Site icon Vistara News

OBC Reservation | ಪಟ್ಟುಹಿಡಿದ ವೀರಶೈವ ಸಮುದಾಯದಿಂದ ರಾಜ್ಯಾದ್ಯಂತ ಬೃಹತ್‌ ಪ್ರತಿಭಟನೆ

OBC Reservation

ಬೆಂಗಳೂರು: ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ (OBC Reservation) ಸಮುದಾಯವನ್ನು ಸೇರಿಸುವಂತೆ ವೀರಶೈವ ಲಿಂಗಾಯತರು ಪಟ್ಟುಹಿಡಿದಿದ್ದು, ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ಆಯೋಜಿಸಲಾಗಿದೆ.

ಈ ವೇಳೆ ಮಾತನಾಡಿದ ಈಶ್ವರ್‌ ಖಂಡ್ರೆ, ಒಬಿಸಿ ಪಟ್ಟಿಯಲ್ಲಿರುವ ನ್ಯೂನತೆ ಸರಿಪಡಿಸಬೇಕು. ವೀರಶೈವ ಸಮುದಾಯದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಹಕ್ಕನ್ನು ನೀಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಲಿದ್ದೇವೆ. ಕೂಡಲೇ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಒತ್ತಾಯಿಸಲಾಗುವುದು ಎಂದರು.

ಸಂವಿಧಾನದ 15(4) ಮತ್ತು 16(4) ಅನುಚ್ಛೇದಗಳು ಇತರೆ ಹಿಂದುಳಿದ ವರ್ಗಗಳ ಮೀಸಲಾತಿಗೆ ಅವಕಾಶ ಕಲ್ಪಿಸಿಕೊಡುತ್ತದೆ. ಇದಕ್ಕೆ ಅನುಗುಣವಾಗಿ 1990ರಿಂದ ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (OBC) ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಕಳೆದ 60 ವರ್ಷಗಳಿಂದ ವೀರಶೈವ ಲಿಂಗಾಯತ ಸಮುದಾಯವು ರಾಜ್ಯದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿದ್ದರೂ, ಈ ವರ್ಗವನ್ನು ಕೇಂದ್ರದ ಹಿಂದುಳಿದ ವರ್ಗಗಳ (OBC) ಪಟ್ಟಿಯಿಂದ ಹೊರಗಿಟ್ಟಿರುವುದಕ್ಕೆ ಯಾವುದೇ ಕಾರಣಗಳಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ OBC ಪಟ್ಟಿಗೆ ಸೇರಿಸುವಂತೆ ಕೂಗು ಕೇಳಿ ಬಂದಿದೆ.

11 ಸಂಸದರು ವೀರಶೈವ ಲಿಂಗಾಯತರೇ!

ಬಳ್ಳಾರಿಯ ಮುನ್ಸಿಪಲ್ ಕಾಲೇಜು ಆವರಣದಿಂದ ಡಿಸಿ ಕಚೇರಿಯವರೆಗೆ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಯಿತು. ವೀರಶೈವ ಲಿಂಗಾಯತ ಸಮಾಜದ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಕೇಂದ್ರದ ಮೀಸಲು ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು. ಹಿಂದುಳಿದ ವರ್ಗಗಳ ಸೌಲಭ್ಯ ಪಡೆಯಲು, ಕೇಂದ್ರದ ಮಹತ್ವದ ಹುದ್ದೆಗಳನ್ನು ಒಬಿಸಿ ಮೀಸಲು ಪಡೆಯಲು ನಮ್ಮ ಸಮುದಾಯಕ್ಕೆ ಒಬಿಸಿ ಮೀಸಲಾತಿ ಅವಶ್ಯ ಇದೆ ಎಂದರು. ರಾಜ್ಯ 25 ಸಂಸದರಲ್ಲಿ 11 ಜನ ವೀರಶೈವ ಲಿಂಗಾಯತರಿದ್ದು, ರಾಜ್ಯದಿಂದ ಮೂವರು ಸಚಿವರಿದ್ದು, ಅವರು ಸಹ ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಶಿವಮೊಗ್ಗದಲ್ಲಿ ಬೃಹತ್‌ ಮೆರವಣಿಗೆ

ಶಿವಮೊಗ್ಗದಲ್ಲೂ ಒಬಿಸಿ ಮೀಸಲಾತಿಗೆ ಆಗ್ರಹಿಸಿ ಗಾಂಧಿ ಪಾರ್ಕ್‌ನಿಂದ ಬೃಹತ್‌ ಮೆರವಣಿಗೆ ನಡೆಸಲಾಗುತ್ತಿದ್ದು, ಬಿ.ಎಚ್.ರಸ್ತೆ, ಶಿವಪ್ಪ ನಾಯಕ ವೃತ್ತ, ಅಮೀರ್ ಅಹ್ಮದ್ ವೃತ್ತದ ಮೂಲಕ ಬಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಗೆ ಬೆಕ್ಕಿನಕಲ್ಮಠದ ಬಸವಕೇಂದ್ರದ ಸ್ವಾಮೀಜಿ, ಜಡೆಬಮಠದ ಸ್ವಾಮೀಜಿ, ಬಿಳಕಿ ಮಠದ ಸ್ವಾಮೀಜಿಗಳು ಭಾಗಿಯಾಗಿದ್ದರು.

ಯಾದಗಿರಿಯಲ್ಲೂ ತೀವ್ರಗೊಂಡ ಒಬಿಸಿ ಮೀಸಲಾತಿ

ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಸಮುದಾಯವನ್ನು ಸೇರಿಸುವಂತೆ ಒತ್ತಾಯಿಸಿ, ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ವೀರಶೈವ ಲಿಂಗಾಯತ ಸಮುದಾಯ ಬಹಳ ಹಿಂದುಳಿದಿದ್ದು, ಕೂಡಲೇ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ | Reservation | ರಾಜ್ಯದಲ್ಲಿ ಮೀಸಲಾತಿ ಕಿಚ್ಚು: ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ

Exit mobile version