Site icon Vistara News

ವಿಸ್ತಾರ ಭಾಗ- 1 | ಹೊಸ ತಿಳಿವಿನ ಬಾಗಿಲು | ನೈತಿಕ ಶುದ್ಧತೆಯ ಬರಹಗಳು; ಹರಿಪ್ರಕಾಶ್‌ ಕೋಣೆಮನೆ ಅಂಕಣಗಳ ಸಂಗ್ರಹ

vistara book 1

| ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ

ಪತ್ರಿಕೋದ್ಯಮದ ಬರೆಹವೆಂದರೆ ಒಂದು ಬಗೆಯ ಅಸಿಧಾರಾವ್ರತ. ಆದರೆ, ಇದನ್ನು ಲೀಲಾವಿಲಾಸದಿಂದ ನಡೆಸಬಲ್ಲವರು ಕೆಲವರಿರುತ್ತಾರೆ. ನೈತಿಕ ಶುದ್ಧತೆಯು ಅವರ ಬರೆಹಕ್ಕೆ ಶಕ್ತಿಯನ್ನು ನೀಡುತ್ತದೆ. ನಾನು ಮೆಚ್ಚುವ ಪತ್ರಕರ್ತರಲ್ಲಿ ಹರಿಪ್ರಕಾಶ್ ಕೋಣೆಮನೆಯವರು ಒಬ್ಬರು.

ಅವರು ಸಾಮಾಜಿಕ-ರಾಜಕೀಯ ಹಾಗೂ ಸಾಂಸ್ಕೃತಿಕ ನೈತಿಕತೆಗೆ ಬೆಲೆಕೊಡುವವರು! ಇಲ್ಲಿಯ ಒಟ್ಟು ಬರೆಹಗಳಲ್ಲಿ ʻನೈತಿಕತೆಯ ವಿಸ್ತಾರ’ ನಮಗೆ ಕಂಡು ಬರುತ್ತದೆ. ಶುದ್ಧನೈತಿಕತೆಯ ಒಡಲೊಳಗೆ ಇದ್ದ ಟಿ.ಎನ್.ಶೇಷನ್, ನ್ಯಾಯಮೂರ್ತಿ ಎನ್.ವೆಂಕಟಾಚಲ ಇಂಥವರನ್ನು ಕುರಿತ ಬರೆಹಗಳಲ್ಲಿ ನೈತಿಕ ಮೌಲ್ಯವನ್ನು ಎತ್ತಿ ಹೇಳುತ್ತಾರೆ. ಅದೇ ಸಮಯದಲ್ಲಿ ಸರ್ವೋನ್ನತ ನ್ಯಾಯಾಲಯದ ನ್ಯಾಯಮೂರ್ತಿ ಗೊಗೊಯ್ ಅವರ ನೈತಿಕ ಪಾವಿತ್ರ್ಯವನ್ನೂ ಪ್ರಶ್ನಿಸುತ್ತಾರೆ. ಇಲ್ಲಿ ಲಾಕ್‍ಡೌನ್ ಸಮಯದ ವಿವರಗಳಿದ್ದು, ಸುರಕ್ಷತೆಯ ಪ್ರಮೇಯವನ್ನು ಜನಕ್ಕೆ ನೀಡುತ್ತಾರೆ. ನಾವೀಗ ಜಾಗತೀಕರಣದ ಕಬಂಧದಲ್ಲಿ ಇದ್ದೇವೆ. ಇನ್ನೊಂದೆಡೆ ಸ್ವದೇಶಿ ಪರಿಕಲ್ಪನೆಯೂ ನಮ್ಮ ಬೆನ್ನ ಹಿಂದಿದೆ. ಇವೆರಡರಲ್ಲಿ ನಮ್ಮ ಆಯ್ಕೆ ಯಾವುದು? ಇಂಥ ಮಹತ್ತ್ವದ ಪ್ರಶ್ನೆಗಳನ್ನು ಇವರು ಎತ್ತಬಲ್ಲರು!

