Site icon Vistara News

ನಾಳೆ ಕಲಬುರಗಿಯಲ್ಲಿ ಬಿಜೆಪಿಯಿಂದ ಒಬಿಸಿ ವಿರಾಟ್‌ ಸಮಾವೇಶ, 3 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ

BJP and Gujarat Election

ಕಲಬುರಗಿ: ಕರ್ನಾಟಕ ಬಿಜೆಪಿ ಅಕ್ಟೋಬರ್‌ ೩೦ರಂದು ಆಯೋಜಿಸಿರುವ ಬೃಹತ್ ಒಬಿಸಿ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದರಲ್ಲಿ ಒಟ್ಟು 3 ಲಕ್ಷದಷ್ಟು ಜನರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ತಿಳಿಸಿದ್ದಾರೆ.

ಶನಿವಾರ ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲೆ, ತಾಲೂಕುಗಳು, ಕಲ್ಬುರ್ಗಿ ಮತ್ತು ಸುತ್ತಲಿನ ಜಿಲ್ಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳಲಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿಯ ಎಲ್ಲ ಮೋರ್ಚಾಗಳ ಸಮಾವೇಶ ನಡೆಯಲಿದ್ದು, ಇದು ಮೊದಲ ಸಮಾವೇಶ ಎಂದು ರವಿಕುಮಾರ್‌ ತಿಳಿಸಿದರು.

ಒಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಡಾ. ಲಕ್ಷ್ಮಣ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ ಕುಮಾರ್ ಕಟೀಲ್ ಅವರು ಮುಖ್ಯ ಅತಿಥಿಗಳಾಗಿರುವರು. ಸಚಿವರಾದ ಗೋವಿಂದ ಕಾರಜೋಳ, ಆರ್.ಅಶೋಕ್, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು, ಕೇಂದ್ರದ ಸಚಿವರು, ರಾಜ್ಯದ ಸಚಿವರು, ಒಬಿಸಿ ಹಾಲಿ- ಮಾಜಿ ಶಾಸಕರು, ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಮೀಸಲು ಹೆಚ್ಚಳದ ಬಳಿಕ ಹೆಚ್ಚಿದ ಜನಪ್ರಿಯತೆ
ಮುಂದಿನ ಎಲ್ಲ ಸಮಾವೇಶಗಳಿಗೆ ಚೈತನ್ಯ ಮತ್ತು ದಾರಿಯನ್ನು ಈ ಸಮಾವೇಶ ತೋರಿಸಲಿದೆ. ರಾಜ್ಯದಲ್ಲಿ ಎಸ್‍ಸಿ, ಎಸ್‍ಟಿ ಮೀಸಲಾತಿ ಹೆಚ್ಚಳದ ಬಳಿಕ ಈ ಸಮುದಾಯದವರು ಬಿಜೆಪಿ ಸರಕಾರದ ಬದ್ಧತೆಯನ್ನು ಶ್ಲಾಘಿಸಿದ್ದಾರೆ. ಒಬಿಸಿ ಸಮುದಾಯದವರೂ ನಮ್ಮ ಕೇಂದ್ರ ಸರಕಾರದ ನಿರ್ಧಾರ ಕೈಗೊಂಡ ನಿರ್ಧಾರಗಳನ್ನು ಮೆಚ್ಚಿಕೊಂಡಿದ್ದಾರೆ. ಕೇಂದ್ರದಲ್ಲಿ ಒಬಿಸಿಯ 27 ಸಚಿವರಿದ್ದಾರೆ. 12 ಜನ ಎಸ್‍ಸಿ, ಎಸ್‍ಟಿ ಸಚಿವರಿದ್ದಾರೆ. ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದ್ದು, ನಿಗಮ, ಮಂಡಳಿ ಅಧ್ಯಕ್ಷತೆ ನೀಡಿದ್ದನ್ನು ಗಮನಿಸಿ ಬಿಜೆಪಿ ಎಸ್‍ಸಿ, ಎಸ್‍ಟಿ ಪರ, ಹಿಂದುಳಿದವರ ಪರ, ಸಾಮಾಜಿಕ ನ್ಯಾಯದ ಪರ ಎಂಬ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದರು.

ವಿರಾಟ್ ಸಮಾವೇಶಕ್ಕೆ ಎರಡು-ಮೂರು ತಿಂಗಳಿನಿಂದ ಪೂರ್ವಸಿದ್ಧತೆ ನಡೆದಿದೆ. ನಾನೂ ಮೂರ್ನಾಲ್ಕು ಜಿಲ್ಲೆಗಳಿಗೆ ಭೇಟಿ ಕೊಟ್ಟಿದ್ದೇವೆ. ಸಮಾವೇಶ ಯಶಸ್ವಿ ಆಗಲಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ತಿಳಿಸಿದರು. ಹಿಂದುಳಿದ ವರ್ಗಕ್ಕೆ ಬಿಜೆಪಿಯಿಂದ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದರು.

ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು ಅವರು ಮಾತನಾಡಿ, ಸಮಾವೇಶದಲ್ಲಿ 312 ಮಂಡಲಗಳ ಪ್ರತಿನಿಧಿಗಳು ಭಾಗವಹಿಸುತ್ತಾರೆ. ಪ್ರಮುಖ ಮತದಾರರು, ಪದಾಧಿಕಾರಿಗಳೂ ಬರಲಿದ್ದಾರೆ ಎಂದರು. ಬಿಜೆಪಿ, ಒಬಿಸಿ ಸಮುದಾಯಗಳಿಗೆ ವಿಶೇಷ ಪ್ರೋತ್ಸಾಹ ಕೊಡುತ್ತಿದೆ ಎಂದು ವಿವರಿಸಿದರು. ಕೇಂದ್ರ- ರಾಜ್ಯ ಸರಕಾರಗಳು ಒಬಿಸಿ ಸಮುದಾಯದ ಅಭಿವೃದ್ಧಿಗೆ ಕೈಗೊಂಡ ಯೋಜನೆಗಳ ಕುರಿತು ಮೆಚ್ಚುಗೆ ಸೂಚಿಸಿದರು.

ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಮುಖ್ಯ ವಕ್ತಾರ ಎಂ.ಜಿ.ಮಹೇಶ್, ಮಾಜಿ ಶಾಸಕ ಅಮರನಾಥ ಪಾಟೀಲ್, ಕಲ್ಬುರ್ಗಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಎಸ್. ಪಾಟೀಲ್, ಇತರ ಮುಖಂಡರು ಹಾಜರಿದ್ದರು.

Exit mobile version