ಮೈಸೂರು: ನಾಡಿನ ಖ್ಯಾತ ಸಾಹಿತಿ ಮತ್ತು ಪ್ರಖರ ವಿಮರ್ಶಕ ಪ್ರೊ. ಜಿ.ಎಚ್. ನಾಯಕ (GH Nayak) ಇನ್ನಿಲ್ಲ. ಅವರಿಗೆ 88 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲಸುತ್ತಿದ್ದ ಅವರು ಶುಕ್ರವಾರ (ಮೇ 26) ಮೈಸೂರಿನ ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದವರಾದ ಜಿ.ಎಚ್. ನಾಯಕ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ (Mysore University) ಕನ್ನಡ ಅಧ್ಯಾಪಕರಾಗಿ, ಮುಂದೆ ಪ್ರಾಧ್ಯಾಪಕರಾಗಿ (Kannada professor) ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ನಿವೃತ್ತಿ ಬಳಿಕ ಮೈಸೂರಿನ ಕುವೆಂಪು ನಗರದಲ್ಲಿ ನೆಲೆಸಿದ್ದ ಅವರು ಮೈಸೂರಿಗರೇ ಆಗಿದ್ದರು.
ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ ಪುರಸ್ಕೃತರಾಗಿದ್ದ ನಾಯಕರಿಗೆ ಪತ್ನಿ, ಸಾಮಾಜಿಕ ಹೋರಾಟಗಾರ್ತಿ ಮೀರಾ ನಾಯಕ. ಪುತ್ರಿ ದೀಪಾ ಇದ್ದಾರೆ.
ಅವರ ಬಾಳೇ ಒಂದು ಆತ್ಮಕಥನ
ಕನ್ನಡ ಸಾಹಿತ್ಯ ಲೋಕದಲ್ಲಿ ಜಿ.ಎಚ್.ನಾಯಕ ಎಂದು ಚಿರಪರಿಚಿತರಾಗಿದ್ದ ಅವರ ಪೂರ್ಣ ಹೆಸರು ಗೋವಿಂದರಾಯ ಹಮ್ಮಣ್ಣ ನಾಯಕ. ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದಲ್ಲಿ. 1935ರ ಸೆಪ್ಟೆಂಬರ್ 18ರಂದು.
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬಹುಕಾಲ ಅಧ್ಯಾಪಕರಾಗಿದ್ದ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯ (1994-95) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕಾವ್ಯಾಧ್ಯಯನ ಪೀಠ (1996-97)ಗಳ ಸಂದರ್ಶಕ ಪ್ರಾಧ್ಯಾಪಕರೂ ಆಗಿದ್ದರು. ಅವರು ವಿಮರ್ಶೆ ಜತೆಗೆ ಸಂಪಾದನೆ, ಕನ್ನಡ ಸಣ್ಣಕಥೆಗಳು, ಹೊಸಗನ್ನಡ ಕವಿತೆಗಳನ್ನೂ ರಚಿಸಿದ್ದರು. ಬಾಳು ಎನ್ನುವುದು ಅವರ ಆತ್ಮಕಥನ.
ಜಿ.ಎಚ್ ನಾಯಕರ ವಿಮರ್ಶಾ ಕೃತಿಗಳು ಇವು
ಸಮಕಾಲೀನ (1973), ಅನಿವಾರ್ಯ (1980), ನಿರಪೇಕ್ಷ (1984), ನಿಜದನಿ (1988), ಸಕಾಲಿಕ (1995), ಗುಣಗೌರವ (2002), ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ (2002), ದಲಿತ ಹೋರಾಟ: ಗಂಭೀರ ಸವಾಲುಗಳು (2004), ಸ್ಥಿತಿಪ್ರಜ್ಞೆ (2007), ಮತ್ತೆ ಮತ್ತೆ ಪಂಪ (2008), ಸಾಹಿತ್ಯ ಸಮೀಕ್ಷೆ (2009). ಉತ್ತರಾರ್ಧ (2011) ಜಿ.ಎಚ್. ನಾಯಕ ವಿಮರ್ಶಾ ಕೃತಿಗಳು.