ಹರಿಪ್ರಕಾಶ್ ಕೋಣೆಮನೆಯವರು ವ್ಯಕ್ತಿ, ಸಮುದಾಯ, ಸಮಾಜ, ರಾಜ್ಯ, ರಾಷ್ಟ್ರ-ಇವುಗಳೊಳಗಿನ ಹತ್ತಾರು ವಿಷಯಗಳನ್ನು ಇಲ್ಲಿಯ ಲೇಖನಗಳಲ್ಲಿ ಪ್ರಸ್ತಾಪಿಸಿದ್ದಾರೆ. ಇಲ್ಲಿ ವಿಶ್ಲೇಷಣೆ ಉಂಟೇ ಹೊರತು, ತೀರ್ಮಾನಕ್ಕೆ ಅವರು ಹೋಗುವುದಿಲ್ಲ. ಕೋಣೆಮನೆಯವರು ಎಡವನ್ನೂ ನೋಡಬಲ್ಲರು; ಬಲವನ್ನೂ ಬಲ್ಲರು. ಆದರೆ, ಇವೆರಡರ ನಡುವಿನ ಆ ತತ್ತ್ವದ ಹುಡುಕಾಟವೂ ಇಲ್ಲುಂಟು. ಇದು ಬುದ್ಧನು ತೋರಿಸಿದ ಮಧ್ಯಮ ಮಾರ್ಗವೇ? ಬರೆಹಗಳ ವಿಸ್ತಾರ ಸಂಸ್ಕøತದಲ್ಲಿ ಹೇಳುವಂತೆ ʻನಾತಿ ಹ್ರಸ್ವಂ ನಾತಿ ದೀರ್ಘಂʼ ಇದು ಅವರು ವಿಶ್ಲೇಷಣೆಗೆ ಎತ್ತಿಕೊಳ್ಳುವ ವಸ್ತುವಿಗೂ ಭಾಷೆಗೂ ಅಭಿವ್ಯಕ್ತಿಯ ಕ್ರಮಕ್ಕೂ ಚೆನ್ನಾಗಿ ಅನ್ವಯಗೊಳ್ಳುತ್ತದೆ. ಇದು ʼವಿಸ್ತಾರʼದ ಒಟ್ಟು ತಿರುಳೆಂದು ನಾನು ಬಗೆಯುತ್ತೇನೆ. ಇಲ್ಲಿಯ ಬರೆಹಗಳು ಎಲ್ಲವನ್ನು ಒಳಗೊಳ್ಳುವ ವಿಚಾರಧಾರೆಗಳನ್ನು ಹೊಕ್ಕು ಬಳಕೆ ಮಾಡಿಕೊಂಡಿವೆ. ವಿಸ್ತಾರದ ಬೆಳಕನ್ನು ಓದುಗರಿಗೆ ತೋರಿಸುತ್ತಲೇ ಅರ್ಥಪೂರ್ಣ ತಥ್ಯದತ್ತ ನಮ್ಮನ್ನು ಹೊಗಿಸುತ್ತಾರೆ.

(ಲೇಖಕರು ಹಿರಿಯ ವಿಮರ್ಶಕರು, ಸಂಸ್ಕೃತ ವಿವಿ ವಿಶ್ರಾಂತ ಕುಲಪತಿಗಳು)

ಕೃತಿ: ವಿಸ್ತಾರ, ಭಾಗ 1, ಹೊಸ ತಿಳಿವಿನ ಬಾಗಿಲು
ಲೇಖಕರು: ಹರಿಪ್ರಕಾಶ್‌ ಕೋಣೆಮನೆ
ಪ್ರಕಾಶನ: ವಿಸ್ತಾರ ಪ್ರಕಾಶನ, ಬೆಂಗಳೂರು
ಪುಟ: 218, ಬೆಲೆ: 225 ರೂ.
ವಿತರಣೆ ಹಾಗೂ ಮಾರಾಟ: ಸ್ನೇಹ ಬುಕ್‌ ಹೌಸ್‌ (ಸಂಪರ್ಕ ಸಂಖ್ಯೆ: 9845031335)

Exit mobile version