅವರಿಗೆ ಒಂದು ರೂಂ ಕೊಟ್ಟಿದ್ದರು. ಅವರ ಇಬ್ಬರು ಮಕ್ಕಳನ್ನು ಸ್ವಾಮೀಜಿಯವರ ಸೇವೆ ಮಾಡಲು ನಾನು ಕಳುಹಿಸಿಕೊಟ್ಟಿಲ್ಲ. ಅವರು ಸುಳ್ಳು ಹೇಳಿದ್ದಾರೆ. ಹಾಗೇ ಮತ್ತಿಬ್ಬರು ಬಾಲಕಿಯರನ್ನೂ ನಾನು ಸ್ವಾಮೀಜಿ ಕೊಠಡಿಗೆ ಕಳುಹಿಸಿಕೊಟ್ಟಿಲ್ಲ ಎಂದು ರಶ್ಮಿ ಹೇಳಿದ್ದಾರೆ.
ಪರಮಶಿವಯ್ಯ ರವರು ನನಗೆ ಗೊತ್ತು. ಮಠದಲ್ಲಿ ಸೆಕ್ರೆಟರಿ ಆಗಿರುತ್ತಾರೆ. ಸ್ವಾಮೀಜಿ ಲೈಂಗಿಕ ದೌರ್ಜನ್ಯ ಮಾಡಿದ ಬಾಲಕಿಯರನ್ನು ಪರಮಶಿವಯ್ಯ ಆಸ್ಪತ್ರೆಗೆ ಕಳುಹಿಸಿಕೊಡುತ್ತಿದ್ದರ ಬಗ್ಗೆ ನನಗೆ ಗೊತ್ತಿಲ್ಲ. ಲಾಯರ್ ಗಂಗಾಧರಯ್ಯ ನನಗೆ ಗೊತ್ತು. ಅವರು ಲಾಯರ್ ಆಗಿ ಮಠದಲ್ಲಿ ಇರುತ್ತಾರೆ. ಗಂಗಾಧರಯ, ಸ್ವಾಮೀಜಿ ಲೈಂಗಿಕ ದೌರ್ಜನ್ಯ ಮಾಡಿದ ಬಾಲಕಿಯರಿಗೆ ಹೆದರಿಸುವುದು, ಬೆದರಿಸುವುದು ಮಾಡುತ್ತಿರುವ ಬಗ್ಗೆಯೂ ನನಗೆ ಗೊತ್ತಿಲ್ಲ. ಬಸವಾದಿತ್ಯ ನನಗೆ ಗೊತ್ತು, ಅವರು ಮಠದಲ್ಲಿ ಮರಿಸ್ವಾಮಿ ಆಗಿದ್ದಾರೆ. ಬಸವಾದಿತ್ಯ ಯಾವಾಗ ಮರಿಸ್ವಾಮಿ ಆದರು ಎಂಬುದೂ ನನಗೆ ಗೊತ್ತಿಲ್ಲ. ನಂತರ ಬಸವಾದಿತ್ಯರವರಿಗೆ ಮರಿಸ್ಮಾಮಿಯನ್ನಾಗಿ ಸ್ಮಾಮೀಜಿಯವರು ಮಾಡಿದ್ದಾರೆ ಅಂತಾ ಗೊತ್ತಾಯಿತು. ಬಸವಾದಿತ್ಯ ಮರಿಸ್ವಾಮಿಯಾಗುವ ಮುಂಚೆ ಎಲ್ಲಿದ್ದರೂ ಎಂದೂ ನನಗೆ ಗೊತ್ತಿಲ್ಲ. ಡಾ. ಮುರುಘಾ ಶರಣರು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದಾಗ ಬಸವಾದಿತ್ಯ ಅವರಿಗೆ ಸಹಾಯ ಮಾಡುತ್ತಿದ್ದಾರಾ ಎಂಬುದೂ ನನಗೆ ಗೊತ್ತಿಲ್ಲ. ನನಗೆ ಅವರ ಪರಿಚಯವಿಲ್ಲ ಎಂದು ರಶ್ಮಿ ಹೇಳಿದ್ದಾರೆ.
