ವಿಧಾನ ಪರಿಷತ್(ಬೆಳಗಾವಿ): ಹೊಸ ಪಿಂಚಣಿ ಯೋಜನೆಯನ್ನು (NPS News) ರದ್ದುಗೊಳಿಸಿ, ಈ ಹಿಂದಿನಂತೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕು ಎಂಬ ಹೋರಾಟದ ಕುರಿತು ಸರ್ಕಾರ ನಕಾರಾತ್ಮಕ ಪ್ರತಿಕ್ರಿಯೆ ನೀಡಿದೆ.
ಎನ್‌ಪಿಎಸ್‌ನಿಂದ ಒಪಿಎಸ್‌ಗೆ ಬದಲಾವಣೆ ಕುರಿತಂತೆ ಸರ್ಕಾರದ ನಿಲುವೇನು ಎಂದು ಪರಿಷತ್‌ನಲ್ಲಿ ಡಾ. ತಳವಾರ್ ಸಾಬಣ್ಣ ಅವರ ಪ್ರಶ್ನೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಉತ್ತರ ನೀಡಿದ್ದಾರೆ.
೨೦೦೪ರಲ್ಲಿ ಕೇಂದ್ರ ಸರ್ಕಾರ ಪಿಂಚಣಿ ಕೊಡುವುದಕ್ಕೆ ಆಗುವುದಿಲ್ಲ ಎಂದು ಆದೇಶ ಹೊರಡಿಸಿತು. ೨೦೦೬ರಲ್ಲಿ ರಾಜ್ಯ ಸರ್ಕಾರವೂ ಕೂಡ ಅದೇ ನಿಯಮ ಮುಂದುವರಿಸಿತು. ಈಗ ಪ್ರತಿ ತಿಂಗಳು ೨೪ ಕೋಟಿ ರೂ.ನಷ್ಟು ಪಿಂಚಣಿಯನ್ನೇ ನೀಡಲಾಗುತ್ತಿದೆ.
ಸರ್ಕಾರಿ ಸೇವೆಗೆ ನೋಟಿಪಿಕೇಶನ್ ಹೊರಡಿಸಿದಾಗಲೇ, ಪಿಂಚಣಿ ನೀಡುವುದಿಲ್ಲ ಎಂಬ ನಿಬಂಧನೆ ವಿಧಿಸಲಾಗಿತ್ತು. ಅದನ್ನು ಓದಿಕೊಂಡೇ ಎಲ್ಲರೂ ಕೆಲಸಕ್ಕೆ ಸೇರಿದ್ದಾರೆ. ನೇಮಕಾತಿ ಆದಮೇಲೆ ಈಗ ಪಿಂಚಣಿ ಕೇಳುವುದು, ಕಾನೂನು ಸಚಿವನಾಗಿ ನನಗೆ ಸರಿ ಎನ್ನಿಸುತ್ತಿಲ್ಲ. ನಿಬಂಧನೆಗಳನ್ನು ಓದದೇ ಕೆಲಸಕ್ಕೆ ಸೇರಿಕೊಂಡೆವು ಎಂದು ಹೇಳಬಾರದು.
ಆದರೂ ಈ ಕುರಿತು ಪರಿಶೀಲನೆ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಮ್ಮ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಮಾಡುವುದಾಗಿ ತಿಳಿಸಿದ್ದಾರೆ. ಎನ್‌ಪಿಎಸ್‌ನಲ್ಲೇ ಒಪಿಎಸ್ ತರಬಹುದೇ ಎಂದೂ ನೋಡುತ್ತಾರೆ. ಇದಕ್ಕಾಗಿ ಸಮಿತಿ ರಚನೆ ಮಾಡಿ ಪರಿಶೀಲಿಸಲಾಗುತ್ತದೆ ಎಂದರು.
ಎನ್‌ಪಿಎಸ್ ಯೋಜನೆಯನ್ನು ರದ್ದುಪಡಿಸಿ ಹಳೆಯ ವ್ಯವಸ್ಥೆಗೆ ಮರಳಬೇಕು ಎಂದು ಎನ್‌ಪಿಎಸ್ ನೌಕರರ ಸಂಘದಿಂದ ಬೆಳಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಈಗಾಗಲೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಬೆಂಬಲ ನೀಡಿದ್ದಾರೆ. ಆದರೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ಭರವಸೆ ನೀಡಿಲ್ಲ. ಈ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಸಿ ತೀರ್ಮಾನಿಸಲಾಗುತ್ತದೆ ಎಂದಷ್ಟೆ ತಿಳಿಸಿದ್ದಾರೆ.
ಇದನ್ನೂ ಓದಿ | NPS News | ಎನ್‌ಪಿಎಸ್ ರದ್ದುಪಡಿಸುವ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ: ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಭೇಟಿ