ಮಂಡ್ಯ: ಕೆಆರ್‌ಎಸ್ ಒಡಲಿಗೆ ಹಗಲಿನಲ್ಲಿಯೇ ಕನ್ನ ಹಾಕುವವರ ವಿರುದ್ಧ ಕೊನೆಗೂ ಕ್ರಮ ಕೈಗೊಳ್ಳಲು ಮುಂದಾಗಲಾಗಿದೆ. ಗಣಿಗಾರಿಕೆ ಬಳಿಕ ಮರಳು, ಮಣ್ಣು ದಂಧೆಕೋರರ ಆಕ್ರಮಣದಿಂದ ಕೆಆರ್‌ಎಸ್ ಹಿನ್ನೀರಿನ ಪ್ರದೇಶದಲ್ಲಿ ನಿರ್ಮಾಣವಾಗಿದ್ದ ಆತಂಕದ ವಾತಾವರಣಕ್ಕೆ ಬ್ರೇಕ್ ಹಾಕಲಾಗಿದೆ. ಅಕ್ರಮ ಮಣ್ಣು ಸಾಗಾಟ ವಿಚಾರವನ್ನು ವಿಸ್ತಾರ ನ್ಯೂಸ್ (Vistara Impact) ವರದಿ ಮಾಡಿದ ಬೆನ್ನಲ್ಲೇ ಎಫ್‌ಐಆರ್ ದಾಖಲಿಸಲು ಎಂಜಿನಿಯರ್ ಸೂಚನೆ ನೀಡಿದ್ದಾರೆ.
ಈ ಕುರಿತು ಮಂಡ್ಯದಲ್ಲಿ ಕೆಆರ್‌ಎಸ್‌ನ ಎಸ್ಇ ಆನಂದ್ ಪ್ರತಿಕ್ರಿಯೆ ನೀಡಿದ್ದು, ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ನಮ್ಮ ಗಮನಕ್ಕೆ ಬಂದ ಕೂಡಲೇ ಪೊಲೀಸರ ಜತೆಗೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಅಲ್ಲಿ ತೆಗೆಯಲಾಗಿರುವ ಮಣ್ಣನ್ನು ವಾಪಸ್ ತೆಗೆದುಕೊಂಡು ಅದೇ ಸ್ಥಳದಲ್ಲಿ ಹಾಕಲಾಗಿದೆ ಎಂದು ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: POCSO Case: ಬಾಲಕಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದವನಿಗೆ 25 ವರ್ಷ ಜೈಲು
ಹಿನ್ನೀರಿನ ಪ್ರದೇಶ ನೀರಾವರಿ ಇಲಾಖೆ, ಕಂದಾಯ ಇಲಾಖೆ, ಭೂ ಗಣಿ ಮತ್ತು ವಿಜ್ಞಾನ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಈ ಬಗ್ಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ನಮ್ಮ ವ್ಯವಸ್ಥಾಪಕ ನಿರ್ದೇಶಕರ ಗಮನಕ್ಕೂ ತರಲಾಗಿದೆ. ಮಣ್ಣು ತೆಗೆಯುವುದನ್ನು ನಿಲ್ಲಿಸಲಾಗಿದೆ. ಮುಂದೆ ಈ ರೀತಿ ಆಗದಂತೆ ನಿಗಾ ವಹಿಸಲಾಗುವುದು ಎಂದು ಆನಂದ್ ಹೇಳಿದ್ದಾರೆ.
ನೀರು ಕಡಿಮೆಯಾದ ಸಂದರ್ಭದಲ್ಲಿ ಈ ರೀತಿ ಮಣ್ಣು ತೆಗೆಯುತ್ತಾರೆ. ಕಲ್ಲು, ಮಣ್ಣನ್ನು ತೆಗೆಯುವುದರಿಂದ ತಾಂತ್ರಿಕವಾಗಿ ಡ್ಯಾಂಗೆ ತೊಂದರೆ ಆಗುತ್ತದೆಯೇ ಎಂಬ ವಿಚಾರವು ತಾಂತ್ರಿಕವಾಗಿ ಸಾಬೀತಾಗಿಲ್ಲ. ಹೀಗಾಗಿ ಈ ಬಗ್ಗೆ ಏನೂ ಹೇಳಲು ಬರುವುದಿಲ್ಲ. ಆದರೆ, ಅನುಮತಿ ಇಲ್ಲದೆ ತೆಗೆಯುತ್ತಿರುವುದರಿಂದ ಕಾನೂನಿಗೆ ವಿರುದ್ಧವಾದದ್ದಾಗಿದೆ ಎಂದು ಆನಂದ್ ಪ್ರತಿಕ್ರಿಯೆ ನೀಡಿದ್ದಾರೆ.
ಬೇಬಿ ಬೆಟ್ಟದಲ್ಲಿ ಬ್ಲಾಸ್ಡ್ ಮಾಡಿ ಗಣಿಗಾರಿಕೆ ನಡೆಯುವುದರಿಂದ ಡ್ಯಾಂ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಟ್ರಯಲ್ ಬ್ಲಾಸ್ಟ್ ಮಾಡಲು ಮುಂದಾಗಿದ್ದೆವು. ಆದರೆ, ವಿರೋಧ ಬಂದ ಹಿನ್ನೆಲೆಯಲ್ಲಿ ಅದನ್ನೂ ಮಾಡಲಾಗಿಲ್ಲ. ಟ್ರಯಲ್ ಬ್ಲಾಸ್ಟ್ ಅನ್ನು ಸಹ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಕಲ್ಲು ಮಣ್ಣು ತೆಗೆಯುವುದರಿಂದ ಡ್ಯಾಂ ಮೇಲೆ ನೀರಿನ ಒತ್ತಡ ಆಗುವುದಿಲ್ಲ. ಹೀಗೆ ಮಣ್ಣು ತೆಗೆದುಕೊಂಡು ಹೋಗುತ್ತಿದ್ದ ಸುಮಾರು 10 ರಿಂದ 12 ವಾಹನಗಳು ಸಿಕ್ಕಿದ್ದವು. ನಮ್ಮ ಅಧಿಕಾರಿಗಳು ಪರಿಶೀಲನೆ ನಡೆಸಿ ವಿವರ ಸಮೇತ ಕ್ರಮ ವಹಿಸಲು ಪತ್ರ ಬರೆದಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Road Accident: ಬೆಳಗಾವಿಯಲ್ಲಿ ಭೀಕರ ಅಪಘಾತಕ್ಕೆ ಒಬ್ಬ ಬಲಿ; ಹತ್ತಕ್ಕೂ ಹೆಚ್ಚು ಜನ ಗಂಭೀರ
ದೂರು ದಾಖಲು
ಮಣ್ಣು ಸಾಗಿಸಿದವರ ವಿರುದ್ಧ ಎಫ್ಐಆರ್ ದಾಖಲಿಸಲು ಪೊಲೀಸರಿಗೆ ದೂರು ನೀಡಲಾಗಿದೆ. ಮಣ್ಣು ಸಾಗಿಸುವ ವಿಚಾರ ಗೊತ್ತಾದ ಕೂಡಲೇ ಅಧಿಕಾರಿಗಳು ತೆರಳಿ ಕ್ರಮ ವಹಿಸಿದ್ದಾರೆ. ಈ ವಿಚಾರದಲ್ಲಿ ನಮ್ಮ ಅಧಿಕಾರಿಗಳಿಂದ ಕರ್ತವ್ಯ ಲೋಪ ಆಗಿಲ್ಲ ಎಂದು ಆನಂದ್ ಸ್ಪಷ್ಟನೆ ನೀಡಿದ್ದಾರೆ.