ಮಹಾಲಿಂಗ ಎಂದರೆ ಗೊತ್ತು. ಅವರು ಸ್ವಾಮೀಜಿ ಜತೆ ಅಟೆಂಡರ್ ಕೆಲಸ ಮಾಡುತ್ತಿದ್ದರು. ಮುರುಘಾ ಶರಣರು ಬಾಲಕಿಯರಿಗೆ ಲೈಂಗಿಕ ದೌರ್ಜನ್ಯ ಮಾಡುವಾಗ ಮಹಾಲಿಂಗ ಸಹಕರಿಸಿದರಾ ಎಂಬುದು ನನಗೆ ಗೊತ್ತಿಲ್ಲ. ಕರಿಬಸಪ್ಪ ಎಂದರೆ ಯಾರು ಎಂದು ಗೊತ್ತಿಲ್ಲ. ಇನ್ನು ಅವರು ಶ್ರೀಗಳಿಗೆ ಸಹಕರಿಸಿದ್ದರಾ ಎಂಬುದೂ ತಿಳಿದಿಲ್ಲ. ಸ್ವಾಮೀಜಿ ಚಾಕೋಕೆಟ್ ಮತ್ತು ಹಣ್ಣುಗಳನ್ನು ಹಾಲ್‌ನಲ್ಲಿ ಬಂದ ಭಕ್ತಾದಿಗಳಿಗೆ, ಮಕ್ಕಳಿಗೆ ಮತ್ತು ನಮ್ಮೆಲ್ಲರನ್ನೂ ಕರೆಸಿ ಕೊಡುತ್ತಿದ್ದರು. ಚಾಕೋಲೆಟ್ ಕೊಡುತ್ತಿದ್ದರು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಬರೀ ಡ್ರೈಫ್ರೂಟ್ಸ್ ಮತ್ತು ಹಣ್ಣುಗಳನ್ನು ಕೊಡುತ್ತಿದ್ದರು. ಸ್ವಾಮೀಜಿ ಕೊಡುತ್ತಿದ್ದ ಹಣ್ಣಿನಲ್ಲಿ ಅಮಲು ಭರಿಸುವ ಅಂಶ ಇರುತ್ತಿತ್ತಾ ಎಂಬುದು ನನಗೆ ಗೊತ್ತಿಲ್ಲ. ಭಕ್ತಾಧಿಗಳು ಬಂದಾಗ ನಮಗೆ ಅಲ್ಲಿಯೇ ಹಣ್ಣು, ಡ್ರೈಫ್ರೂಟ್ಸ್ ಕೊಡುತ್ತಿದ್ದರು. ನಾವು ಅವುಗಳನ್ನು ಅಲ್ಲಿಯೇ ತಿಂದು ಬರುತ್ತಿದ್ದೆವು. ಇದನ್ನು ಸ್ವಾಮೀಜಿ ದರ್ಬಾರ್ ಹಾಲ್‌ನಲ್ಲಿ ಕೊಡುತ್ತಿದ್ದರು. ಇಬ್ಬರು ಬಾಲಕಿಯರನ್ನು ಸ್ವಾಮೀಜಿ ಹತ್ತಿರ ಕಳಿಸಲು ನಾನು ಟೈಂ ಟೇಬಲ್ ಮಾಡಿರಲಿಲ್ಲ. ಸ್ವಾಮೀಜಿ ಸೇವೆ ಮಾಡಲು ಕಳುಹಿಸಿಕೊಟ್ಟಿರುವುದಿಲ್ಲ. ಸ್ವಾಮೀಜಿ ರೂಂ ಒಳಗಡೆ ಬಾಲಕಿಯರು ಹೋದರೆ ಬಾಗಿಲ ಬಳಿ ಯಾರಾದರೂ ಕಾವಲು ಕಾಯುತ್ತಿದ್ದರಾ ಎಂಬುದೂ ಗೊತ್ತಿಲ್ಲ. ನನ್ನ ಹಾಲ್‌ನಲ್ಲಿರುವ ರೂಂನಿಂದ ಸ್ವಾಮೀಜಿ ಕೊಠಡಿಯನ್ನು ಮಕ್ಕಳಿಗೆ ತೋರಿಸಿಲ್ಲ. ನಾನು ಆ ರೂಂ ನೋಡಿಲ್ಲ. ನನ್ನನ್ನು ಕರೆದುಕೊಂಡು ಹೋದರೆ ಹಾಸ್ಟೆಲ್‌ನಲ್ಲಿ ನನಗೆ ಕೊಟ್ಟಿದ್ದ ವಾರ್ಡನ್ ರೂಂ ತೋರಿಸುತ್ತೇನೆ. ಅಲ್ಲಿ ಮಕ್ಕಳಿಗೆ ಹೊಡೆಯುವ ಸ್ಕೇಲ್ ಅನ್ನು ರೂಂನಲ್ಲಿಯೇ ಇಟ್ಟಿದ್ದು, ಅದನ್ನು ತೋರಿಸುತ್ತೇನೆ ಎಂದು ರಶ್ಮಿ ನೀಡಿರುವ ಹೇಳಿಕೆಯನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.