ಬೆಂಗಳೂರು: ಇಷ್ಟು ದಿನ ಕೋವಿಡ್ ಕಾರಣದಿಂದ ಹೊಟೇಲ್ ಉದ್ಯಮ ತತ್ತರಿಸಿ ಹೋಗಿತ್ತು. ಆದ್ರೆ ಈಗ ಜನರ ಅನುಕೂಲಕ್ಕಾಗಿ ಮಧ್ಯರಾತ್ರಿ 1 ಗಂಟೆವರೆಗೆ ಹೊಟೇಲ್ ತೆರೆದಿರುವದಕ್ಕೆ ಅನುಮತಿ ಸಿಕ್ಕಿದೆ. ಪೊಲೀಸ್ ಕಮಿಷನರ್ ನೀಡಿದ ಅನುಮತಿಯಿಂದ ಹೊಟೇಲ್ ಮಾಲೀಕರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಹೋಟೆಲ್ ಮಾಲೀಕರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರು. ಮುಂಬೈ, ದೆಹಲಿಯಂತಹ ನಗರಗಳಲ್ಲಿ ಹೋಟೆಲ್‌ಗಳು 24/7 ಓಪನ್ ಇರಲು ಸರ್ಕಾರದ ಅನುಮತಿ ಇರುವಂತೆಯೇ ಬೆಂಗಳೂರಿನಲ್ಲೂ ಅವಕಾಶ ನೀಡಬೇಕು ಎಂದು ಪೊಲೀಸ್ ಇಲಾಖೆಯನ್ನು ಹೋಟೆಲ್ ಮಾಲೀಕರು ಒತ್ತಾಯಿಸಿದ್ದರು. ಹೋಟೆಲ್ ಸೇರಿ ಎಲ್ಲ ಉದ್ದಿಮೆಗಳನ್ನೂ ದಿನದ 24 ಗಂಟೆಯೂ ತೆರೆಯಲು ಅವಕಾಶ ನೀಡಿ 2019ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಅನುಗುಣವಾಗಿ ಅವಕಾಶ ನೀಡಿ ಎಂಬ ಒತ್ತಾಯವನ್ನು ಮಾಡಿದ್ದರು.
ಹೋಟೆಲ್ ಮಾಲೀಕರ ಮನವಿಯನ್ನು ಸ್ವೀಕರಿಸಿ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಹೋಟೆಲ್ ಓಪನ್ ಇರುವುದಕ್ಕೆ ತಥಾಸ್ತು ಎಂದಿದ್ದಾರೆ. ಹೋಟೆಲ್‌ನಲ್ಲಿ 10 ಜನರಿಗಿಂತ ಹೆಚ್ಚು ಸಿಬ್ಬಂದಿ ಇದ್ದರೆ ಮಾತ್ರ ಹೊಟೇಲ್ ತೆರೆದಿರಬೇಕು ಎಂದು ಹೇಳಿದ್ದಾರೆ. ಗ್ರಾಹಕರ ಅನುಕೂಲಕ್ಕಾಗಿ ಹೊಟೇಲ್‌ನಲ್ಲಿ ಸೇವೆ ಲಭ್ಯವಿರಲಿದೆ ಎಂದು ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಇದೇ ವೇಳೆ ನಿಸರ್ಗ ಹೋಟೆಲ್‌ನ ಮಾಲೀಕರಾದ ಕೃಷ್ಣರಾಜು ಮಾತನಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟು ದಿನ ರಾತ್ರಿ ಹೊತ್ತು ಹೋಟೆಲ್ ತೆರೆದಿರದಂತೆ ಪೊಲೀಸರು ಕಿರಿಕಿರಿ ಮಾಡುತ್ತಿದ್ದರು. ಇದರಿಂದ ಹೋಟೆಲ್ ಉದ್ಯಮಕ್ಕೆ ತುಂಬಾ ನಷ್ಟವಾಗುತ್ತಿತ್ತು. ಈ ಬಗ್ಗೆ ಪೊಲೀಸ್ ಕಮಿಷನರ್‌ಗೆ ಮನವಿ ನೀಡಲಾಗಿದ್ದು, ಉತ್ತಮ ಸ್ಪಂದನೆ ಬಂದಿದ್ದು ಖುಷಿಯ ವಿಚಾರ ಎಂದು ಹೇಳಿದ್ದಾರೆ. ಪೊಲೀಸರಿಂದ ತೊಂದರೆ ಆಗದಂತೆ ಪ್ರತಾಪ್ ರೆಡ್ಡಿ ಭರವಸೆ ನೀಡಿದ್ದಾರೆ ಎಂದು ಕೃಷ್ಣರಾಜು ಖುಷಿಪಟ್ಟಿದ್ದಾರೆ.
ಇದನ್ನೂ ಓದಿ: ಸರ್ಕಾರ ಕೊಟ್ಟರೂ ಪೊಲೀಸರು ಕೊಡಲಿಲ್ಲ: ಬೆಂಗಳೂರಿನಲ್ಲಿ 24/7 ಹೋಟೆಲ್ ನಡೆಸಲು ಅನುಮತಿಗೆ ಮನವಿ