ಬೆಂಗಳೂರು: ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ…, ಬೆಳೆದಿದೆ ನೋಡಾ ಬೆಂಗಳೂರು.. ಮೊದಲಾದ ಹಾಡುಗಳ ಮೂಲಕ ನಾಡಿನ ಬಗ್ಗೆ ಪ್ರೀತಿ ಮೆರೆದ ಖ್ಯಾತ ಚಿತ್ರ ಸಾಹಿತಿ, ಸಿನಿಮಾ ನಿರ್ದೇಶಕ ಸಿ.ವಿ. ಶಿವಶಂಕರ್ (CV Shivashankar) ಇನ್ನಿಲ್ಲ.
ಗೀತ ರಚನೆಕಾರ, ನಿರ್ಮಾಪಕ ಮತ್ತು ನಿರ್ದೇಶಕರಾಗಿ ಕನ್ನಡ ಚಿತ್ರರಂಗವನ್ನು ಬೆಳೆಸಿದ ಸಿ.ವಿ .ಶಿವಶಂಕರ್ ಅವರು ಮಂಗಳವಾರ ಹೃದಯಾಘಾತದಿಂದ ಕೊನೆಯುಸಿರೆಳೆದರು. ಅವರಿಗೆ 90 ವರ್ಷವಾಗಿತ್ತು. ಅವರು ಕುಮಾರಸ್ವಾಮಿ ಲೇಔಟ್‌ನ ನಿವಾಸದಲ್ಲಿ ವಾಸವಾಗಿದ್ದು, ಹೃದಯಾಘಾತವಾದ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಬದುಕುಳಿಯಲಿಲ್ಲ ಎಂದು ಅವರ ಮಗ ವೆಂಕಟ್ ಭಾರದ್ವಾಜ್ ತಿಳಿಸಿದ್ದಾರೆ.
ಸಿ.ವಿ. ಶಿವಶಂಕರ್ ಅವರ ಹಿರಿಯಪುತ್ರ ವೆಂಕಟ್ ಭಾರದ್ವಾಜ್ ಸಿನಿಮಾ ನಿರ್ದೇಶಕರಾಗಿದ್ದಾರೆ. ಕಿರಿಯ ಪುತ್ರ ಲಕ್ಷ್ಮಣ್ ಕೂಡಾ ನಟರಾಗಿ ಗುರುತಿಸಿಕೊಂಡಿದ್ದಾರೆ.
ʻʻಮಧ್ಯಾಹ್ನ ಪೂಜೆ ಮಾಡಿದ್ದರು. ಊಟ ಮಾಡಿದ್ದರು. ಬಳಿಕ ಹಾರ್ಟ್ ಅಟ್ಯಾಕ್ ಆಗಿದೆ ಎಂದು ವೆಂಕಟ್ ತಿಳಿಸಿದ್ದಾರೆ. ಅವರ ಮೃತದೇಹದ ಅಂತ್ಯಕ್ರಿಯೆ ಬನಶಂಕರಿ ಚಿತಾಗಾರದಲ್ಲಿ ನಡೆಯಲಿದೆ.
ಚಿತ್ರರಂಗದ ಇತಿಹಾಸಕಾರ ಇನ್ನಿಲ್ಲ
ಸಿ.ವಿ. ಶಿವಶಂಕರ್ ಅವರು ಕೇವಲ ಚಿತ್ರ ಸಾಹಿತಿ, ನಿರ್ದೇಶಕ ಮಾತ್ರವಲ್ಲ, ಕನ್ನಡ ಚಿತ್ರರಂಗದ ಸಂಪೂರ್ಣ ಇತಿಹಾಸ ಬಲ್ಲವರಾಗಿದ್ದರು. ಅವರ ಅಗಲಿಕೆಯಿಂದ ಚಿತ್ರರಂಗದ ಒಂದು ದೊಡ್ಡ ಕೊಂಡಿ ಕಳಚಿಬಿದ್ದಂತಾಗಿದೆ. ಅವರಿಗೆ ವಯಸ್ಸು ತೊಂಬತ್ತು ಆಗಿದ್ದರೂ ಇನ್ನೂ ಯುವಕನಂತೆ ಓಡಾಡಿಕೊಂಡಿದ್ದರು.
ಬಾಲನಟರಾಗಿ ಬಂದು ಹೆಸರು ಮಾಡಿದ್ದರು
ತೀರಾ ಸಣ್ಣ ವಯಸ್ಸಿಗೇ ಚಿತ್ರರಂಗಕ್ಕೆ ಬಂದು ಬಾಲ ನಟರಾಗಿ ಹೆಸರು ಮಾಡಿದ್ದರು. ಸ್ಕೂಲ್ ಮಾಸ್ಟರ್, ರತ್ನಗಿರಿ ರಹಸ್ಯ, ಕೃಷ್ಣಗಾರುಡಿ, ಧರ್ಮವಿಜಯ, ಭಕ್ತವಿಜಯ, ಆಶಾ ಸುಂದರಿ, ವೀರಸಂಕಲ್ಪ ಚಿತ್ರಗಳಲ್ಲಿ ನಟಿಸಿದ್ದಾರೆ.
ಹಲವು ಸಿನಿಮಾಗಳ ನಿರ್ದೇಶಕ
ಅನೇಕ ಹಿರಿಯ ನಿರ್ದೇಶಕರ ಬಳಿ ಕೆಲಸ ಮಾಡಿ ಅನುಭವ ಪಡೆದು ನಂತರ ಮನೆಕಟ್ಟಿನೋಡು ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದರು. ಪದವೀಧರ, ನಮ್ಮ ಊರು, ಮಹಡಿಯ ಮನೆ, ಹೊಯ್ಸಳ, ಮಹಾ ತಪಸ್ವಿ, ವೀರಮಹಾದೇವ ಚಿತ್ರಗಳನ್ನು ನಿರ್ದೇಶನ ಮಾಡಿದರು. ಇವರದ್ದೇ ನಿರ್ದೇಶನದ ಕನ್ನಡ ಕುವರ ತಯಾರಾಗಿ ದಶಕಗಳು ಉರುಳಿದರೂ ಬಿಡುಗಡೆಯಾಗದೇ ಉಳಿದಿದೆ.
1994ರಲ್ಲಿ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದ ಸಿವಿಎಸ್ ಅವರ ಹೃದಯವಿಂದು ಸ್ತಂಭನಕ್ಕೆ ಒಳಗಾಗಿದೆ. ಬೆಂಗಳೂರು ಇಷ್ಟೊಂದು ಬೆಳೆಯುವುದಕ್ಕೆ ಮೊದಲೇ ʻಬೆಳೆದಿದೆ ನೋಡಾ ಬೆಂಗಳೂರುʼ ಎಂದು ಹಾಡು ಕಟ್ಟಿದ್ದು ಅವರ ಕಲ್ಪನಾ ಶಕ್ತಿಗೆ ಉದಾಹರಣೆ.
ಇದನ್ನೂ ಓದಿ: Death News: ಸಾವಿತ್ರಮ್ಮ ಪಟೇಲ್ ಪುಟ್ಟಪ್ಪ ನಿಧನ