ಸಂಪಾದಿತ ಕೃತಿಗಳು ಹಲವು
ಕನ್ನಡ ಸಣ್ಣ ಕಥೆಗಳು (1978), ಹೊಸಗನ್ನಡ ಕವಿತೆ (1985), ಶತಮಾನದ ಕನ್ನಡ ಸಾಹಿತ್ಯ ಸಂ. 2 (2000) ಶತಮಾನದ ಕನ್ನಡ ಸಾಹಿತ್ಯ ಸಂ. 2 (2009) ಕೃತಿಗಳನ್ನು ಸಂಪಾದಿಸಿದ್ದಾರೆ.
ಪಡೆದ ಪ್ರಶಸ್ತಿಗಳು ಹಲವಾರು
-ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಸಾಹಿತ್ಯ ವಿಮರ್ಶೆ ಪ್ರಶಸ್ತಿ ‘ನಿರಪೇಕ್ಷ’ (1985)
– ವಿ.ಎಂ. ಇನಾಂದರ್ ವಿಮರ್ಶೆ ಪ್ರಶಸ್ತಿ ‘ನಿಜದನಿ’ (1989)
-ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (19990)
– ಕರ್ನಾಟಕ ರಾಜ್ಯ ಪ್ರಶಸ್ತಿ (2000), ಜಿ. ಎಸ್. ಶಿವರುದ್ರಪ್ಪ ವಿಮರ್ಶೆ ಪ್ರಶಸ್ತಿ (2004)
– ಶಿವರಾಮ ಕಾರಂತ ಪ್ರಶಸ್ತಿ (20009), ಪಂಪ ಪ್ರಶಸ್ತಿ (2010)
-ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಡಿ. ಲಿಟ್ ಪದವಿ (2014),
-ತೀನಂಶ್ರೀ ವಿಮರ್ಶೆ ಪ್ರಶಸ್ತಿ (2014).
ಅಮೆರಿಕ, ಇಂಗ್ಲೆಂಡ್, ಚೀನಾದಲ್ಲೂ ಅಧ್ಯಾಪನ
ಅಮೆರಿಕದ ಮ್ಯಾಡಿಸನ್ ವಿಸ್ಕಾನ್ಸಿನ್ ವಿಶ್ವವಿದ್ಯಾನಿಲಯ (1983) ಹಾಗೂ ಅಮೆರಿಕ ಸರ್ಕಾರದ ಅತಿಥಿಯಾಗಿ ಅಮೆರಿಕ (2000) ಪ್ರವಾಸ ಮಾಡಿದ್ದ ಅವರು ಇಂಗ್ಲೆಂಡ್ (2000) ಮತ್ತು ಚೀನಾ (2006)ಗಳಿಗೂ ಭೇಟಿ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಾಪ
ಕನ್ನಡದ ಖ್ಯಾತ ವಿಮರ್ಶಕ, ಪ್ರಾಧ್ಯಾಪಕ ಜಿ.ಎಚ್.ನಾಯಕ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಸೂರ್ವೆಯಲ್ಲಿ ಜನಿಸಿದ್ದ ಜಿ.ಎಚ್.ನಾಯಕರು. ಪ್ರಾಧ್ಯಾಪಕರಾಗಿ ನಿವೃತ್ತರಾದ ನಂತರ ಅವರು ಮೈಸೂರಿನಲ್ಲಿಯೇ ನಿವೃತ್ತ ಜೀವನ ನಡೆಸುತ್ತಿದ್ದರು. ಕನ್ನಡದ ಅತ್ಯುತ್ತಮ ವಿಮರ್ಶಕರಲ್ಲೊಬ್ಬರಾಗಿದ್ದ ಅವರ ಅನೇಕ ಪುಸ್ತಕಗಳು ಪ್ರಕಟವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿ.ಎಂ.ಇನಾಂದಾರ ಸ್ಮಾರಕ ಬಹುಮಾನ ಲಭಿಸಿವೆ ಎಂದು ತಿಳಿಸಿದ್ದಾರೆ. ದೇವರು ಮೃತರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಕುಟುಂಬದವರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ : Death News : ಕೋಟ ಡಾ. ಶಿವರಾಮ ಕಾರಂತರ ಆಪ್ತ ಸಹಾಯಕಿಯಾಗಿದ್ದ ಮಾಲಿನಿ ಮಲ್ಯ ನಿಧನ