Site icon Vistara News

NPS News | ಎನ್‌ಪಿಎಸ್‌ ರದ್ದುಪಡಿಸಲು ಒತ್ತಾಯಿಸಿ ಸರ್ಕಾರಿ ನೌಕರರ ಬೃಹತ್‌ ಪ್ರತಿಭಟನೆ ಶುರು

NPS News

ಬೆಂಗಳೂರು: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್‌) ರದ್ದುಪಡಿಸಿ, ಹಳೆಯ ಪಿಂಚಣಿ ಯೋಜನೆ(ಒಪಿಎಸ್‌) ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರ ಸಂಘ ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ಬೃಹತ್ತ ಪ್ರತಿಭಟನೆ (NPS News) ಆರಂಭಗೊಂಡಿದೆ.

ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿರುವ ಸರ್ಕಾರಿ ನೌಕರರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ನೌಕರರ ಸಂಧ್ಯಾಕಾಲದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸಲು ಎನ್‌ಪಿಎಸ್‌ ರದ್ದು ಪಡಿಸಿ, ಒಪಿಎಸ್‌ ಜಾರಿಗೊಳಿಸಬೇಕು. ಅಲ್ಲಿಯವರೆಗೂ ಈ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನೌಕರರು ಘೋಷಿಸಿದ್ದಾರೆ. ಒಪಿಎಸ್‌ ಜಾರಿಗೆ ಒತ್ತಾಯಿಸುವ ಘೋಷಣೆಗಳನ್ನು ಹೊಂದಿರುವ ಟೀ ಶರ್ಟ್‌ ಮತ್ತು ಬಾವುಟವನ್ನು ಹಿಡಿದಿರುವ ನೌಕರರು ನಿರಂತರವಾಗಿ ಘೋಷಣೆ ಕೂಗುತ್ತಿದ್ದಾರೆ.

ಪ್ರತಿಭಟನೆ ಆರಂಭಕ್ಕೂ ಮೊದಲು ಮಾತನಾಡಿದ ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರ ಸಂಘದ ಅಧ್ಯಕ್ಷ ಶಾಂತರಾಮ, ಇದು ʼಮಾಡು ಇಲ್ಲವೇ ಮಡಿʼ ಹೋರಾಟ. 2014ರಿಂದ ನೂತನ ಪಿಂಚಣಿ ಯೋಜನೆ ವಿರುದ್ಧ ಹೋರಾಟ ನಡೆಸಿಕೊಂಡೇ ಬರಲಾಗಿದೆ. ಆದರೆ ಸರ್ಕಾರ ಈ ಬಗ್ಗೆ ಗಮನ ನೀಡಿಲ್ಲ. ಹೀಗಾಗಿ ಸರ್ಕಾರ ಎನ್‌ಪಿಎಸ್‌ ರದ್ದುಪಡಿಸುವುದಾಗಿ ಪ್ರಕಟಿಸುವವರೆಗೂ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಘೋಷಿಸಿದ್ದಾರೆ.

ಈಗಾಗಲೇ ರಾಜಸ್ಥಾನ, ಚತ್ತೀಸ್‌ಗಢ, ಜಾರ್ಖಂಡ್, ಪಂಜಾಬ್‌, ಹಿಮಾಚಲ ಪ್ರದೇಶ ರಾಜ್ಯ ಸರ್ಕಾರಗಳು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವುದಾಗಿ ಪ್ರಕಟಿಸಿವೆ. ರಾಜ್ಯದಲ್ಲಿಯೂ ಎನ್‌ಪಿಎಸ್‌ ರದ್ದಾಗಿ ಒಪಿಎಸ್‌ ಜಾರಿಗೆ ಬರಬೇಕು. ಅಲ್ಲಿಯವರೆಗೂ ಈ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಶಾಂತರಾಮ ಹೇಳಿದಾರೆ.

ರಾಜ್ಯಾದ್ಯಂತ ಪ್ರತಿಭಟನೆ
ತುಮಕೂರು, ಕೋಲಾರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿಯೂ ಸರ್ಕಾರಿ ನೌಕರರು ಎನ್‌ಪಿಎಸ್‌ ರದ್ದಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಪ್ರತಿಭಟನೆ ನಡೆಸುತ್ತಿರುವ ನೌಕರರು, ಬೆಂಗಳೂರಿನಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗೆ ಬೆಂಬಲ‌ ಸೂಚಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಕೆ.ಎನ್.ರಾಜಣ್ಣ ನೌಕರರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ |NPS News | ಎನ್‌ಪಿಎಸ್‌ ರದ್ದು; ಹಿಮಾಚಲ ಪ್ರದೇಶದಂತೆ ರಾಜ್ಯದಲ್ಲಿಯೂ ಚುನಾವಣಾ ವಿಷಯವಾಗಲಿದೆಯೇ?

Exit mobile version